Advertisement

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

11:36 PM Sep 20, 2024 | Team Udayavani |

ಬೆಂಗಳೂರು:ಒಕ್ಕಲಿಗ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಸಾಧ್ಯತೆ ಇದೆ. ಈ ಸಂಬಂಧ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಮತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Advertisement

ಒಂದು ದಿನದ ಹಿಂದಷ್ಟೇ ಸಮುದಾಯದ ಸಭೆ ನಡೆಸಿದ್ದ ಒಕ್ಕಲಿಗ ನಾಯಕರು, ಒಮ್ಮತದ ನಿರ್ಣಯ ಕೈಗೊಂಡು ಶುಕ್ರವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಡಾ| ಎಂ.ಸಿ. ಸುಧಾಕರ್‌ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾದರು. ಈ ನಿಯೋಗದಲ್ಲಿ ಶಾಸಕ ಶರತ್‌ ಬಚ್ಚೇಗೌಡ, ರಂಗನಾಥ್‌, ಪುಟ್ಟಣ್ಣಯ್ಯ, ಮೇಲ್ಮನೆ ಮಾಜಿ ಸದಸ್ಯ ಮರಿತಿಬ್ಬೇಗೌಡ ಇದ್ದರು.

ಶಾಸಕ ಮುನಿರತ್ನ ಅವರು ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿದ್ದಾರೆ. ಇದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಈ ಮಧ್ಯೆ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಲಂಚದ ಆರೋಪವೂ ಅವರ ಮೇಲಿದೆ. ಈಗ ಏಡ್ಸ್‌ ಸೋಂಕು ಹರಡುವ ಜಾಲ ಇರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಮನವಿ ಮಾಡಿದರು.

ಅನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶರತ್‌ ಬಚ್ಚೇಗೌಡ, ಪ್ರಜ್ವಲ್‌ ಪ್ರಕರಣದಂತೆ ಮುನಿರತ್ನ ಪ್ರಕರಣ ದಿಗ್ಭ್ರಮೆ ಮೂಡಿಸಿದೆ. ಮುನಿರತ್ನ ಅವರ ಪದ ಬಳಕೆ ಸಮಾಜಕ್ಕೆ ಅಚ್ಚರಿ ತಂದಿದೆ. ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಈ ಮಧ್ಯೆ ಅವರ ವಿರುದ್ಧ ಹನಿಟ್ರ್ಯಾಪ್‌ ಪ್ರಕರಣ ಕೇಳಿಬರುತ್ತಿದೆ. ಅದಕ್ಕಾಗಿ ಅವರನ್ನು ಬಂಧನದಲ್ಲಿಡಬೇಕು. ಅವರ ವಿರುದ್ಧದ ಪ್ರಕರಣಗಳ ವಿಶೇಷ ತನಿಖೆ ಅವಶ್ಯಕತೆ ಇದೆ. ಇದಕ್ಕಾಗಿ ಎಸ್‌ಐಟಿ ರಚಿಸುವಂತೆ ಮನವಿ ಮಾಡಿದ್ದು, ಸಿಎಂ ಕೂಡ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಶಾಸಕ ರಂಗನಾಥ್‌ ಮಾತನಾಡಿ, ಒಂದು ದಿನದ ಹಿಂದಷ್ಟೇ ಸಮುದಾಯದ ಸಭೆ ನಡೆಸಿದ್ದೆವು. ಅಲ್ಲಿ ಕೈಗೊಂಡ ತೀರ್ಮಾನದಂತೆ ಸಿಎಂ ಭೇಟಿ ಆಗಿದ್ದೇವೆ. ಮುನಿರತ್ನ ವಿರುದ್ಧ ಈಗ ಏಡ್ಸ್‌ ಸೋಂಕು ಹರಡುವ ಜಾಲದ ಆರೋಪ ಕೇಳಿಬರುತ್ತಿದೆ. ಮುನಿರತ್ನ ಒಬ್ಬರೇ ಇಲ್ಲ. ಅವರಿಗೆ ಹಲವರ ಕುಮ್ಮಕ್ಕೂ ಇದ್ದು, ಆರ್‌.ಆರ್‌. ನಗರದಲ್ಲಿ ಕೆಲವೆಡೆ ಸೋಂಕಿತರು ಇದ್ದಾರೆ. ಹೀಗಾಗಿ, ಇದರ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ. ಶೀಘ್ರ ಶಾಸಕರಿಂದ ಈ ಸಂಬಂಧ ರಾಜ್ಯಪಾಲರನ್ನೂ ಭೇಟಿ ಮಾಡಿ, ಮನವಿ ಸಲ್ಲಿಸಲಾಗುವುದು’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next