ಉಪ್ಪಿನಂಗಡಿ: ಮೆಸ್ಕಾಂ ಸಬ್ ಸ್ಟೇಷನ್ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಿರುವ ನಿವೇಶನದ ಮಂಜೂರಾತಿ ಕಾರ್ಯ ಕೊನೆಯ ಹಂತದಲ್ಲಿದ್ದು, ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇಲ್ಲಿನ ಮಠ ಹಿರ್ತಡ್ಕ ಬಳಿಯ ರಾ.ಹೆ. 75ಕ್ಕೆ ಹೊಂದಿಕೊಂಡು ಗೋಮಾಳ ಮೀಸಲು ಜಾಗವಿದೆ. ಈ ಜಾಗದ ಬಳಕೆಗಾಗಿ ಸಾರ್ವಜನಿಕ ಸೇವೆಯಡಿ ನಿವೇಶನ ನೀಡುವಂತೆ ಮೆಸ್ಕಾಂ ಕೋರಿಕೆ ಸಲ್ಲಿಸಿತ್ತು. ಈ ಕಡತ ತಾಲೂಕು ಕಚೇರಿಯಲ್ಲೇ ಬಾಕಿಯಾಗಿತ್ತು. ತಹಶೀಲ್ದಾರ್ ನಿರ್ದೇಶನದಲ್ಲಿ ನಿವೇಶನದ ಜಂಟಿ ಸರ್ವೇ ನಡೆಸಲಾಗಿದ್ದು, ಇಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲ ಎನ್ನುವ ವರದಿಯನ್ನು ತಾಲೂಕು ದಂಡಾಧಿಕಾರಿಗಳು ಸಲ್ಲಿಸಿದ್ದಾರೆ. ಕಂದಾಯ ಇಲಾಖೆಯ ಈ ವರದಿ ಪುತ್ತೂರು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳನ್ನು ತಲುಪಿದೆ. ಅವರು ಜಾಗ ಮಂಜೂರು ಮಾಡಬೇಕಿದೆ.
ಮೆಸ್ಕಾಂ ಸಬ್‌ಸ್ಟೇಶನ್‌ಗೆ ನಿವೇಶನ ಸಿಕ್ಕಿದಲ್ಲಿ ಉಪ್ಪಿನಂಗಡಿಯ 6 ವಿಭಾಗಗಳಾದ 34 ನೆಕ್ಕಿಲಾಡಿ ಗ್ರಾಮ, ಕೊಯಿಲ, ಹಿರೇಬಂಡಾಡಿ, ಆಲಂಕಾರು, ರಾಮಕುಂಜ ಮೊದಲಾದ ಗ್ರಾಮಗಳ ಹಲವು ವರ್ಷಗಳ ಬೇಡಿಕೆ ಈಡೇರಿಸಲು ಸಾಧ್ಯವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ಪುತ್ತೂರು ಉಪವಿಭಾಗದ ಸಹಾಯಕ ಎಂಜಿನಿಯರ್ ರಾಮಚಂದ್ರ, ಮೆಸ್ಕಾಂನ 33 ಕೆ.ವಿ. ಸಬ್‌ಸ್ಟೇಷನ್ ಹಾಗೂ ಲೈನ್ ಸಂಪರ್ಕಕ್ಕಾಗಿ ಯೋಜನೆಯೊಂದರಡಿ 8 ಕೋ.ರೂ. ಮಂಜೂರು ಗೊಂಡಿದೆ. ಕಂದಾಯ ಇಲಾಖೆ ನಿವೇಶನ ಒದಗಿಸಿದರೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರಯಲಿದೆ ಎಂದವರು ತಿಳಿಸಿದರು.
ಉಪ್ಪಿನಂಗಡಿ ಮೆಸ್ಕಾಂ ಶಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ, ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯೆ ಸುಜಾತಾಕೃಷ್ಣ, ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್, ಸದಸ್ಯರಾದ ಚಂದ್ರಶೇಖರ ಮಡಿವಾಳ, ಸುನೀಲ್ ದಡ್ಡು, ಯು.ಟಿ. ತೌಸಿಫ್, ಸುರೇಶ ಅತ್ರಮಜಲು, ರಮೇಶ ಭಂಡಾರಿ, ಸ್ಥಳೀಯ ಮುಖಂಡರಾದ ಜಗದೀಶ ಶೆಟ್ಟಿ, ಸದಾನಂದ ಕಾರ್ ಕ್ಲಬ್ ಉಪಸ್ಥಿತರಿದ್ದರು.
ಶಾಸಕರ ಸ್ಪಂದನೆ
ಶಾಸಕರಾಗಿ ಮಠಂದೂರು ಆಯ್ಕೆಯಾದ ಬೆನ್ನಲ್ಲೇ ಮೆಸ್ಕಾಂ ಅಧಿಕಾರಿಗಳ ಸಭೆ ಕರೆದು ಉಪ್ಪಿನಂಗಡಿ ಸಬ್‌ಸ್ಟೇಷನ್ ಕಡತ ಪರಿಶೀಲಿಸಿದ್ದಾರೆ. ತತ್ ಕ್ಷಣವೇ ವಿಲೇವಾರಿ ನಡೆಸಲು ತಾಲೂಕು ದಂಡಾಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಾಗಿ ಮಂಜೂರಾತಿ ಕೆಲಸ ಕೊನೆ ಹಂತಕ್ಕೆ ಬರಲು ಸಾಧ್ಯವಾಯಿತು. ಸಬ್‌ಸ್ಟೇಶನ್ ಕುರಿತಾಗಿ ‘ಉದಯವಾಣಿ’ ಸುದಿನ ಮೂರು ಕಂತುಗಳ ವಿಶೇಷ ವರದಿ ಪ್ರಕಟಿಸಿತ್ತು.