ಶಿರಸಿ: ತಾಲೂಕಿನ ಜಡ್ಡಿಗದ್ದೆ ಸಮೀಪದ ಕಾನನದ ನಡುವೆ ಜಲಧಾರೆಯಗಿ ಬೋರ್ಗರೆಯುವ ಶಿವಗಂಗಾ ಜಲಪಾತ ನಿರ್ಲಕ್ಷ್ಯದ ತಾಣವಾಗಿ ಮಾರ್ಪಟ್ಟಿದೆ. ಕನಿಷ್ಟ ಮೂಲ ಸೌಲಭ್ಯ, ನಿರ್ವಹಣೆಯೂ ಇಲ್ಲದಂತಾಗಿದೆ. ಜಲಪಾತ ಪ್ರದೇಶಕ್ಕೆ ಕಾಯಕಲ್ಪ ನೀಡಬೇಕು ಎಂಬ ಬೇಡಿಕೆ ವ್ಯಾಪಕವಾಗಿದೆ.
ನಗರದಿಂದ 33 ಕಿಮೀ, ಜಡ್ಡಿಗದ್ದೆಯಿಂದ 2 ಕಿಮೀಗಿಂತ ಹೆಚ್ಚು ದೂರ ಇರುವ ಜಲಪಾತ ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿದರೆ ಬೇಸಿಗೆಯ ಜನವರಿವರೆಗೂ ನೀರಿನ ಹರಿವು ಇರುತ್ತದೆ. ಸಮೃದ್ಧ ಹಸಿರು ಪರಿಸರದ ಕಲ್ಲಿನ ಪದರಗಳ ನಡುವೆ ಹಾಲಿನಂತೆ ಕೆಳಕ್ಕಿಳಿಯುವ ಈ ಜಲಪಾತ ನೋಡಲು ಶಿರಸಿ ತಾಲೂಕು, ಜಿಲ್ಲೆಯಷ್ಟೆ ಅಲ್ಲದೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ ಹೀಗೆ ನಾಡಿನ ನಾನಾ ಕಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ.
ಇಲ್ಲಿನ ಅಭಿವೃದ್ಧಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ 40 ಲಕ್ಷ ರೂ.ಅನುದಾನ ಒದಗಿಸಿದ್ದು, ಅದರಲ್ಲಿ ಏಳು ಲಕ್ಷ ರೂ. ಕಾಮಗಾರಿಯಷ್ಟೇ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನುಳಿದ ಮೊತ್ತದ ಕಾಮಗಾರಿಯನ್ನು ಲ್ಯಾಂಡ್ ಆರ್ಮಿಯವರು ನಿರ್ವಹಿಸಬೇಕಿದೆ.
ಶಿವಗಂಗಾ ಜಲಪಾತವನ್ನು ನೋಡುವುದಕ್ಕೆ ಮೇಲ್ಭಾಗದಲ್ಲಿಯೇ ವೀಕ್ಷಣಾ ಗೋಪುರವಿದೆ. ಹೆಂಚಿನ ಮಾಡಿನ ಗೋಪುರದ ಛಾವಣಿಯ ಒಂದು ಭಾಗ ಮುರಿದು ಬಿದ್ದಿದೆ. ವರ್ಷದ ಅವಧಿಯಲ್ಲಿ ಈ ಸ್ಥಿತಿ ಉಂಟಾದರೂ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವ ಸ್ಥಿತಿಯಿದೆ. ಜಲಪಾತ ನೋಡಲು ಬಂದವರ ತಲೆ ಮೇಲೆ ಎಲ್ಲಿ ಮಾಡು ಹೆಂಚು ಬೀಳುತ್ತದೆಯೋ ಎಂಬ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ವೀಕ್ಷಣಾ ಸ್ಥಳ ತೀರಾ ಇಕ್ಕಟ್ಟಾಗಿದ್ದು, ಇದನ್ನು ತೆಗೆದು ವಿಶಾಲವಾದ ಜಾಗವನ್ನು ವೀಕ್ಷಣೆಗೆ ಮಾಡಬೇಕಿದೆ. ಗಣೇಶಪಾಲ್ ಹೊಳೆಗೆ ಹೋಗುವ ಮಾರ್ಗದಂಚಿನಿಂದ ಒಂದು ಕಿಮೀ ದೂರ ಶಿವಗಂಗಾ ಜಲಪಾತಕ್ಕೆ ತೆರಳಬೇಕು. ಆದರೆ ರಸ್ತೆ ಮಾತ್ರ ಕಿತ್ತು ಹೋಗಿದೆ. ತೀರಾ ಇಕ್ಕಟ್ಟಾದ ರಸ್ತೆ ಇದಾಗಿದ್ದು, ಇದರ ದುರಸ್ತಿಕಾರ್ಯವೂ ಆಗಿಲ್ಲ. ಇದರಿಂದ ಪ್ರವಾಸಿಗರಿಗೆ ಸಂಚಾರಕ್ಕೆ ಸಂಕಟ ಎದುರಿಸುವಂತಾಗಿದೆ.
ಶಿವಗಂಗಾ ಜಲಪಾತನ್ನು ಮೇಲ್ಭಾಗದಿಂದ ನೋಡಿ ಬರುವುದನ್ನು ಬಿಟ್ಟು ನೀರು ಪ್ರದೇಶಕ್ಕೆ ಕೆಳಗಿಳಿದು ಪ್ರವಾಸಿಗರು ತೆರಳುತ್ತಾರೆ. ಅಲ್ಲಿನ ಅಪಾಯದ ಅರಿವಿಲ್ಲದೇ ಜೀವಹಾನಿಯಾದ ಘಟನೆ ನಡೆದಿದೆ. ಇದಕ್ಕಾಗಿ ಕೆಳಗಿಳಿಯದಂತೆ ಎಚ್ಚರಿಕೆಯ ತಾತ್ಕಾಲಿಕ ಬೋರ್ಡ್ ಹಾಕಿಡಲಾಗಿದೆ. ಅದನ್ನೂ ಲೆಕ್ಕಿಸದೇ ಪ್ರವಾಸಿಗರು ತೆರಳುತ್ತಾರೆ.