Advertisement

ಶಿವರಾಮೇಗೌಡ, ಸುರೇಶ್‌ಗೌಡ ಶೀಘ್ರ ಜೆಡಿಎಸ್‌ ತೆಕ್ಕೆಗೆ

03:45 AM Apr 09, 2017 | Team Udayavani |

ಬೆಂಗಳೂರು: ದಿಢೀರ್‌ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಂಡ್ಯದ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕರಾದ ಕಾಂಗ್ರೆಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಹಾಗೂ ಸುರೇಶ್‌ಗೌಡ ಜೆಡಿಎಸ್‌ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.

Advertisement

ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅಡ್ಡಮತದಾನ ಮಾಡಿದ ಆರೋಪದ ಮೇಲೆ ಪಕ್ಷದಿಂದ ಅಮಾನತುಗೊಂಡಿರುವ ನಾಗಮಂಗಲದ ಹಾಲಿ ಶಾಸಕ ಚಲುವರಾಯಸ್ವಾಮಿ ಅವರಿಗೆ ರಾಜಕೀಯವಾಗಿ ತಿರುಗೇಟು ನೀಡಲು ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌. ಡಿ.ಕುಮಾರಸ್ವಾಮಿಯವರ ತಂತ್ರಗಾರಿಕೆ ಭಾಗವಾಗಿ ಈ ಬೆಳವಣಿಗೆ ನಡೆದಿದ್ದು, ಏ.10ರಂದು ಪಕ್ಷ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ.

ಮಂಡ್ಯ ಸಂಸದ ಸಿ.ಎಸ್‌.ಪುಟ್ಟರಾಜು, ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ, ಬಿ.ಎಂ.ಫ‌ರೂಕ್‌ ಜತೆಗೂಡಿ ಮೊದಲು ಎಚ್‌.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ನಂತರ ಗೌಡರ ಸೂಚನೆ ಮೇರೆಗೆ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಸ್ಥಾನಮಾನ ಚರ್ಚೆ: ಶನಿವಾರ ಎಲ್‌.ಆರ್‌. ಶಿವರಾಮೇಗೌಡ ಹಾಗೂ ಸುರೇಶ್‌ಗೌಡ ಅವರು ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಪಕ್ಷದಲ್ಲಿನ ಸ್ಥಾನಮಾನ ಕುರಿತು ಚರ್ಚಿಸಿ ಸೇರ್ಪಡೆಗೆ ಸಮ್ಮತಿ ಸೂಚಿಸಿದರು.

ಮಾತುಕತೆಯ ಪ್ರಕಾರ ಇಬ್ಬರಲ್ಲಿ ಒಬ್ಬರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಾಗಮಂಗಲ ಕ್ಷೇತ್ರದ ಟಿಕೆಟ್‌ ಸಿಗಲಿದೆ. ಮತ್ತೂಬ್ಬರಿಗೆ ಮುಂದಿನ ದಿನಗಳಲ್ಲಿ ಅವಕಾಶವಿದ್ದರೆ ವಿಧಾನ ಪರಿಷತ್‌ ಸದಸ್ಯತ್ವ ಅಥವಾ ಪಕ್ಷ ಅಧಿಕಾರಕ್ಕೆ ಬಂದರೆ ಬೇರೆ ರೀತಿಯ ಸ್ಥಾನಮಾನ ಲಭ್ಯವಾಗಲಿದೆ.

Advertisement

“ವಿಧಾನಸಭೆ ಚುನಾವಣೆಗೆ  ಯಾರು ಸ್ಪರ್ಧಿಸಬೇಕು ಎಂಬುದನ್ನು ನೀವಿಬ್ಬರೇ ತೀರ್ಮಾನಿಸಿ ಇಬ್ಬರೂ ಒಪ್ಪುವ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗುವುದು. ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ನಿಮ್ಮ ಜವಾಬ್ದಾರಿ’ ಎಂದು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಭೇಟಿ ಯತ್ನ ವಿಫ‌ಲ
ಸಹೋದರಿ ಮದುವೆ ಆಹ್ವಾನ ಪತ್ರಿಕೆ ನೀಡುವ ಸಲುವಾಗಿ ಪಕ್ಷದಿಂದ ಆಮಾನತು ಗೊಂಡಿರುವ ಶ್ರೀರಂಗಪಟ್ಟಣ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ಕುಮಾರ ಸ್ವಾಮಿ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಭೇಟಿ ಸಾಧ್ಯವಾಗಲಿಲ್ಲ. ಆಹ್ವಾನ ಪತ್ರ ಕೊಟ್ಟುವಾಪಸ್ಸಾದರು. ಆದರೆ, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ತಮಗೆ ಮುಖಭಂಗ ಉಂಟುಮಾಡಿದ ರಮೇಶ್‌ ಬಂಡಿಸಿದ್ದೇಗೌಡರ ಬಗ್ಗೆ ಬೇಸರಗೊಂಡಿದ್ದ ಕುಮಾರಸ್ವಾಮಿ ಭೇಟಿಗೆ ಅವಕಾಶ ಕೊಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಶಿವರಾಮೇಗೌಡ, ಸುರೇಶ್‌ಗೌಡ ಭೇಟಿ ಮಾಡಿದ್ದು ನಿಜ. ಜೆಡಿಎಸ್‌ಗೆ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಅಂತಿಮ ನಿರ್ಧಾರ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತೆಗೆದುಕೊಳ್ಳಲಿದ್ದಾರೆ. ಮೊದಲು ಜೆಡಿಎಸ್‌ ಸೇರಲಿ, ಆಮೇಲೆ ಟಿಕೆಟ್‌ ಕೊಡೋ ವಿಚಾರ ತೀರ್ಮಾನ ಆಗುತ್ತದೆ.
● ಎಚ್‌.ಡಿ.ದೇವೇಗೌಡ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

ಸಿದ್ದರಾಮಯ್ಯ ಅವರು ನಾಗಮಂಗಲದಲ್ಲಿ ಯಾರಿಗಾದ್ರೂ ಟಿಕೆಟ್‌ ಕೊಡಲಿ. ನಾನು ಏ.10ರಂದು ಜೆಡಿಎಸ್‌ ಸೇರುತ್ತಿದ್ದೇನೆ. ಜೆಡಿಎಸ್‌ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಟಿಕೆಟ್‌ ಘೋಷಣೆ ನಿರ್ಧಾರಕ್ಕೆ ನಾನು, ಸುರೇಶ್‌ಗೌಡ ಬದ್ಧರಾಗಿರುತ್ತೇವೆ. ನಮ್ಮಿಬ್ಬರಲ್ಲಿ ಒಬ್ಬರು ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇವೆ.
● ಎಲ್‌.ಆರ್‌.ಶಿವರಾಮೇಗೌಡ ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next