Advertisement

Lokayukta ಪೊಲೀಸರ ಬಲೆಗೆ ಬಿದ್ದ ಆರು ಭ್ರಷ್ಟರು

12:00 AM Jan 10, 2024 | Team Udayavani |

ಬೆಂಗಳೂರು: ಲೋಕಾಯುಕ್ತ ಪೊಲೀಸರು ಆರು ಮಂದಿ ಭ್ರಷ್ಟರ ಕೋಟೆಗೆ ಮಂಗಳವಾರ ಬೆಳ್ಳಂಬೆಳಗ್ಗೆ ಲಗ್ಗೆಯಿಟ್ಟಿದ್ದಾರೆ. ಆ ವೇಳೆ ಕಂತೆಕಂತೆ ಗರಿಗರಿ ನೋಟುಗಳು, ಕೆಜಿಗಟ್ಟಲೆ ಚಿನ್ನಾಭರಣ, ಕೋಟ್ಯಂತರ ಬೆಲೆ ಬಾಳುವ ನಿವೇಶನಗಳು, ಐಷಾರಾಮಿ ಮನೆಗಳು, ವಾಹನಗಳು, ಹುಲಿ ಉಗುರು, ಶ್ರೀಗಂಧದ ತುಂಡು ಹೊಂದಿರುವುದು ಪತ್ತೆಯಾಗಿದೆ.

Advertisement

ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ನಾಲ್ವರು ಹಾಗೂ ರಾಮನಗರದಲ್ಲಿ ಇಬ್ಬರು ಸರಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿ ಈ ದಾಳಿ ನಡೆದಿದೆ. ಲೋಕಾಯುಕ್ತ ಪೊಲೀಸರು ರಾಜ್ಯಾದ್ಯಂತ 35ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಸರಕಾರಿ ಅಧಿಕಾರಿಗಳ ನಿವಾಸ, ಕಚೇರಿ, ಸಂಬಂಧಿಕರ ನಿವಾಸ ಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸ ಲಾಯಿತು.

ಬೆಸ್ಕಾಂ ಅಧಿಕಾರಿ ಎಂ.ಎಲ್‌.ನಾಗರಾಜ್‌ಗೆ ಸಂಬಂಧಿಸಿದ ಜಾಗಗಳಲ್ಲಿ 6.37 ಕೋಟಿ ರೂ., ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾ.ಪಂ. ಪಿಡಿಒ ಡಿ.ಎಂ.ಪದ್ಮನಾಭ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ 5.98 ಕೋಟಿ ರೂ., ಬೆಂಗಳೂರಿನ ಎಂಜಿನಿಯರ್‌ ಎನ್‌.ಸತೀಶ್‌ಬಾಬು ಬಳಿ 4.52 ಕೋಟಿ ರೂ. ಮೌಲ್ಯದ ಆಸ್ತಿಯಿರುವುದು ಗೊತ್ತಾಗಿದೆ.

ಬೆಂಗಳೂರು ನಗರ ವಿಭಾಗ
ಎಂ.ಎಲ್‌.ನಾಗರಾಜ್‌, ಮುಖ್ಯ ಜನರಲ್‌ ಮ್ಯಾನೇಜರ್‌ (ಒಪಿ), ಬೆಸ್ಕಾಂ ಪ್ರಧಾನ ಕಚೇರಿ, ಕೆಆರ್‌ ಸರ್ಕಲ್‌.ಬೆಂಗಳೂರು. (6.37 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ)
-7 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. 13 ನಿವೇಶನಗಳು, 2 ಮನೆ, 12-30 ಎಕ್ರೆ ಕೃಷಿ ಭೂಮಿ ಸಹಿತ ಒಟ್ಟು 5.89 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 6.77 ಲಕ್ಷ ರೂ., 16.44 ಲಕ್ಷ ರೂ. ಮೌಲ್ಯದ ಆಭರಣಗಳು, 13.50 ಲಕ್ಷ ರೂ. ಬೆಲೆ ಬಾಳುವ ವಾಹನಗಳು, 11.19 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸಹಿತ ಒಟ್ಟು 47.90 ಲಕ್ಷ ರೂ. ಮೌಲ್ಯದ ಚರ ಆಸ್ತಿ ಪತ್ತೆಯಾಗಿದೆ.

ಡಿ.ಎಂ.ಪದ್ಮನಾಭ, ಪಿಡಿಒ, ಗ್ರಾಮ ಪಂಚಾಯತ್‌, ದೇವನಹಳ್ಳಿ ತಾಲೂಕು, ಬೆಂಗಳೂರು ಜಿಲ್ಲೆ . (5.98 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ)
-6 ಸ್ಥಳಗಳಲ್ಲಿ ತಪಾಸಣೆ ನಡೆಸ ಲಾಗಿದೆ. 1-ಕೈಗಾರಿಕೆ ಶೆಡ್‌, 2-ಮನೆಗಳು, 8.18 ಎಕರೆ ಕೃಷಿ ಭೂಮಿ ಮತ್ತು ಒಂದು ಫಾರ್ಮ್ ಹೌಸ್‌ ಸಹಿತ ಒಟ್ಟು 5.35 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ವಶಪಡಿಸಿಕೊಳ್ಳಲಾಗಿದೆ. 2.62 ಲಕ್ಷ ರೂ., 17.24 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 28.75 ಲಕ್ಷ ರೂ. ಮೌಲ್ಯದ ವಾಹನಗಳು, 15 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸಹಿತ 63.66 ಲಕ್ಷ ರೂ. ಮೌಲ್ಯದ ಚರ ಆಸ್ತಿ ಹೊಂದಿರುವುದು ಕಂಡು ಬಂದಿದೆ.

Advertisement

ಎನ್‌.ಸತೀಶ್‌ ಬಾಬು, ಸೂಪರಿಡೆಂಟ್‌ ಎಂಜಿನಿಯರ್‌, ಪಿಡಬ್ಲೂಡಿ, ಬಿಲ್ಡಿಂಗ್‌ ಸರ್ಕಲ್‌, ಕೆಆರ್‌ ಸರ್ಕಲ್‌, ಬೆಂಗಳೂರು. (4.52 ಕೋ. ರೂ. ಮೌಲ್ಯದ ಆಸ್ತಿ ಪತ್ತೆ)
-5 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.
1-ಸೈಟ್‌, 2-ಮನೆಗಳು, 15 ಎಕ್ರೆ ಕೃಷಿ ಭೂಮಿ ಸಹಿತ 3.70 ಕೋಟಿ ರೂ. ಮೌಲ್ಯದ ಸ್ಥಿರಾಸಿ, 9 ಲಕ್ಷ ರೂ., 64.62 ಲಕ್ಷ ರೂ. ಮೌಲ್ಯದ ಆಭರಣಗಳು, 8.70 ಲಕ್ಷ ರೂ. ಮೌಲ್ಯದ ವಾಹನಗಳು ಸಹಿತ 82.32ಲಕ್ಷ ರೂ. ಮೌಲ್ಯದ ಚರ ಆಸ್ತಿ ಪತ್ತೆಯಾಗಿದೆ.

ಸಯ್ಯದ್‌ ಮುನೀರ್‌ ಅಹಮದ್‌, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ (ಎಇಇ), ಕೆಆರ್‌ಐಡಿಎಲ್‌ ಕಚೇರಿ, ರಾಮನಗರ. (5.48 ಕೋ. ರೂ. ಮೌಲ್ಯದ ಆಸ್ತಿ ಪತ್ತೆ)
-6 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. 2-ಸೈಟುಗಳು, 7-ಮನೆಗಳು, ಮೌಲ್ಯದ ಕೃಷಿ ಭೂಮಿ ಸಹಿತ 4.10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 8.54 ಲಕ್ಷ ರೂ., 73.47 ಲಕ್ಷ ರೂ. ಮೌಲ್ಯದ ಆಭರಣಗಳು, 21 ಲಕ್ಷ ರೂ. ಮೌಲ್ಯದ ವಾಹನಗಳು, 35 ಲಕ್ಷ ರೂ. ಗೃಹೋ ಪಯೋಗಿ ವಸ್ತುಗಳು ಸಹಿತ 1.38 ಕೋಟಿ ರೂ. ಬೆಲೆ ಬಾಳುವ ಚರ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ.

ರಾಮನಗರ ಕಚೇರಿಯಲ್ಲಿ ದಾಖಲಾದ ಪ್ರಕರಣ

ಎಚ್‌.ಎಸ್‌.ಸುರೇಶ್‌, ಸದಸ್ಯ, ಚೆನ್ನೇನಹಳ್ಳಿಗ್ರಾಮ ಪಂಚಾಯತ್‌, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು. (25.58 ಕೋ. ರೂ. ಮೌಲ್ಯದ ಆಸ್ತಿ ಪತ್ತೆ)

-6 ಸ್ಥಳಗಳಲ್ಲಿ ಶೋಧ ನಡೆಸ ಲಾಗಿದೆ. 16 ನಿವೇಶನಗಳು, 1 ಮನೆ, 7.6 ಎಕ್ರೆ ಕೃಷಿ ಭೂಮಿ ಸಹಿತ 21.27 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 11.97 ಲಕ್ಷ ರೂ., 2.11 ಕೋಟಿ ರೂ. ಮೌಲ್ಯದ ಆಭರಣಗಳು, 2.7 ಕೋಟಿ ರೂ. ಮೌಲ್ಯದ ವಾಹನಗಳು ಸಹಿತ ಒಟ್ಟು 4.30 ಕೋಟಿ ರೂ. ಮೌಲ್ಯದ ಚರ ಆಸ್ತಿ ಪತ್ತೆಯಾಗಿದೆ.

ಮಂಜೇಶ್‌.ಬಿ, ಸದಸ್ಯ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕ, ಪಟ್ಟಣ ಮತ್ತು ಗ್ರಾಮಾಂ ತರ ಯೋಜನೆ, ಆನೇಕಲ್‌ ಯೋಜನಾ ಪ್ರಾಧಿಕಾರ, ಆನೇಕಲ್‌ ತಾಲೂಕು, ಬೆಂಗಳೂರು. (3.18 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ).
-5 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. 11 ಸೈಟ್‌ಗಳು, 1 ಮನೆ ಸಹಿತ 1.20 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ, 5.7 ಲಕ್ಷ ರೂ., 35.97 ಲಕ್ಷ ರೂ. ಮೌಲ್ಯದ ಆಭರಣಗಳು, 77.16 ಲಕ್ಷ ರೂ. ಮೌಲ್ಯದ ವಾಹನಗಳು ಸಹಿತ ಒಟ್ಟು 1.98 ಲಕ್ಷ ರೂ. ಬೆಲೆ ಬಾಳುವ ಚರ ಆಸ್ತಿ ಪತ್ತೆ.

ದಾಳಿಯಲ್ಲಿ ಸಿಕ್ಕಿದ್ದೇನು?
-ಹುಲಿ ಉಗುರು, ಶ್ರೀಗಂಧ ಪತ್ತೆ
-ನಗದು, ಕೆಜಿಗಟ್ಟಲೆ ಚಿನ್ನಾಭರಣಗಳು ವಶಕ್ಕೆ
-ನಿವೇಶನಗಳು, ಐಷಾರಾಮಿ ನಿವಾಸ, ಆಸ್ತಿಪತ್ರ

ಕೆಜಿಗಟ್ಟಲೆ ಶ್ರೀಗಂಧ, ಹುಲಿ ಉಗುರು ಪತ್ತೆ
ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ನಾಗರಾಜ್‌ ಅವರ ಬೆಂಗಳೂರಿನ ಇಂದಿರಾ ನಗರದ ಬೆಸ್ಕಾಂ ಕ್ವಾಟ್ರಸ್‌ನ ಮನೆಯಲ್ಲಿ ತಪಾಸಣೆ ವೇಳೆ 3.800 ಕೆಜಿ ಶ್ರೀಗಂಧದ ಮರದ ತುಂಡುಗಳು, 2 ಹುಲಿ ಗುರುರು ಕಂಡು ತನಿಖಾಧಿಕಾರಿಗಳೇ ದಂಗಾಗಿದ್ದಾರೆ ಎನ್ನಲಾಗಿದೆ. ಪರಿಶೀಲನೆ ವೇಳೆ ಮನೆಯ ಕೋಣೆಯೊಂದರಲ್ಲಿ ಕಪ್ಪು ದಾರದಲ್ಲಿ ಅನುಮಾನಾಸ್ಪದ ವಸ್ತು ಕಟ್ಟಿ ಇಟ್ಟಿರುವುದು ಗಮನಕ್ಕೆ ಬಂದಿತ್ತು. ಆ ದಾರ ಬಿಡಿಸಿ ನೋಡಿದಾಗ ಅದರೊಳಗೆ ಹುಲಿ ಉಗುರುಗಳು ಕಂಡು ಬಂದಿತ್ತು. ಲೋಕಾ ಪೊಲೀಸರು ಈ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ತಡಮಾಡದ ಕೆಆರ್‌ಪುರದ ಅರಣ್ಯ ಸಂಚಾರಿ ದಳ ಸಿಬಂದಿ ಸ್ಥಳಕ್ಕೆ ಆಗಮಿಸಿ ಶ್ರೀಗಂಧದ ಮರದ ಕೊರಡು, ಎರಡು ಹುಲಿ ಉಗುರು ಜಪ್ತಿ ಮಾಡಿದ್ದಾರೆ.

ಈ ಮನೆಯಲ್ಲಿ ನಾಗರಾಜ್‌ ಒಂಟಿಯಾಗಿ ವಾಸಿಸುತ್ತಿದ್ದರು. ಕುಟುಂಬ ಸದಸ್ಯರನ್ನು ಬೇರೆ ಮನೆಯಲ್ಲಿ ವಾಸಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ದಾಳಿ ವೇಳೆ ಅವರು ಮನೆಯಲ್ಲಿ ಇರದ ಹಿನ್ನೆಲೆಯಲ್ಲಿ ಅವರ ಸಹೋದರಿಯ ಸಮ್ಮುಖದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮನೆ ಜಾಲಾಡಿದ್ದಾರೆ. ಮನೆಯಿಡೀ ದಾಖಲೆಗಳ ರಾಶಿಗಳಿದ್ದವು. ಇಲ್ಲಿ ಕಸ, ಧೂಳು ಅಂಟಿಕೊಂಡಿದ್ದ ಹಿನ್ನೆಲೆಯಲ್ಲಿ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡೇ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಬೇಕಾಯಿತು. ವಾಣಿಜ್ಯ ಪರವಾನಿಗೆ ಕೊಡುವ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ನಾಗರಾಜ್‌ ಪರ ಅವರ ಚಾಲಕ 7 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಅಮಾನತಿನಲ್ಲಿದ್ದರು. ಇವರಿಗೆ ಸಂಬಂಧಿಸಿದ ಕಾಲೇಜುಗಳನ್ನೂ ತಪಾಸಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next