ಉಡುಪಿ: ಮಣಿಪಾಲ ಟೆಕ್ನಾಲಜಿಸ್ ಲಿಮಿಟೆಡ್‌ನ ಡಿಜಿಟಲ್ ಸೊಲ್ಯೂಷನ್ಸ್ ಸಂಸ್ಥೆಯು ಬ್ರಹ್ಮಾವರದ ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ಕೋರ್ಸ್ ಆರಂಭಕ್ಕೆ ಸಂಬಂಧಿಸಿದಂತೆ ಬುಧವಾರ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ಒಡಂಬಡಿಕೆ ಮಾಡಿಕೊಂಡರು. ಒಡಂಬಡಿಕೆ ಪತ್ರಕ್ಕೆ ಎಸ್‌ಎಂಎಸ್ ಕಾಲೇಜು ಪ್ರಾಂಶುಪಾಲ ಡಾ ಮಂಜುನಾಥ ಉಡುಪ ಕೆ. ಹಾಗೂ ಮಣಿಪಾಲ ಟೆಕ್ನಾಲಜಿಸ್‌ನ ಡಿಜಿಟಲ್ ಸೊಲ್ಯೂಷನ್ಸ್‌ನ ಬಿಝಿನೆಸ್ ಹೆಡ್ ಹಾಗೂ ಉಪಾಧ್ಯಕ್ಷರಾದ ಗುರುಪ್ರಸಾದ್ ಕಾಮತ್ ಕರಾರು ಪತ್ರಕ್ಕೆ ಸಹಿ ಹಾಕಿದರು.
ಡಾ ಮಂಜುನಾಥ ಉಡುಪ ಕೆ.ಮಾತನಾಡಿ, ಕೌಶಲಾಭಿವೃದ್ಧಿ ಕೋರ್ಸ್‌ಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಉಪಯುಕ್ತ ಶಿಕ್ಷಣ ನೀಡಲು ಸಾಧ್ಯವಾಗಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದರು.
ಗುರುಪ್ರಸಾದ್ ಕಾಮತ್ ಮಾತನಾಡಿ, ಕೌಶಲಾಭಿವೃದ್ಧಿ ಕೋರ್ಸ್‌ಗಳು ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಕೌಶಲ, ಉದ್ಯೋಗಾವಕಾಶ ಒದಗಿಸಲು ಸಹಕಾರಿಯಾಗಲಿದೆ. ಕಾಲೇಜಿನ ಆಡಳಿತ ಮಂಡಳಿ ಇದರ ಮಹತ್ವವನ್ನು ಅರಿತುಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು.
ವಿದ್ಯಾರ್ಥಿಗಳ ಕೌಶಲ ಹೆಚ್ಚಳವಾಗುವ ಜತೆಗೆ ಸೂಕ್ತ ಉದ್ಯೋಗಾವಕಾಶ ಸಿಗಲೂ ಇದು ಸಹಕಾರಿಯಾಗಲಿದೆ. ಗ್ರಾಫಿಕ್ ಡಿಸೈನ್, ಡಿಜಿಟಲ್ ಮಾರ್ಕೆಟಿಂಗ್, ಅಡ್ವಾನ್ಸ್ ಎಕ್ಸೆಲ್, ಪ್ರಾಜೆಕ್ಟ್ ವರ್ಕ್, ಇ ಪಬ್ಲಿಷಿಂಗ್, ಮೋಷನ್ ಗ್ರಾಫಿಕ್ಸ್, 2ಡಿ, 3ಡಿ ಗ್ರಾಫಿಕ್ಸ್, ಆ್ಯನಿಮೇಷನ್ ಯೂಸರ್ ಎಕ್ಸ್ ಪೀರಿಯನ್ಸ್ , ಕಂಟೆಂಟ್ ಬರಹ ಸಹಿತ ಸುಮಾರು 16 ವಿವಿಧ ಕೋರ್ಸ್‌ಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ವಿಭಾಗದ ಸಂಚಾಲಕಿ ಟ್ವೀನಿ ಮರಿಯಾ ರೋಡ್ರಿಗಸ್, ಸದಸ್ಯೆ ಸುಮಲತಾ, ಆಡಳಿತ ಮಂಡಳಿ ಕಾರ್ಯದರ್ಶಿ ಆಲ್ವರಿಸ್ ಡಿ’ಸಿಲ್ವ, ನ್ಯಾಕ್ ಕೋ ಆರ್ಡಿನೇಟರ್ ರಾಬರ್ಟ್ ರೊಡ್ರಿಗಸ್, ಲರ್ನಿಂಗ್ ಇನ್ನೋವೇಷನ್ಸ್ ಆ್ಯಂಡ್ ಕಂಟೆಂಟ್ ನಿರ್ದೇಶಕ ದರ್ಶನ್ ಪಾಟೀಲ್, ಡಿಜಿಟಲ್ ಸೊಲ್ಯೂಷನ್ಸ್ ನ ಪ್ರಿ ಸೇಲ್ಸ್ ಆ್ಯಂಡ್ ಇನ್ನೋವೇಷನ್ಸ್ ಮುಖ್ಯಸ್ಥ ಕೆ.ವಿಘ್ನೇಶ್ ಕಾಮತ್, ಪಬ್ಲಿಷಿಂಗ್ ವಿಭಾಗದ ಬಿಝಿನೆಸ್ ಹೆಡ್ ಜಯಂತ್ ತಲ್ವಾರ್, ಕ್ರಿಯೇಟಿವ್ ಇಮೇಜಿಂಗ್ ವಿಭಾಗದ ಮುಖ್ಯಸ್ಥ ಜೆರಾಲ್ಡ್ ಅಂಚನ್, ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ರೀಮಾ ಕೊರೆಯಾ, ಇಮೇಜಿಂಗ್ ವಿಭಾಗದ ಮ್ಯಾನೇಜರ್ ಮಧುಚಂದ್ರ ಕೊಟ್ಟಾರಿ, ಡಿಜಿಟಲ್ ಸೊಲ್ಯೂಷನ್ಸ್ ನ ಕಂಟೆಂಟ್ ಮ್ಯಾನೇಜರ್ ಹರ್ಷವರ್ಧನ್ ಉಪಸ್ಥಿತರಿದ್ದರು.