ಲೋಕಸಭಾ ಚುನಾವಣೆ ಸನಿಹದಲ್ಲಿ ಇರುವಾಗ ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಬಗ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಅನ್ನು ವಿತ್ತ ಸಚಿವ ಪಿಯೂಷ್ ಗೋಯಲ್ ಮಂಡಿಸಿದ್ದು, ಈ ಬಜೆಟ್‌ನಲ್ಲಿ ಜಿಲ್ಲೆಗೆ, ರಾಜ್ಯಕ್ಕೆ ಯಾವುದೇ ಬಂಪರ್ ಕೊಡುಗೆ ನೀಡದಿದ್ದರೂ, ಸದಾ ಬರಗಾಲದಲ್ಲಿರುವ ಜಿಲ್ಲೆಯ ರೈತರಿಗೆ ಅನುಕೂಲವಾಗುವಂಥ ಹಲವು ಯೋಜನೆ ಪ್ರಕಟಿಸಿದ್ದಾರೆ.
ತುಮಕೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ಆರನೇ ಬಜೆಟ್ ಅನ್ನು ಹಣಕಾಸು ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಸಂಸತ್ ಭವನದಲ್ಲಿ ಮಂಡಿಸಿದ 2019ರ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ಬಂಪರ್ ಕೊಡುಗೆ ನೀಡುತ್ತಾರೆ ಎಂದು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ.
ಜಿಲ್ಲೆಯ ರೈತರ ಪಾಲಿಗೆ ತುಸು ಸಂತಸ ಉಂಟು ಮಾಡಿದ್ದರೂ, ಜಿಲ್ಲೆಯ ಅಭಿವೃದ್ಧಿಗಾಗಿ ನಿರೀಕ್ಷಿಸಿದಂತೆ ಬಜೆಟ್‌ನಲ್ಲಿ ಘೋಷಣೆ ಆಗದೆ ಇರುವುದು ನಿರಾಶೆ ಯಾಗಿದೆ. ರಾಜಧಾನಿ ಬೆಂಗಳೂರಿಗೆ ಉಪನಗರ ವಾಗಿ ಬೆಳವಣಿಗೆ ಯಾಗುತ್ತಿರುವ ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ಕೈಗಾರಿಕಾ ಕಾರಿಡಾರ್ ಮತ್ತು ಬೆಂಗಳೂರು-ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾದಂತೆ ಕಾಣುತ್ತಿದೆ.
ಅಪಾರ ನಿರೀಕ್ಷೆ ಇತ್ತು: ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆಗೆ ಪೂರಕವಾಗುವಂತೆ ವಿಶ್ವ ಮಟ್ಟದಲ್ಲಿ ತುಮಕೂರು ಬೆಳವಣಿಗೆಯಾಗು ವಂತೆ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡುವಂಥ ಯೋಜನೆಗಳು ಚುನಾವಣೆಯ ಹೊಸ್ತಿಲಿನ ಈ ಬಜೆಟ್‌ನಲ್ಲಿ ಘೋಷಣೆ ಆಗುತ್ತದೆ ಎಂದು ಜಿಲ್ಲೆಯ ಜನರಲ್ಲಿ ಅಪಾರ ನಿರೀಕ್ಷೆ ಇತ್ತು. ಆದರೆ, ಬಜೆಟ್‌ನಲ್ಲಿ ರಾಜ್ಯದ ಯೋಜನೆಗಳು ಹಾಗೂ ಜಿಲ್ಲೆಯ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಆಗದೇ ಇರುವುದು ನಿರಾಸೆಯಾಗಿದೆ.
ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವಂತೆ 2 ಹೆಕ್ಟೇರ್‌ವರೆಗಿನ ಜಮೀನು ಹೊಂದಿರುವ ರೈತರ ಖಾತೆಗೆ ನೇರ ವಾಗಿ ಕೇಂದ್ರ ಸರ್ಕಾರವೇ 6000 ರೂ.ಹಣ ಭರಿಸುವ ಮಹತ್ವದ ಯೋಜನೆ, ಡಿ. 2018 ರಿಂದಲೇ ಜಾರಿಗೊಳಿಸುತ್ತಿದೆ. ರೈತರು ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಯೋಜನೆ ಜಾರಿ, ಸಕಾಲಕ್ಕೆ ಸಾಲ ಪಾವತಿಸುವವರಿಗೆ ಶೇ.2 ಬಡ್ಡಿ ರಿಯಾಯಿತಿ ನೀಡುವುದಾಗಿ ಘೋಷಿ ಸಿರುವುದು ರೈತರಿಗೆ ಅನುಕೂಲವಾಗುತ್ತದೆ ಎನ್ನುವ ಮಾತು ರೈತ ವಲಯದಿಂದ ಕೇಳಿ ಬರುತ್ತಿದೆ.
ಆದಾಯ ಮಿತಿ ಹೆಚ್ಚಳ: ಎಲ್ಲಾ ವರ್ಗದವರಿಗೂ ಆದಾಯ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿರುವುದು ಬಹುಜನರಿಗೆ ಅನೂಕೂಲವಾಗ ಲಿದೆ. ಗೃಹ ಸಾಲದ 2ಲಕ್ಷ, ಶೈಕ್ಷಣಿಕ ಸಾಲಕ್ಕೂ ತೆರಿಗೆ ವಿನಾಯಿತಿ. ಹಿರಿಯ ಕಾರ್ಮಿಕರಿಗೆ ಮಾಸಿಕ ರೂ 3000, ಗ್ರಾಚ್ಯುಯಿಟಿ 10 ಲಕ್ಷ ದಿಂದ 20 ಲಕ್ಷಕ್ಕೆ ಹೆಚ್ಚಳ. ಕೆಲಸದ ಸಮಯ ದಲ್ಲಿ ಕಾರ್ಮಿಕ ಮೃತಪಟ್ಟರೆ 6 ಲಕ್ಷ ರೂ., ಇಎಸ್‌ಐ ಮಿತಿ 15 ಸಾವಿರದಿಂದ 21 ಸಾವಿರಕ್ಕೆ ಹೆಚ್ಚಳ ವಾಗಿದ್ದು, ಸಮಾಜದ ಎಲ್ಲಾ ವರ್ಗ ದವರಿಗೆ ಖುಷಿತಂದಿದೆ.
ಸಣ್ಣ ಕೈಗಾರಿಕೆಗಳ ಒಂದು ಕೋಟಿ ಸಾಲದವರೆಗೆ ಶೇ.2 ಬಡ್ಡಿ ರಿಯಾಯಿತಿ. ಟಿಡಿಎಸ್ ಮಿತಿ 10 ಸಾವಿರದಿಂದ 40 ಸಾವಿರ ರೂ. ವರಿಗೆ ಹೆಚ್ಚಳ. ಕ್ಯಾಪಿಟೈಲ್ ಗೇಯಿನ್ ಮಿತಿ 2 ಕೋಟಿ ರೂ.ನಿಗದಿ. ಅಲೆಮಾರಿ ಸಮು ದಾಯದ ಅಭಿವೃದ್ಧಿ ನಿಗಮ, ಕಾಮಧೇನು ಆಯೋಗ, ಜೊತೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿರುವುದು ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಿಲ್ಲೆಯ ಜನ ಸ್ವಾಗತಿಸಿದ್ದಾರೆ.
* ಚಿ.ನಿ.ಪುರುಷೋತ್ತಮ್