ಬೆಂಗಳೂರು: ಪ್ಯಾಲೇಸ್ ಗುಟ್ಟಹಳ್ಳಿ ಬಳಿಯ ಬಿಲ್ವ ಆಸ್ಪತ್ರೆಯ ಲ್ಯಾಬೋರೇಟರಿಗೆ ಶನಿವಾರ ಬೆಳಗ್ಗೆ ಶಾರ್ಟ್ ಸಕೂìÂಟ್‌ನಿಂದ ಬೆಂಕಿಬಿದ್ದಿತ್ತು. ಈ ವೇಳೆ ಕಟ್ಟಡದಲ್ಲಿ ಸಿಲುಕಿದ್ದ ಆರು ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಅದೃಷ್ಟವಶಾತ್ ರೋಗಿಗಳು ಮತ್ತು ಸಿಬ್ಬಂದಿ ಅಪಾಯದಿಂದ ಪಾರಾರಿಯಾಗಿದ್ದಾರೆ.
ಆಸ್ಪತ್ರೆಯ ಲ್ಯಾಬರೇಟರಿಯಲ್ಲಿದ್ದ ಪಿಠೊಪಕರಣಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು. ಬೆಂಕಿಯ ಕಿನ್ನಾಲಿಗೆ ಎರಡನೇ ಮಹಡಿಗೂ ವ್ಯಾಪಿಸಿದೆ. ಇದರಿಂದ ಆತಂಕಗೊಂಡ ಸಿಬ್ಬಂದಿ ಕೂಡಲೇ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ದೂರು ನೀಡಿದ್ದಾರೆ. ತಕ್ಷಣ ಆರು ವಾಹನಗಳಲ್ಲಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅವಘಡದ ವೇಳೆ ಆಸ್ಪತ್ರೆಯಲ್ಲಿ ಆರು ಮಂದಿ ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದರು.
ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸಿಬ್ಬಂದಿ ರೋಗಿಗಳನ್ನು ಹೊರಗೆ ಕರೆತರಲು ಯತ್ನಿಸಿದರು. ಆದರೆ, ಸಾಧ್ಯವಾಗಿಲ್ಲ. ಕೊನೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಏಣಿ ಮೂಲಕ ಎರಡು ಮಹಡಿಯ ಕಿಟಕಿಯ ಗಾಜುಗಳನ್ನು ಪುಡಿ ಮಾಡಿ ಒಳ ಪ್ರವೇಶಿಸಿ, ರೋಗಿಗಳು ಮತ್ತು ಸಿಬ್ಬಂದಿಯನ್ನು ಸರಕ್ಷಿತವಾಗಿ ರಕ್ಷಿಸಿದ್ದಾರೆ.ವೈದ್ಯ ಕೇಶವಮೂರ್ತಿ ಎಂಬುವರಿಗೆ ಆಸ್ಪತ್ರೆ ಸೇರಿದ್ದು, ನೆಲ ಮಹಡಿಯಲ್ಲಿ ದಂತ ಚಿಕಿತ್ಸಾಲಯ, ಮೊದಲ ಮಹಡಿಯಲ್ಲಿ ಲ್ಯಾಬೊರೇಟರಿ, ಎರಡು ಹಾಗೂ ಮೂರನೇ ಮಹಡಿಯಲ್ಲಿ ರೋಗಿಗಳ ವಾರ್ಡ್‌ಗಳಿವೆ.
ಪೇದೆ ಅಸ್ವಸ್ಥ: ಹೊಗೆ ಸೇವನೆಯಿಂದ ಅಸ್ವಸ್ಥರಾಗಿದ್ದ ಆಸ್ಪತ್ರೆಯ ರೋಗಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೇ ವೇಳೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ವೈಯಾಲಿಕಾವಲ್ ಠಾಣೆ ಪೇದೆ ಧನಂಜಯ್ ಕೂಡ ಅಸ್ವಸ್ಥಗೊಂಡಿದ್ದರು. ದಟ್ಟ ಹೊಗೆಯ ನಡುವೆ ಆಸ್ಪತ್ರೆಯ ಸಿಬ್ಬಂದಿಯನ್ನು ಹೊರ ಕರೆತರುವ ಸಂದರ್ಭದಲ್ಲಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಕೂಡಲೇ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯರ ವಿರುದ್ಧ ದೂರು: ಆಸ್ಪತ್ರೆಯಲ್ಲಿ ಒಂದೇ ಒಂದು ಅಗ್ನಿನಂದಕ ಅಳವಡಿಸಿಲ್ಲ. ಈ ಸಂಬಂಧ ಅಗ್ನಿ ಶಾಮಕ ಇಲಾಖೆಯಿಂದ ಆಸ್ಪತ್ರೆ ಮುಖ್ಯಸ್ಥರ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಈ ಹಿಂದೆ ನಗರದಲ್ಲಿರುವ ಆಸ್ಪತ್ರೆಗಳಲ್ಲಿ ಅಗ್ನಿನಂದಕಗಳ ಅಳವಡಿಕೆ ಕುರಿತು ಅಗ್ನಿಶಾಮಕ ಇಲಾಖೆ ಅಕಾರಿಗಳು ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಿಲ್ವ ಆಸ್ಪತ್ರೆಯನ್ನೂ ಪರಿಶೀಲಿಸಲಾಗಿತ್ತು. ಆಗ ಅಗ್ನಿ ನಂದಕಗಳು ಇಲ್ಲದ್ದರಿಂದ ಇಲಾಖೆಯಿಂದ ಆಸ್ಪತ್ರೆಗೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.
ಘಟನೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಮೇಲ್ನೊಟಕ್ಕೆ ಶಾರ್ಟ್ ಸಕೂಟ್‌ನಿಂದ ಸಂಭವಿಸಿರಬಹುದು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಬೆಂಕಿ ನಂದಕಗಳನ್ನು ಅಳವಡಿಸಿಕೊಳ್ಳದ ಕಾರಣ ಆಸ್ಪತ್ರೆಯ ಮುಖ್ಯಸ್ಥರ ವಿರುದ್ಧ ದೂರು ನೀಡಿದ್ದು, ಪೊಲೀಸರ ತನಿಖೆ ನಂತರ ನಿಖರ ಕಾರಣ ತಿಳಿಯಲಿದೆ.
-ಕೆ.ಯು ರಮೇಶ್, ಅಗ್ನಿಶಾಮಕದಳದ ನಿರ್ದೇಶಕರು