ಹೊಸದಿಲ್ಲಿ: ಎಟಿಎಂಗಳಲ್ಲಿ 100 ರೂ. ನೋಟುಗಳ ಬದಲು ಕೇವಲ 500 ರೂ., 200 ರೂ. ಮುಖಬೆಲೆಯ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಅದಕ್ಕೆ ಕಾರಣ 100 ರೂ. ನೋಟುಗಳ ಸಂಖ್ಯೆಯಲ್ಲಿ ಕೊರತೆಯಾಗಿ ಅಲ್ಲ. ಅದರ ಗಾತ್ರದಿಂದಾಗಿಯೇ ಈ ಸಮಸ್ಯೆ ಉಂಟಾಗಿದೆ.
ಹಳೆಯ ಮತ್ತು ಹೊಸ ಮಾದರಿಯ ನೋಟುಗಳು ಇರುವುದರಿಂದ ಹೀಗಾಗಿದೆ. ಎಟಿಎಂಗಳಲ್ಲಿ ಬೇರೆ ಬೇರೆ ಮುಖ ಬೆಲೆಯ ನೋಟುಗಳನ್ನು ಇರಿಸುವ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಿದರೆ ಈ ವ್ಯತ್ಯಯ ನಿವಾರಣೆಯಾಗಲಿದೆ ಎಂದು ‘ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಎಟಿಎಂ ನಿರ್ವಹಣೆ ಮಾಡುವವರು ಮತ್ತು ಬ್ಯಾಂಕ್‌ಗಳಿಗೆ ಇದೊಂದು ಸವಾಲಾಗಿ ಪರಿಣಮಿಸಲಿದೆ. ನೋಟುಗಳನ್ನು ಸಾಗಿಸುವ ಸಂದರ್ಭದಲ್ಲಿ ಯಾವ ಎಟಿಎಂಗೆ ಎಷ್ಟು ಪ್ರಮಾಣದಲ್ಲಿ ಅವುಗಳನ್ನು ತುಂಬಿಸುವ ಬಗ್ಗೆ ಲೈವ್ ಮ್ಯಾಪಿಂಗ್ ಅಗತ್ಯವನ್ನು ಅವರು ಹೊಂದಬೇಕಾಗಿದೆ.
ಇದರ ಜತೆಗೆ ಸೂಕ್ತ ಪ್ರಮಾಣದ 100 ರೂ. ನೋಟುಗಳು ಇಲ್ಲದೇ ಇರುವುದೂ ಅವುಗಳನ್ನು ಒದಗಿಸಲು ಅಸಾಧ್ಯವಾಗದೇ ಇರಬಹುದು. ಹೀಗಾಗಿ, ಹಳೆಯ ಮಾದರಿಯ 100 ರೂ. ನೋಟು ಗಳನ್ನು ಹಿಂಪಡೆಯುವುದೇ ಈ ಗೊಂದಲಕ್ಕೆ ಪರಿಹಾರ ಎನ್ನುತ್ತಾರೆ ಬ್ಯಾಂಕರ್‌ಗಳು ಮತ್ತು ಎಟಿಎಂ ನಿರ್ವಹಣೆ ಮಾಡುವವರು.
ದೇಶದಲ್ಲಿರುವ 2.4 ಲಕ್ಷ ಎಟಿಎಂಗಳ ಪೈಕಿ ಶೇ.20-25 ಮಾತ್ರ 100 ರೂ.ನ ಹೊಸ ನೋಟುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಉಳಿದವುಗಳು ಹಳೆಯ ನೋಟುಗಳನ್ನು ಹೊಂದುವ ವ್ಯವಸ್ಥೆ ಇವೆ ಎಂದು ಹಿಟಾಚಿ ಇಂಡಿಯಾದ ಎಂ.ಡಿ. ರುಸ್ತುಂ ಇರಾನಿ ಹೇಳಿದ್ದಾರೆ. ಪ್ರತಿ ಎಟಿಎಂನಲ್ಲಿ ನಾಲ್ಕು ವಿಭಾಗಗಳು (ಕ್ಯಾಸೆಟ್) ಇರುತ್ತವೆ. ಮೊದಲ ಎರಡರಲ್ಲಿ 500 ರೂ., ಮೂರನೇಯದ್ದರಲ್ಲಿ 200 ರೂ., ನಾಲ್ಕನೇಯದ್ದರಲ್ಲಿ 100 ರೂ. ತುಂಬಲಾಗುತ್ತದೆ.