Advertisement

ನದಿಗಳಿಗೆ ತ್ಯಾಜ್ಯ ಸೇರುತ್ತಿದ್ದರೂ ತಣ್ಣಗೆ ಕುಳಿತಿರುವ ನ.ಪಂ.

01:01 PM Apr 01, 2017 | |

ಸುಳ್ಯ: ಒಂದು ಹನಿ ಒಳ್ಳೆಯ ನೀರಿದ್ದರೂ ವ್ಯರ್ಥ ಮಾಡಬೇಡಿ ಎಂದು ಎಲ್ಲೆಡೆ ಕೂಗು ಕೇಳಿಬರುತ್ತಿರುವಾಗ, ಕೆಲವೇ ದಿನಗಳಲ್ಲಿ ಸುಳ್ಯ ನಗರಕ್ಕೆ ನೀರಿನ ಮೂಲವಾದ ಪಯಸ್ವಿನಿ ಮತ್ತು ಕಂದಡ್ಕ ಹೊಳೆಯ ನೀರು ಕುಡಿಯದಂತಾಗದ ಸ್ಥಿತಿ ಉದ್ಭವಿಸಿದೆ. ಇದರೊಂದಿಗೇ ಕಂದಡ್ಕ ಹೊಳೆಗೆ ಮಣ್ಣು ಇತರ ತ್ಯಾಜ್ಯವನ್ನು ಸುರಿಯುತ್ತಿದ್ದು ಸ್ಥಳೀಯಾಡಳಿತ ಸುಮ್ಮನಿದೆ.

Advertisement

ನಗರ ಪಂಚಾಯತ್‌ ಅಧಿಕಾರಿಗಳು, ಜನಪ್ರತಿನಿಧಿಗಳಾರೂ ಇದರ ಬಗ್ಗೆ ಹೆಚ್ಚು ಯೋಚಿಸಿದಂತೆ ತೋರುತ್ತಿಲ್ಲ ಎಂಬ ನಾಗರಿಕರ ಅಭಿಪ್ರಾಯ ಕೇಳಿಬರುತ್ತಿದೆ.

ಒಳಚರಂಡಿಯ ಕಥೆ
ನಗರದ ಮೂರನೇ ಒಂದು ಭಾಗಕ್ಕಷ್ಟೇ ಒಳಚರಂಡಿ ಯೋಜನೆ ಜಾರಿಯಾಗಿದೆ. ಅದರಲ್ಲೂ ಕೊಳಚೆ ಹರಿಯಲು ಸಮರ್ಪಕ ವ್ಯವಸ್ಥೆ ಕಲ್ಪಿಸಿಲ್ಲ. ಇದರೊಂದಿಗೆ ಇನ್ನುಳಿದ ಪ್ರದೇಶಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಹಾಗಾಗಿ ನಗರದ ಬಹುತೇಕ ಕೊಳಚೆ ಮತ್ತು ಮಳೆ ನೀರು ಪಯಸ್ವಿನಿ ಮತ್ತು ಅದರ ಉಪನದಿ ಕಂದಡ್ಕ ಹೊಳೆಗೆ ಸೇರುತ್ತಿದೆ. 

ಇದರಿಂದ ನದಿಯ ನೀರೂ ಕುಡಿಯದಂತಾಗಿ ಪರಿಣಮಿಸುತ್ತಿದೆ. ಬಿಸಿಲಿನ ಝಳ ದಿನೇ ದಿನೆ ಹೆಚ್ಚು ತ್ತಿದ್ದು, ನದಿಗಳಲ್ಲೂ ನೀರಿನ ಪ್ರಮಾಣ ಕುಸಿಯುತ್ತಿದೆ. ಅಲ್ಲಲ್ಲಿರುವ ಹೊಂಡಗಳಲ್ಲಿ ಕೊಳಚೆ ನೀರು ಮಡು ಗಟ್ಟಿ ದುರ್ವಾಸನೆ ಬೀರುತ್ತಿದೆ. 

ನೀರೆಲ್ಲ ಕಪ್ಪುಬಣ್ಣಕ್ಕೆ ತಿರುಗಿದೆ. ಮಳೆ ಬಂದಾಗ ಈ ಕೊಳಚೆಯೆಲ್ಲ ಮತ್ತೆ ಪಯಸ್ವಿನಿಯನ್ನೇ ಸೇರುತ್ತದೆ. ಇದೇ ನೀರನ್ನು ಹಲವು ಪ್ರದೇಶದವರು ಕುಡಿಯಲು ನೇರವಾಗಿ ಬಳಸುತ್ತಿದ್ದು ಆರೋಗ್ಯಕ್ಕೆ ಮಾರಕವಾಗುವ ಭೀತಿ ಎದುರಿಸುತ್ತಿದ್ದಾರೆ. ಜಲಚರಗಳ ಪ್ರಾಣಕ್ಕೂ ಕಂಟಕವಾಗಲಿದೆ. ನದಿಯಲ್ಲಿ ಪ್ಲಾಸ್ಟಿಕ್‌ ರಾಶಿ ಕಂದಡ್ಕ ಹೊಳೆಯಲ್ಲಿ ಪ್ಲಾಸ್ಟಿಕ್‌ ಬಾಟಿÉ,ತಟ್ಟೆ, ಕಸಕಡ್ಡಿ, ಕೊಚ್ಚೆ, ಬಟ್ಟೆ ಬರೆ ಎಲ್ಲವೂ ತುಂಬಿ ಕಲುಷಿತಗೊಂಡಿದೆ.ಈಗಾಗಲೇ ಹೊಳೆಯಲ್ಲಿದ್ದ ಜಲಚರಗಳೆಲ್ಲ ನಾಶವಾಗಿವೆ. ಈ ತ್ಯಾಜ್ಯ ಗುಂಡಿಯಲ್ಲಿನ ಕೊಳೆತ ಆಹಾರ, ನೀರನ್ನು ಸೇವಿಸಿದ ಪ್ರಾಣಿ-ಪಕ್ಷಿಗಳೂ ಸಾಯುವ ಸ್ಥಿತಿಯಲ್ಲಿವೆ.

Advertisement

ಹೊಳೆಗೆ ಮಣ್ಣು  !
ಇನ್ನೊಂದೆಡೆ ಎಲ್ಲೆಂದರಲ್ಲೇ ಕೆಂಪುಮಣ್ಣು ಹಾಗೂ ಮರದ ಬೊಡ್ಡೆ ಇನ್ನಿತರ ತ್ಯಾಜ್ಯಗಳನ್ನು ಲಾರಿಯಲ್ಲಿ ತುಂಬಿಕೊಂಡು ಕಂದಡ್ಕ ಹೊಳೆಗೆ ಸುರಿಯಲಾಗುತ್ತಿದೆ. ಹೀಗೆ ಮಣ್ಣು  ಸುರಿಯುತ್ತಾ ಬಂದರೆ ಮುಂದೆ ಮಳೆಗಾಲದಲ್ಲಿ ಹೊಳೆ ತುಂಬಿ ಪ್ರವಾಹ ಎದುರಾಗಬಹುದು ಎಂಬುದು ಸಾರ್ವಜನಿಕರ ಆತಂಕ.

ರೋಗಕ್ಕೆ ಆಹ್ವಾನ?
ಡೆಂಗ್ಯೂ, ಚಿಕುನ್‌ಗುನ್ಯಾ, ಜಾಂಡೀಸ್‌, ಒಂದಲ್ಲೊಂದು ರೋಗ ಸುಳ್ಯದಲ್ಲಿ ಕಾಣಿಸಿ ಕೊಳ್ಳುತ್ತಿದ್ದು, ಇದಕ್ಕೆಲ್ಲ ಮೂಲ ಈ ಕೊಳಚೆ ಗುಂಡಿಗಳೇ ಎನ್ನಲಾಗುತ್ತಿದೆ. ಇನ್ನೊಂದೆಡೆ ಮೀನು ಹಿಡಿಯಲು ವಿಷಕಾರಕ ಸಿಡಿ ಮದ್ದನ್ನು ನದಿ ನೀರಿಗೆ ಹಾಕುವ ತಂಡದ ಭೀತಿಯೂ ಇದೆ. 

ಕ್ರಮಕೈಗೊಳ್ಳುತ್ತೇವೆ
ನದಿ ಪಾತ್ರಕ್ಕೆ ಮಣ್ಣು ಸುರಿಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
– ಚಂದ್ರಕುಮಾರ್‌ 
ಮುಖ್ಯಾಧಿಕಾರಿ, ನಗರ ಪಂಚಾಯತ್‌ ಸುಳ್ಯ

ನೀರು ದುರ್ವಾಸನೆಯಿಂದ ಕೂಡಿದೆ 
ಕಂದಡ್ಕ ಹೊಳೆ ದಂಡೆಯಲ್ಲಿರುವ ಕೃಷಿಗೆ ಈ ನೀರನ್ನೇ ಬಳಸುತ್ತಿದ್ದಾರೆ. ಅಲ್ಲಲ್ಲಿ ಹೊಂಡದಲ್ಲಿರುವ ನೀರನ್ನು ಪಂಪ್‌ ಮೂಲಕ ತೋಟಕ್ಕೆ ಹಾಯಿಸುತ್ತಾರೆ. ಸ್ಪ್ರಿಂಕ್ಲರ್‌ ಮೂಲಕವೂ ಬಳಸಲಾಗುತ್ತಿದೆ. ಮಲಿನಗೊಂಡ ಈ ನೀರು ದುರ್ವಾಸನೆಯಿಂದ ಕೂಡಿದ್ದು, ತೋಟದಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ.
– ರಘುನಾಥ ಸುಳ್ಯ

– ಗಂಗಾಧರ ಮಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next