Advertisement

‘ಗ್ರಾಮಕ್ಕೆ ನಡೆಯೋಣ, ದೇಶವನ್ನು ತಿಳಿಯೋಣ’: ಸೀತಾರಾಮ ಕೆದಿಲಾಯ

03:40 AM Jul 15, 2017 | Team Udayavani |

ಹಳೆಯಂಗಡಿ: ಗ್ರಾಮದಿಂದ ಗ್ರಾಮಕ್ಕೆ ನಡೆಯಬೇಕು, ಗ್ರಾಮಗಳೇ ದೇಶದ ಉಸಿರು ಎನ್ನುವುದನ್ನು ಪ್ರತಿಪಾದಿಸುತ್ತಾ ಪಾದಯಾತ್ರೆ ಮೂಲಕ ಭಾರತೀಯ ಸಂಸ್ಕೃತಿಯನ್ನು ಪ್ರಚುರಪಡಿಸಲು ದೇಶದಲ್ಲಿ 26,750 ಕಿ.ಮೀ. ದೂರವನ್ನು 1795 ದಿನದಲ್ಲಿ ಪರಿಕ್ರಮಿಸಿದ್ದೇನೆ ಎಂದು ಆರೆಸ್ಸೆಸ್‌ನ ಅಖಿಲ ಭಾರತ ಮಾಜಿ ಹಿರಿಯ ಪ್ರಚಾರಕ್‌ ಸೀತಾರಾಮ ಕೆದಿಲಾಯ ಅವರು ಹೇಳಿದರು. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಅವರು ಮಾತನಾಡುತ್ತಾ, ನನ್ನ ಯಾತ್ರೆಗೆ ನಿರ್ದಿಷ್ಟವಾದ ಪೂರ್ವ ಉದ್ದೇಶವಿಲ್ಲ. ಆದರೆ ಪಾದಯಾತ್ರೆಯ ಮೂಲಕವೇ ನನ್ನ ಉದ್ದೇಶ ಸಿದ್ಧಿಸಿದೆ. ನಡೆಯುವ ಸ್ವಭಾವವನ್ನು ನೆನಪಿಸಿದ್ದೇನೆ, ಕಿವಿಯನ್ನು ಕೇಳಿಸಿಕೊಳ್ಳಲು ಬಳಸದೇ ಇದ್ದರೇ, ಕಣ್ಣನ್ನು ನೋಡಲು ಬಳಸದೇ ಇದ್ದರೇ ಏನಾಗುತ್ತದೆಯೋ ಅದೇ ಸಮಸ್ಯೆ ನಡೆಯದೇ ಇದ್ದರೇ ನಮ್ಮ ದೇಹಕ್ಕೆ ಆಗುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದೇನೆ. ದೇಹ ಆಲಸ್ಯದಿಂದ ಕೂಡಿದಲ್ಲಿ ಸಮಾಜಕ್ಕೆ ಹಾನಿಕಾರಕ ಎಂಬುದನ್ನು ತಿಳಿಹೇಳಲು ಪ್ರಯತ್ನಿಸಿದ್ದೇನೆ ಎಂದರು.

Advertisement

ಉತ್ತರದಲ್ಲಿ ಶ್ರದ್ಧೆ, ದಕ್ಷಿಣದಲ್ಲಿ ಆಚಾರ – ವಿಚಾರ
ಉತ್ತರ ಭಾರತದಲ್ಲಿ ದೇವರ ಶ್ರದ್ಧೆ ಹೆಚ್ಚು ಪ್ರಾಧಾನ್ಯ ಪಡೆದಿದೆ. ದಕ್ಷಿಣದಲ್ಲಿ ಆಂತರ್ಯದಲ್ಲಿನ ಆಚಾರ-ವಿಚಾರಕ್ಕೆ ಮನ್ನಣೆ ನೀಡಲಾಗುತ್ತದೆ. ಉತ್ತರದಲ್ಲಿ ರಾಮಾನುಗ್ರಹ, ಕೃಷ್ಣಾನುಗ್ರಹ ಪ್ರಾಪ್ತಿಯಾಗಿದೆ. ನಮ್ಮಲ್ಲಿ ದೇವರ ಸ್ವರೂಪದ ಬಿಂಬಕ್ಕೆ ಪೂಜೆ ಪುನಸ್ಕಾರ ನಡೆಯುತ್ತದೆ. ಅಲ್ಲಿ ದೇವರೇ ಅವತಾರ ಎತ್ತಿದ್ದರ ಬಗ್ಗೆ ಭಕ್ತಿ ಇದೆ. ಇಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯರು, ರಾಮಾನುಜಾಚಾರ್ಯರ ಮೂಲಕ ದೇವರ ಶಕ್ತಿಯನ್ನು ತೋರಿದ್ದಾರೆ ಎಂದರು.

ನುಡಿದಂತೆ ನಡೆಯೋಣ
ನಮ್ಮಲ್ಲಿ ಮಾತುಗಾರರೇ ಹೆಚ್ಚು. ಹೇಳುವುದೊಂದು ಮಾಡುವುದು ಇನ್ನೊಂದು ಎಂಬಂತೆ ನಮ್ಮಲ್ಲಿ ಸತ್ಯಗಳು ನಶಿಸುತ್ತಿವೆ. ಬದುಕುವುದಕ್ಕಾಗಿ ನುಡಿಯಲ್ಲಿ ವ್ಯತ್ಯಾಸ ಆಗುತ್ತಿದೆ. ನಾವೆಲ್ಲ ಎಂದಿಗೂ ಭೂಮಿಯಲ್ಲಿ ಶಾಶ್ವತವಲ್ಲ, ನಮ್ಮ ನಡೆ ನುಡಿ ಮಾತ್ರ ನಮ್ಮನ್ನು ಜೀವಂತವಾಗಿರಿಸುತ್ತದೆ ಎಂಬುದನ್ನು ಪಾದಯಾತ್ರೆಯ ಸಮಯದಲ್ಲಿ ಕಂಡುಕೊಂಡಿದ್ದೇನೆ ಎಂದು ವಿವರಿಸಿದರು.

ಆಹಾರ – ವಿಹಾರದಲ್ಲಿ ವ್ಯತ್ಯಾಸವೇ ಇಲ್ಲ
ಸಂಪೂರ್ಣ ಭಾರತ ದೇಶದಲ್ಲಿ ಆಹಾರವಾಗಲಿ ವಿಹಾರದಲ್ಲಾಗಲಿ ವ್ಯತ್ಯಾಸವನ್ನು ಕಾಣಲಿಲ್ಲ ಎಂದ ಅವರು, ಹಳ್ಳಿಗಳತ್ತ ಸಾಗುವುದೇ ಒಂದು ಸೋಜಿಗ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಸೀತಾರಾಮ ಕೆದಿಲಾಯರನ್ನು ಸಮ್ಮಾನಿಸಲಾಯಿತು. ದೇಗುಲದ ಧರ್ಮದರ್ಶಿ ಯಾಜಿ ಡಾ| ಎಚ್‌.ನಿರಂಜನ್‌ ಭಟ್‌, ವಿದ್ಯಾಶಂಕರ್‌, ಎಚ್‌.ರಾಮಚಂದ್ರ ಶೆಣೈ, ರವೀಂದ್ರನಾಥ್‌ ರೈ ಪಕ್ಷಿಕೆರೆ, ರಮಣಿ ರೈ, ಕಮಲಾಕ್ಷ ರೈ, ಎಚ್‌.ವಿ.ಕೋಟ್ಯಾನ್‌ ಮೂಲ್ಕಿ, ಅವಿನಾಶ್‌ ಮೂಲ್ಕಿ, ಮನ್ಸೂರ್‌ ಎಚ್‌., ಡಾ| ಜಗದೀಶ್‌ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.

ವಿಶ್ವಜೀದೀಶು ಯಾಗ…
ಚಿಕ್ಕಮಗಳೂರಿನ ವೇದ ವಿಜ್ಞಾನ ಕೇಂದ್ರದ ವೇದ ಕೃಷಿಕ ಕೆ.ಎಸ್‌.ನಿತ್ಯಾನಂದ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಲ್ಲಿ ಸೀತಾರಾಮ ಕೆದಿಲಾಯ ಅವರ ಭಾರತ ಪರಿಕ್ರಮ ಯಾತ್ರೆಯನ್ನು ವಿಶ್ವಜೀದೀಶು ಯಾಗದ ಮೂಲಕ ಕೊನೆಗೊಳಿಸಲಾಗಿತ್ತು. ಪ್ರಕೃತಿಯ ಶುದ್ಧತೆ ಹಾಗೂ ವೈಜ್ಞಾನಿಕವಾಗಿ ಮಾಲಿನ್ಯವನ್ನು ತಡೆಯಲು ಈ ಯಾಗವನ್ನು ಮಾಡಲಾಯಿತು. ಇದರಿಂದ ಜಗತ್ತಿನಲ್ಲಿ ನಾನು ಎನ್ನುವ ಅಹಂ ತೊರೆದು ನಾವು ಎನ್ನುವ ಪರಿಕಲ್ಪನೆ ನಮ್ಮೊಳಗೆ ಮೂಡಲು ಸಾಧ್ಯವಿದೆ ಎಂದರು ಸೀತಾರಾಮ ಕೆದಿಲಾಯರು.

Advertisement

ಗುಜರಾತ್‌ನಲ್ಲಿ ಆರೋಗ್ಯ ಕೆಟ್ಟಿತ್ತು : ರೈ
ಸೀತಾರಾಮ ಕೆದಿಲಾಯರೊಂದಿಗೆ ಕಾಸರಗೋಡಿನಿಂದ ಕನ್ಯಾಕುಮಾರಿಗೆ ಪಾದಯಾತ್ರೆಯಲ್ಲಿ ಜತೆಯಾಗಿದ್ದ ಪಕ್ಷಿಕೆರೆಯ ರವೀಂದ್ರನಾಥ ರೈ ಮಾತನಾಡಿ, ನಾನು ಸಣ್ಣಪುಟ್ಟ ಕಂಟ್ರಾಕ್ಟರ್‌ನಾಗಿದ್ದೆ. ಕೆ.ಎಸ್‌.ನಿತ್ಯಾನಂದ ಸ್ವಾಮೀಜಿಯವರೊಂದಿಗೆ ಇದ್ದ ನನಗೆ ಆಕಸ್ಮಿಕ ಎನ್ನುವಂತೆ ಸೀತಾರಾಮ ಕೆದಿಲಾಯರ ಪರಿಚಯವಾಗಿ ಅವರೊಂದಿಗೆ ಪಾದಯಾತ್ರೆಯಲ್ಲಿ ಸಾಗುವ ಅವಕಾಶ ಸಿಕ್ಕಿತು. ಪಾದಯಾತ್ರೆಯಲ್ಲಿ ಗುಜರಾತ್‌ನಲ್ಲಿದ್ದಾಗ ಇಬ್ಬರ ಆರೋಗ್ಯ ಕೆಟ್ಟಿತ್ತು. ನನಗೆ ವಯಸ್ಸು 66. ಅವರಿಗೆ 74. ಎಷ್ಟೇ ಔಷಧ ತೆಗೆದುಕೊಂಡರೂ ಸಹ ಫಲಕಾರಿಯಾಗಲಿಲ್ಲ. ಕೊನೆಗೆ ನಿತ್ಯಾನಂದ ಸ್ವಾಮೀಜಿಯವರೇ ದೂರವಾಣಿಯ ಮೂಲಕ ಧೈರ್ಯ ತುಂಬಿ ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಪಾದಯಾತ್ರೆ ಮುಂದುವರಿಸಿ ಎಂದರು. ಆ ಮಾತಿನ ಶಕ್ತಿ ನಮ್ಮ ಪಾದಯತ್ರೆಯನ್ನು ಕಾಪಾಡಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next