Advertisement
2006ರ ಮಾ. 14ರಂದು ಆರೋಪಿ ಸುರತ್ಕಲ್ ಸಮೀಪದ ವಿದ್ಯಾನಗರ ನಿವಾಸಿಯಾಗಿದ್ದ ನಾಗರಾಜ್ ಬಳೆಗಾರ, ಬಾಲಕನ ಜತೆ ಸೇರಿ ಮೊಟ್ಟೆತ್ತಡ್ಕದ ಮಹೇಂದ್ರ ಕುಮಾರ್ ಅವರ ಮನೆಯಿಂದ ಚಿನ್ನಾಭರಣ ಕಳವು ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಡಿಸಿಐಬಿ ನಿರೀಕ್ಷಕರಾಗಿದ್ದ ತಿಲಕ್‌ಚಂದ್ರ ಬಂಧಿಸಿದ್ದರು. ಈ ಪೈಕಿ ಬಾಲಕನನ್ನು ಬಾಲಾಪರಾಧಿಯ ಕಾರಣಕ್ಕಾಗಿ ಬಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ನಾಗರಾಜ್ ಜಾಮೀನು ಪಡೆದು ಬಿಡುಗಡೆ ಹೊಂದಿದ್ದ. ಈ ಪ್ರಕರಣದಲ್ಲಿ ನಾಗರಾಜನಿಗೆ ಸೆಕ್ಷನ್ 457ರಲ್ಲಿ 5 ವರ್ಷ ಮತ್ತು ಸೆಕ್ಷನ್ 380ರಲ್ಲಿ 4 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ ವಾದಿಸಿದ್ದರು.
ನಾಗರಾಜ್ ಬಳೆಗಾರ್ ಯಾನೆ ಸತೀಶ್ (37) ಮೂಲತಃ ಬ್ರಹ್ಮಾವರದ ಬೈಕಾಡಿಯವ. ಈತನನ್ನು ಉಡುಪಿಗೆ ಕರೆತರುತ್ತಿದ್ದಾಗ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ. ಪೊಲೀಸ್ ಮೂಲಗಳ ಪ್ರಕಾರ ಈತ ಸುಮಾರು 3 ಬಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಆರೋಪಿ. 2013ರ ಅಕ್ಟೋಬರ್‌ನಲ್ಲಿ ಗೋವಾ ದಲ್ಲಿ ನಡೆದ ಕಳವು ಪ್ರಕರಣದಲ್ಲಿ ಪತ್ನಿಯ ಜತೆ ಗೋವಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಅದಕ್ಕೂ ಮೊದಲು ಆತ ಉಡುಪಿಯ ಹಿರಿಯಡಕ ಸಬ್‌ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾಗ 2011ರ ಜ. 14ರಂದು ಉಡುಪಿಯ ರೌಡಿ ವಿನೋದ್ ಶೆಟ್ಟಿಗಾರ್‌ನನ್ನು ತನ್ನ ಅಣ್ಣ ಮುತ್ತಪ್ಪ ಮತ್ತು ಇತರ ಇಬ್ಬರ ಜತೆಗೂಡಿ ಜೈಲಿನೊಳಗೆ ಚೂರಿಯಿಂದ ಇರಿದು ಕೊಲೆಗೈದ ಆರೋಪಿಯಾಗಿದ್ದ. ನಾಗರಾಜನ ಪತ್ನಿಯೇ ಕೇಕ್‌ನೊಳಗೆ ಚೂರಿ ಇಟ್ಟು ಜೈಲಿನೊಳಗೆ ಅದನ್ನು ಕೊಟ್ಟು ಕೊಲೆಗೆ ಸಾಥ್ ಕೊಟ್ಟಿದ್ದಳು. ಆತನ ಮೇಲೆ ಕರ್ನಾಟಕ, ಕೇರಳ, ಗೋವಾ ರಾಜ್ಯ ಸಹಿತ ಇತರೆಡೆಯ ಠಾಣೆಗಳಲ್ಲಿ 25ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿವೆ.