ಹೆಬ್ರಿ: ರಾಜ್ಯದಲ್ಲಿ ಎಷ್ಟೋ ಜನ ನಿವೇಶನ ರಹಿತರಿದ್ದಾರೆ ಅಂಥವರಿಗೆ ನಿವೇಶನ ನೀಡುವ ಯೋಜನೆಯನ್ನು ಸರಕಾರ ಹಾಕಿಕೊಂಡಿದ್ದು ಸಾಕಷ್ಟು ಅರ್ಜಿಗಳು ಬಂದಿವೆ. ಆದರೆ ವಿವಿಧ ಕಾರಣಗಳಿಂದ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿದೆ. ಅಂತಹ ಅರ್ಜಿಗಳನ್ನು ಪರಿಶೀಲಿಸಿ ಆರ್ಹ ಫಲಾನುಭವಿಗಳಿಗೆ ಶೀಘ್ರವೇ ಅವಕಾಶ ಕಲ್ಪಿಸಲಾಗುವುದು ಎಂದು ಮಾಜಿ ಸಚಿವ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಮಾ. 7ರಂದು ಹಿರಿಯಡಕ ಬೊಮ್ಮರಬೆಟ್ಟು ಗ್ರಾ.ಪಂ.ನ ಆಶ್ರಯದಲ್ಲಿ ಹಿರಿಯಡಕ ಗಣೇಶ ಕಲಾಮಂದಿರದಲ್ಲಿ ನಡೆದ ಸರಕಾರದ ವಿವಿಧ ಇಲಾಖೆಗಳ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸವಲತ್ತು ವಿತರಿಸಿ ಮಾತನಾಡಿದರು.
ಅವ್ಯವಹಾರ ತಪ್ಪಿಸಲು ಬಹಿರಂಗ ವಿತರಣೆ ಆರ್ಹ ಫಲಾನುಭವಿಗಳಿಗೆ ಸರಕಾರ ದಿಂದ ಸಿಗಬೇಕಾದ ಸವಲತ್ತು ಗಳನ್ನು ಪಡೆದು ಕೊಳ್ಳಲು ಕೆಲವೊಂದು ಪ್ರದೇಶಗಳಲ್ಲಿ ಜನಪ್ರತಿನಿಧಿ ಗಳು ಬಡ ಕುಟುಂಬದ ವರಿಂದ ಹಣವನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದೆ. ಇಂತಹ ಪ್ರಸಂಗಗಳನ್ನು ತಪ್ಪಿಸಲು ಜನರ ಬಳಿಗೆ ಹೋಗಿ ಬಹಿರಂಗ ವಾಗಿ ಆರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಿಕೊಳ್ಳ ಲಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಆರ್. ಕೇಲ್ಕರ್, ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀನಾರಾಯಣ ಪ್ರಭು, ಸಂಧ್ಯಾ ಎಸ್. ಶೆಟ್ಟಿ, ಬೊಮ್ಮರಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಮಾಲತಿ ಆಚಾರ್ಯ, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ರಾಜು ಪೂಜಾರಿ, ವಿನೋದ ಕುಮಾರ್, ಪ್ರಮೀಳಾ ಶೆಟ್ಟಿಗಾರ್, ಆಶಾಲತಾ ಜಿ. ಶೆಟ್ಟಿ, ಸುಂದರ ಪೂಜಾರಿ, ಗಣೇಶ್ ನಾಯಕ್, ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.