ಹೊಸದಿಲ್ಲಿ : ಸಿಯಾಲ್ಡಾ – ನ್ಯೂಡೆಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಮಾನ್ಪುರದಲ್ಲಿ ಅಪರಿಚಿತ ದುಷ್ಕರ್ಮಿಗಳು ನಿನ್ನೆ ಸೋಮವಾರ ತಡ ರಾತ್ರಿ ಕಲ್ಲೆಸೆದ ಕಾರಣ ಆರು ಮಂದಿ ಪ್ರಯಾಣಿಕರು ಗಾಯಗೊಂಡರು.
ಅಪರಿಚಿತ ದುಷ್ಕರ್ಮಿಗಳಿಂದ ನಡೆದಿರುವ ಈ ಕಲ್ಲೆಸೆತಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ; ಆ ಬಗ್ಗೆ ಈಗ ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ದುಷ್ಕರ್ಮಿಗಳ ಕಲ್ಲೆಸೆತಕ್ಕೆ ಎರಡು ಬೋಗಿಗಳು ಗುರಿಯಾದ ಕಾರಣ ಅವುಗಳ ಕಿಟಕಿ ಗಾಜು ಪುಡಿಯಾಯಿತು. ಕನಿಷ್ಠ ಆರು ಮಂದಿ ಪ್ರಯಾಣಿಕರು ಗಾಯಗೊಂಡರು. ಕೂಡಲೇ ಗಾಯಾಳು ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಗಯಾದಲ್ಲಿ ಕಿಟಕಿ ಗಾಜುಗಳನ್ನು ಬದಲಾಯಿಸಲಾಯಿತು.
ದುಷ್ಕರ್ಮಿಗಳು ಕಲ್ಲೆ ಸೆದಾಕ್ಷಣವೇ ಅವರನ್ನು ಹಿಡಿಯುವ ಪ್ರಯತ್ನವನ್ನು ಸ್ಥಳೀಯ ಅಧಿಕಾರಿಗಳು ನಡೆಸಿದರು; ಆದರೆ ದುಷ್ಕರ್ಮಿಗಳು ಕತ್ತಲೆಯ ಲಾಭ ಪಡೆದು ಪಲಾಯನ ಮಾಡಿದರು.
ರೈಲ್ವೇ ರಕ್ಷಣಾ ಪಡೆಯ ಸಿಬಂದಿಗಳು ಈಗ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.