Advertisement
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಕನಸಿನೊಂದಿಗೆ ರಣೋತ್ಸಾಹದಲ್ಲಿದ್ದ ಜೆಡಿಎಸ್‌ನಲ್ಲಿ ಪ್ರಜ್ವಲ್ ರೇವಣ್ಣ ಪ್ರಸ್ತಾಪಿಸಿದ “ಸೂಟ್‌ಕೇಸ್’ ವಿಚಾರ ಇದೀಗ ಬಹುಚರ್ಚಿತ ವಿಷಯವಾಗಿದೆ. ಹುಣಸೂರಿನ ಕಾರ್ಯಕರ್ತರ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಆಡಿದ ಮಾತುಗಳು ಜೆಡಿಎಸ್ ಪಕ್ಷದಲ್ಲಷ್ಟೇ ಅಲ್ಲದೆ ದೇವೇಗೌಡರ ಕುಟುಂಬದಲ್ಲೂ ಸಣ್ಣ ಮಟ್ಟದ ಬಿರುಕು ಮೂಡಿಸಿದೆ.ಮೇಲ್ನೋಟಕ್ಕೆ ಎಚ್.ವಿಶ್ವನಾಥ್ ಜೆಡಿಎಸ್ ಪ್ರವೇಶ ಇದಕ್ಕೆ ಕಾರಣ ಎಂದು ಕಂಡುಬಂದರೂ ಬೇರೆ ಬೇರೆ ಕಾರಣಗಳೂ ಸಾಕಷ್ಟಿವೆ. ಹಾಸನ ಜಿಲ್ಲಾ ರಾಜಕಾರಣಕ್ಕೆ ಸೀಮಿತವಾಗಿದ್ದ ಭವಿಷ್ಯದಲ್ಲಿ ರಾಜ್ಯ ರಾಜಕಾರಣದ ಕನಸು ಕಂಡಿದ್ದ ಪ್ರಜ್ವಲ್ ರೇವಣ್ಣ ವಯಸ್ಸು ಚಿಕ್ಕದಾದರೂ ಕಳೆದ ಐದು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯ.
Related Articles
Advertisement
ಒಟ್ಟಾರೆ ಪ್ರಹಸನ ದೇವೇಗೌಡರಿಗೆ ಆಘಾತ ತಂದಿದ್ದು, ಪಕ್ಷವೋ ಕುಟುಂಬವೋ ಎಂಬ ಪ್ರಶ್ನೆ ಮುಂದಿಟ್ಟು ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದೋ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರೂ ಸ್ಪರ್ಧೆ ಮಾಡುವುದು ಬೇಡ. ಎಚ್.ಡಿ.ಕುಮಾರಸ್ವಾಮಿ-ಎಚ್.ಡಿ.ರೇವಣ್ಣ ಮಾತ್ರ ಸಾಕು ಎಂಬ ಫರ್ಮಾನು ಹೊರಡಿಸಬೇಕು. ಇಲ್ಲವೋ ತೀರಾ ಒತ್ತಡ ಹೆಚ್ಚಾದರೆ ಅನಿತಾಕುಮಾರಸ್ವಾಮಿ ಯವರಿಗೆ ಚೆನ್ನಪಟ್ಟಣದಲ್ಲಿ ಸ್ಪರ್ಧೆಗೆ ಅನುಮತಿ ನೀಡಿ ಪ್ರಜ್ವಲ್ ರೇವಣ್ಣಗೆ ಬೇಲೂರಿನಲ್ಲಿ ಅನುಮತಿ ನೀಡಬೇಕು. ಇಲ್ಲವೇ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಡ, ಲೋಕಸಭೆಗೆ ಸ್ಪರ್ಧೆ ಮಾಡು ಎಂದು ಸುಮ್ಮನಿರಸಬೇಕು.ಮುಂದಿನ ಲೋಕಸಭೆ ಚುನಾವಣೆಯಲ್ಲೂ ದೇವೇಗೌಡರು ಸ್ಪರ್ಧೆ ಮಾಡಬಹುದು ಎಂದುಕೊಂಡಿರುವ ಪ್ರಜ್ವಲ್ ರೇವಣ್ಣ, ಅದೇ ಕಾರಣಕ್ಕೆ ವಿಧಾನಸಭೆ ಪ್ರವೇಶಕ್ಕೆ ಪಟ್ಟು ಹಿಡಿದಿದ್ದಾರೆ. ಇದರಲ್ಲಿ ಯಾರ ಕೈ ಮೇಲಾಗುತ್ತೆ? ಎಂಬುದು ಕಾದು ನೋಡಬೇಕಿದೆ. ಹಾಗೆ ನೋಡುವುದಾದರೆ, ದೇವೇಗೌಡರ ಕುಟುಂಬದಲ್ಲಿ ಗೌಡರ ನಂತರ ರಾಜಕೀಯಕ್ಕೆ ಬಂದವರು ಎಚ್.ಡಿ.ರೇವಣ್ಣ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯ “ಅರಂಗೇಟ್ರಂ” ಮಾಡಿದ ಅವರು 1994 ರಲ್ಲಿ ಶಾಸಕರಾಗಿ ಜೆ.ಎಚ್.ಪಟೇಲರ ಸಂಪುಟದಲ್ಲಿ ಸಚಿವರೂ ಆದರು. ಹಾಸನದ ಮಟ್ಟಿಗೆ ಪಕ್ಷ ಸಂಘಟನೆಯಲ್ಲೂ ದೇವೇಗೌಡರ ಜತೆಗೂಡಿ ಕೆಲಸ ಮಾಡಿದವರು. ಸಹಕಾರ ಕ್ಷೇತ್ರವನ್ನೂ ಪ್ರವೇಶಿಸಿ ಸುದೀರ್ಘ ಕಾಲ ಕೆಎಂಎಫ್ ಅಧ್ಯಕ್ಷರಾಗಿದ್ದವರು. ರಾಜ್ಯ ರಾಜಕಾರಣದಲ್ಲಿ ಗೌಡರ ನಂತರ ನಾಯಕತ್ವ ವಹಿಸುವ ಆಸೆ ಹೊಂದಿದ್ದವರು. ಆದರೆ, ಗುತ್ತಿಗೆ ಹಾಗೂ ಚಿತ್ರೋದ್ಯಮದಲ್ಲಿ ತೊಡಗಿದ್ದ ಎಚ್.ಡಿ.ಕುಮಾರಸ್ವಾಮಿ ಅನಿರೀಕ್ಷಿತವಾಗಿ 1996ರಲ್ಲಿ ಕನಕಪುರ ( ಈಗಿನ ಬೆಂಗಳೂರು ಗ್ರಾಮಾಂತರ) ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದು ರಾಜಕೀಯ ಪ್ರವೇಶ ಪಡೆದರು. ಇದಾದ ನಂತರ ಸಹಜವಾಗಿ ಕುಮಾರಸ್ವಾಮಿ ಕೇಂದ್ರ ರಾಜಕಾರಣ, ರೇವಣ್ಣ ರಾಜ್ಯ ರಾಜಕಾರಣ ಎಂಬುದು ಕುಟುಂಬದಲ್ಲಿ ಚರ್ಚಿತವಾಗಿತ್ತು. ಆದರೆ, 1998ರ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕುಮಾರಸ್ವಾಮಿ 1999ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿದರು. ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತರೂ ನಂತರ 2004ರಲ್ಲಿ ರಾಮನಗರದಿಂದ ಗೆಲುವು ಸಾಧಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಲ್ಲೂ ಪರೋಕ್ಷ ಪಾತ್ರ ವಹಿಸಿದ್ದರು. ಆದರೆ, ವಿಧಾನಸಭೆಯಲ್ಲಿ ಲಾಸ್ಟ್ ಬೆಂಚ್ “ಶಾಸಕರೇ’ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಜೆಡಿಎಸ್ ತೊರೆದ ನಂತರ ನಡೆದ ವಿದ್ಯಮಾನಗಳಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ 20 ತಿಂಗಳು ಮುಖ್ಯಮಂತ್ರಿಯೂ ಆದರು. ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯ, ಜನತಾದರ್ಶನದಂತಹ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದ ಕುಮಾರಸ್ವಾಮಿ ಕುಮಾರಣ್ಣ ಆಗಿ ಜೆಡಿಎಸ್ ರಾಜ್ಯ ಘಟಕವೂ ಸಂಪೂರ್ಣ ಅವರ ತೆಕ್ಕೆಗೆ ಬಂತು.
ಬಿಜೆಪಿ ಸರ್ಕಾರದಲ್ಲಿ ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಸಹ ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದು ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅನಿತಾ ಕುಮಾರಸ್ವಾಮಿ ಶಾಸಕಿ ಆಗುವುದಾದರೆ ತಾನೂ ಯಾಕೆ ಶಾಸಕಿಯಾಗಬಾರದು ಎಂಬ ಆಸೆ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಲ್ಲೂ ಚಿಗುರೊಡೆಯಿತು. ಆದರೆ, ದೇವೇಗೌಡರು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಅಲ್ಲಿಂದಲೇ ಒಂದು ರೀತಿಯಲ್ಲಿ ಕುಟುಂಬದ ಒಳಗೆ ಅಸಮಾಧಾನ ಪ್ರಾರಂಭವಾಯಿತು. ಕುಮಾರಸ್ವಾಮಿಗಿಂತ ದೊಡ್ಡವರು ಹಾಗೂ ಅವರಿಗಿಂತ ಮುಂಚೆ ರಾಜಕಾರಣಕ್ಕೆ ಬಂದು ದೇವೇಗೌಡರಿಗೆ ಹೆಗಲು ಕೊಟ್ಟ ರೇವಣ್ಣ ಏನೂ ಆಗಲಿಲ್ಲ ಎಂಬ ಬೇಸರ ಇತ್ತು. ದೇವೇಗೌಡರು ಹಾಕಿದ ಗೆರೆ ದಾಟದ ರೇವಣ್ಣನವರಿಗೆ ಆ ರೀತಿಯ ಬೇಸರ ಇಲ್ಲದಿದ್ದರೂ ಪತ್ನಿ ಭವಾನಿ ಅವರಿಗೆ ಇತ್ತು. ಆ ನಂತರ ಪುತ್ರ ಪ್ರಜ್ವಲ್‌ಗೂ ಅದು ಕಾಡುತ್ತಿತ್ತು. ರೇವಣ್ಣ ಉಪ ಮುಖ್ಯಮಂತ್ರಿಯಾದರೂ ಆಗಬೇಕು ಎಂಬ ಆಸೆ ಖುದ್ದು ದೇವೇಗೌಡರಿಗೆ ಇತ್ತು, ಈಗಲೂ ಇದೆ. ಮುಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗುವ ಅನಿವಾರ್ಯತೆ ಅಥವಾ ಸಂದರ್ಭ ಬಂದರೆ ಅದು ಸಾಕಾರವಾಗುವ ಸಾಧ್ಯತೆಯೂ ಇದೆ ಎಂಬ ಮಾತುಗಳೂ ಇವೆ.
ಮುದ್ದಿನ ಮೊಮ್ಮಗಎಚ್.ಡಿ. ದೇವೇಗೌಡರ ಮುದ್ದಿನ ಮೊಮ್ಮಗ ಹಾಗೂ ಹಾಸನ ಲೋಕಸಭೆ ಕ್ಷೇತ್ರಕ್ಕೆ ಗೌಡರ ನಂತರದ ವಾರಸುದಾರ ಎಂದು ಬಿಂಬಿತವಾಗಿರುವ ಪ್ರಜ್ವಲ್ ರೇವಣ್ಣ ರಾಜಕೀಯವಾಗಿ ಬೆಳೆಯುವ ಅವಕಾಶ ಸಾಕಷ್ಟು ಇದ್ದರೂ ಆತುರ ಪಟ್ಟರಾ? ಅಥವಾ ತಾನು ರಾಜಕೀಯವಾಗಿ ಬೆಳೆಯಲು ಕುಟುಂಬದಲ್ಲೇ ಅಡ್ಡಿಯುಂಟಾಗುತ್ತಿದೆ ಎಂದು ಭಾವಿಸಿಕೊಂಡು ಆವೇಶಭರಿತರಾಗಿ ಮಾತನಾಡಿದರಾ? ಎಂಬ ಪ್ರಶ್ನೆಗಳೂ ಇವೆ. ಆದರೂ, ಈ ಘಟನೆ ಪ್ರಜ್ವಲ್ ರಾಜಕೀಯ ಬೆಳವಣಿಗೆಗೆ ತಕ್ಷಣಕ್ಕೆ ಅಡ್ಡಿಯಾಗಲಿದೆ ಎಂಬ ಮಾತುಗಳೂ ಇವೆ. ತಾತನ ತಾಕೀತಿನ ಮೇರೆಗೆ ಪ್ರಜ್ವಲ್ ಸ್ವಲ್ಪ ಕಾಲ ಮೌನವಾಗಿರಲೇಬೇಕು. ಎಸ್.ಲಕ್ಷ್ಮಿನಾರಾಯಣ