ಮಸ್ಕತ್: ಭಾರೀ ಮಳೆಯ ಹಿನ್ನೆಲೆಯಲ್ಲಿ ನೀರು ಸರಬರಾಜು ಪೈಪ್ ಲೈನ್ ಕಾಮಗಾರಿಯ ವೇಳೆ ನಡೆದ ದುರಂತದಲ್ಲಿ ಆರು ಮಂದಿ ಭಾರತೀಯ ಕಾರ್ಮಿಕರು ಮಣ್ಣು ಕುಸಿದು ಬಿದ್ದು ಸಮಾಧಿಯಾಗಿರುವ ಘಟನೆ ಒಮಾನ್ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಈ ದುರ್ಘಟನೆ ಮಸ್ಕತ್ ನ ಸೀಬ್ ಪ್ರದೇಶದಲ್ಲಿ ಭಾನುವಾರ ಸಂಭವಿಸಿದೆ ಎಂದು ಮಸ್ಕತ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬಗ್ಗೆ ನಾವು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದು, ಸಾವನ್ನಪ್ಪಿರುವ ಪ್ರಜೆಗಳೆಲ್ಲ ಭಾರತೀಯರು ಎಂದು ಶಂಕಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ನಿಜವಾದ ಕಾರಣದ ಬಗ್ಗೆ ಹಾಗೂ ಕಾರ್ಮಿಕರ ಗುರುತು ಪತ್ತೆಯ ಕುರಿತು ಭಾರತೀಯ ರಾಯಭಾರ ಕಚೇರಿ ಒಮಾನ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಕಾರ್ಮಿಕರ ಕುಟುಂಬಸ್ಥರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಭಾರತೀಯ ರಾಯಭಾರ ಕಚೇರಿ, ಸಾಧ್ಯವಿರುವ ಎಲ್ಲಾ ನೆರವು ನೀಡಲು ಸಿದ್ದವಾಗಿರುವುದಾಗಿ ಮತ್ತೊಂದು ಟ್ವೀಟ್ ನಲ್ಲಿ ವಿವರಿಸಿದೆ.
14 ಮೀಟರ್ ಆಳದಲ್ಲಿ ಪೈಪ್ ಲೈನ್ ಗಾಗಿ ಅಗೆಯುವ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸುಮಾರು 12 ಗಂಟೆಗಳ ಕಾಲ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುವ ಮೂಲಕ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ದ ಮಸ್ಕತ್ ದೈನಿಕ ವರದಿ ಮಾಡಿದೆ.