Advertisement

ರಾಬರ್ಟ್‌ ಸಿನಿಮಾ ನಿರ್ಮಾಪಕರ ಹತ್ಯೆಗೆ ಸಂಚು: ಏಳು ಮಂದಿ ಸೆರೆ

09:03 AM Dec 21, 2020 | keerthan |

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾ ನಿರ್ಮಾಪಕ, ಅವರ ಸಹೋದರ ಹಾಗೂ ಇಬ್ಬರು ರೌಡಿಶೀಟರ್‌ಗಳ ಹತ್ಯೆಗೆ ಸಂಚು ರೂಪಿಸಿದ್ದ ಬಾಂಬೆ ರವಿ ತಂಡದ ಏಳು ಮಂದಿ ಭಾನುವಾರ ಮುಂಜಾನೆ ದಕ್ಷಿಣ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ನಗರದ ದರ್ಶನ್‌, ಗಿರೀಶ್‌, ಮೋಹನ್‌, ರಾಜನ್‌ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಪ್ರಮುಖ ಆರೋಪಿ ಬಾಂಬೆ ರವಿ ಮತ್ತು ನೀಲಸಂದ್ರದ ಮಂಜುನಾಥ್‌ ಎಂಬುವರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಆರೋಪಿಗಳು ಜಯನಗರದ ನ್ಯಾಷನಲ್‌ ಕಾಲೇಜು ಸಮೀಪದಲ್ಲಿ ಕಾರೊಂದರಲ್ಲಿ ಕುಳಿತು ರಾಬರ್ಟ್‌ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌, ಅವರ ಸಹೋದರ ದೀಪಕ್‌, ರೌಡಿಶೀಟರ್‌ಗಳಾದ ಸೈಕಲ್‌ ರವಿ, ಬೇಕರಿ ರಘು ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇದನ್ನೂ ಓದಿ:ಕೊಕ್ಕಡ: ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ; ಒಂಬತ್ತು ದುಷ್ಕರ್ಮಿಗಳಿಂದ ಕೃತ್ಯ

ಈ ಕುರಿತು ಪ್ರತಿಕ್ರಿಯೆ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ, ಭಾನುವಾರ ಮುಂಜಾನೆ ಐದು ಗಂಟೆ ಸುಮಾರಿಗೆ ಜಯನಗರ ಇನ್‌ಸ್ಪೆಕ್ಟರ್‌ ಗಸ್ತಿನಲ್ಲಿದ್ದರು. ಆಗ ನ್ಯಾಷನಲ್‌ ಕಾಲೇಜು ಬಳಿ ಕಾರಿನಲ್ಲಿ ಕುಳಿತು ಕೆಲ ವ್ಯಕ್ತಿಗಳು ಕೊಲೆ ಸಂಬಂಧ ಜೋರಾಗಿ ಮಾತನಾಡುತ್ತಿದ್ದಾರೆ ಎಂದು ಬಾತ್ಮೀದಾರರ ಮೂಲಕ ಮಾಹಿತಿವೊಂದು ಸಿಕ್ಕಿದೆ. ಕೂಡಲೇ ಇನ್‌ಸ್ಪೆಕ್ಟರ್‌ ಸ್ಥಳಕ್ಕೆ ಹೋಗಿ, ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಆರೋಪಿಗಳು ಕಾರು ಚಾಲನೆ ಮಾಡಿ ಪೊಲೀಸ್‌ ಸಿಬ್ಬಂದಿ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಅನಂತರ ಪೊಲೀಸ್‌ ಜೀಪ್‌ನಿಂದ ಕಾರನ್ನು ಅಡ್ಡಗಟ್ಟಿ, ಕಾರಿನಿಂದ ಇಳಿಯುವಂತೆ ಸೂಚಿಸಲಾಗಿದೆ. ಆಗ ಕಾರಿನಲ್ಲಿದ್ದ ಆರೋಪಿಯೊಬ್ಬ ಕಿಟಕಿಯಿಂದಲೇ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಕೂಡಲೇ ಇನ್ನಷ್ಟು ಮಂದಿ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರ ಕಾರು ಪರಿಶೀಲಿಸಿದಾಗ ಹತ್ತಾರು ಮಾರಕಾಸ್ತ್ರಗಳು ಇರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ.

Advertisement

ಇದೇ ವೇಳೆ ಇಬ್ಬರು ಪ್ರಮುಖ ಆರೋಪಿಗಳು ಸ್ವಲ್ಪ ದೂರದಲ್ಲಿದ್ದು, ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬೇರೆಯವರು ಭಾಗಿಯಾಗಿರುವ ಸಾಧ್ಯತೆಗಳಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬಂಧಿತರ ಪೈಕಿ ಒಬ್ಬನ ಮೇಲೆ ರೌಡಿಪಟ್ಟಿ ಇದ್ದು, ಮೂವರ ವಿರುದ್ಧ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿವೆ. ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ ಎಂದರು.

ಜಮೀನು ಮತ್ತು ಹಣಕಾಸು ವಿಚಾರ

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಹಣಕಾಸು ಮತ್ತು ಜಮೀನು ವಿಚಾರವಾಗಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಸೈಕಲ್‌ ರವಿ ಮತ್ತು ಬೇಕರಿ ರಘು ಜಮೀನು ವಿಚಾರವೊಂದರಲ್ಲಿ ಬಾಂಬೆ ರವಿ ಜತೆ ವಾಗ್ವಾದ ನಡೆಸಿದ್ದರು. ಜತೆಗೆ ಸಿನಿಮಾ ನಿರ್ಮಾಪಕ ಮತ್ತು ಅವರ ಸಹೋದರ ಜತೆ ಹಣಕಾಸು ವ್ಯವಹಾರ ಇತ್ತು. ಇದೇ ವಿಚಾರವಾಗಿ ಆರೋಪಿಗಳು ನಾಲ್ವರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ. ಭಾನುವಾರ ಮುಂಜಾನೆ ಐದು ಗಂಟೆ ಸುಮಾರಿಗೆ ದೀಪಕ್‌ ನ್ಯಾಷನಲ್‌ ಕಾಲೇಜು ರಸ್ತೆಯಲ್ಲಿ ಬರುವ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಹಲ್ಲೆಗೆ ಸಿದ್ಧತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next