Advertisement

ಶಿವರುದ್ರಯ್ಯ ಹೊಸ ಸವಾರಿ

12:05 PM Oct 19, 2018 | |

ನಿರ್ದೇಶಕ ಕೆ.ಶಿವರುದ್ರಯ್ಯ ಅವರು “ಮಾರಿಕೊಂಡವರು’ ಚಿತ್ರದ ನಂತರ ಮತ್ಯಾವ ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ ಎಂಬ ಪ್ರಶ್ನೆ ಇತ್ತು. ಅದಕ್ಕೆ ಉತ್ತರ “ರಾಮನ ಸವಾರಿ’. ಹೌದು, ಸದ್ದಿಲ್ಲದೆಯೇ ಶಿವರುದ್ರಯ್ಯ ಅವರು ಈ ಚಿತ್ರವನ್ನು ಮುಗಿಸಿ, ಇದೀಗ ಸೆನ್ಸಾರ್‌ಗೆ ಕಳುಹಿಸಲು ಸಜ್ಜಾಗುತ್ತಿದ್ದಾರೆ. ಕಥೆಗಾರ ಕೆ.ಸದಾಶಿವ ಅವರ “ರಾಮನ ಸವಾರಿ ಸಂತೆಗೆ ಹೋದದ್ದು’ ಕಥೆ ಆಧರಿಸಿ, “ರಾಮನ ಸವಾರಿ’ ಚಿತ್ರ ಮಾಡಿದ್ದಾರೆ ಶಿವರುದ್ರಯ್ಯ.

Advertisement

ಇದು ಮಕ್ಕಳ ಚಿತ್ರ. ಇಲ್ಲಿ ನಟಿ ಸೋನುಗೌಡ ಕೂಡ ಹೈಲೆಟ್‌. ಅವರೊಂದಿಗೆ ರಾಜೇಶ್‌, ಸುಧಾ ಬೆಳವಾಡಿ, ಭಾರ್ಗವಿ ಇತರರು ನಟಿಸಿದ್ದಾರೆ. “ರಾಮನ ಸವಾರಿ’ ಕುರಿತು ಮಾಹಿತಿ ಕೊಡುವ ನಿರ್ದೇಶಕ ಶಿವರುದ್ರಯ್ಯ, “ಈ ಕಥೆಯನ್ನು ಈ ಹಿಂದೆ ಗಿರೀಶ್‌ ಕಾರ್ನಾಡ್‌ ಮತ್ತು ಗಿರೀಶ್‌ ಕಾಸರವಳ್ಳಿ ಅವರು ಮಾಡಬೇಕಿತ್ತು. ಆದರೆ ಆಗಲಿಲ್ಲ. ನಾನೂ ಸಹ 2006 ರಲ್ಲೇ ಮಾಡಬೇಕು ಅಂತ ಸಾಕಷ್ಟು ಪ್ರಯತ್ನಿಸಿದ್ದೆ. ಸಾಧ್ಯವಾಗಿರಲಿಲ್ಲ. ಅದಕ್ಕೀಗ ಸಮಯ ಕೂಡಿ ಬಂದಿದೆ.

ಮಂಗಳೂರು ಮೂಲದ ಜೋಸೆಫ್ ಎಂಬ ನಿರ್ಮಾಪಕರು ತಮ್ಮ ಮಗನಿಗೆ ಈ ಕಥೆ ಮಾಡಬೇಕೆಂದು ನಿರ್ಧರಿಸಿದ್ದರಿಂದ ಚಿತ್ರವಾಗಿದೆ. ಸುಮಾರು ಐದುವರೆ ವರ್ಷದ ಹುಡುಗ ಆರ್ಯನ್‌ ಚಿತ್ರದ ಆಕರ್ಷಣೆ. ಕಥೆ ಬಗ್ಗೆ ಹೇಳುವುದಾದರೆ, ಬ್ರಾಹ್ಮಣ ಸಮುದಾಯ ಕುಟುಂಬದ ಹುಡುಗನೊಬ್ಬ ಮನೆಯವರ ಜಗಳ ನೋಡಲಾರದೆ, ಮನೆಬಿಟ್ಟು ಹೋಗುತ್ತಾನೆ. ಮೂರು ವರ್ಷಗಳ ಕಾಲ ಅವನ ಸುಳಿವೇ ಇರುವುದಿಲ್ಲ. ಕೊನೆಗೊಂದು ದಿನ ಸಂತೆಯಲ್ಲಿ ಅವನ ಅಪ್ಪನ ಕಣ್ಣಿಗೆ ಬೀಳುತ್ತಾನೆ.

ಅವನು ನನ್ನ ಮಗನೇ ಅಂತ ಗೊತ್ತಾಗಿ, ಸಂತೆಯಲ್ಲಿ ತಿಂಡಿ, ತಿನಿಸು ಕೊಡಿಸಿ, ಮನೆಗೆ ಕರೆದೊಯ್ಯಲು ಪ್ರಯತ್ನಿಸಿದರೂ ಆ ಹುಡುಗ ಹೋಗಲ್ಲ. ಆಮೇಲೆ ಏನಾಗುತ್ತೆ ಎಂಬುದು ಕಥೆ. ಆ ಹುಡುಗನಿಗೆ ಜಗಳವೆಂದರೆ ಆಗುವುದಿಲ್ಲ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಗೆ ಹತ್ತಿರವಾದಂತಹ ಕಥೆಯ ಚಿತ್ರಣ ಇಲ್ಲಿದೆ. ಹಾಗೆಯೇ ಪ್ರಕೃತಿ ಮುಂದೆ ಯಾರೂ ದೊಡ್ಡವರಲ್ಲ, ಪ್ರಕೃತಿ ಉಳಿಸಬೇಕೆಂಬ ಸಣ್ಣ ಸಂದೇಶವೂ ಇಲ್ಲಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

ಇದು ಮಲೆನಾಡ ಭಾಗದ ಕಥೆಯಾದ್ದರಿಂದ ಬಹುತೇಕ ಹೊಸನಗರ, ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣಗೊಂಡಿದೆ. 1964, 1974 ರ ಕಾಲಘಟ್ಟದ ಕಥೆ ಇಲ್ಲಿ ಹೇಳಲಾಗಿದೆ. ಆಗಿನ ಕುದುರೆ ಗಾಡಿ, ಎತ್ತಿನಗಾಡಿ ಸೇರಿದಂತೆ ಆಗಿನ ಕಾಲಘಟ್ಟ ತೋರಿಸುವ ಪ್ರಯತ್ನ ಮಾಡಲಾಗಿದೆ. ವಿಶೇಷವೆಂದರೆ, ಈ ಚಿತ್ರಕ್ಕೆ ಗಿರೀಶ್‌ ಕಾಸರವಳ್ಳಿ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

Advertisement

ಚಿತ್ರಕ್ಕೆ ಕೆ.ಕಲ್ಯಾಣ್‌ ಅವರ ಸಂಗೀತವಿದೆ. ಎರಡು ಹಾಡುಗಳಿಗೆ ವಿಜಯಪ್ರಕಾಶ್‌, ಅನುರಾಧಭಟ್‌ ಮತ್ತು ಚಿಂತನ್‌ ಹಾಡಿದ್ದಾರೆ. ಸದ್ಯಕ್ಕೆ ಸಂಕಲನದ ಕೆಲಸದಲ್ಲಿರುವ “ರಾಮನ ಸವಾರಿ’, ಸೆನ್ಸಾರ್‌ಗೆ ರೆಡಿಯಾಗುತ್ತಿದೆ. ಜಯಂತಿ ಮರುಳಸಿದ್ದಪ್ಪ ಅವರು ವಸ್ತ್ರವಿನ್ಯಾಸ ಮಾಡಿದ್ದಾರೆ. ವಿಶ್ವನಾಥ್‌ ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next