ತಿರುವನಂತಪುರಂ: ದೇಶದೆಲ್ಲೆಡೆ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಕೇರಳದ 21 ವರ್ಷದ ಸಿಸ್ಟರ್ ಅಭಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಾದ ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿಪಾದ್ರಿ ಗೆ ಸಿಬಿಐ ವಿಶೇಷ ಕೋರ್ಟ್ ಬುಧವಾರ(ಡಿಸೆಂಬರ್ 23, 2020) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಕುರಿತಂತೆ ಇಬ್ಬರನ್ನೂ ಸಿಬಿಐ ಕೋರ್ಟ್ ಮಂಗಳವಾರ(ಡಿಸೆಂಬರ್ 22, 2020) ದೋಷಿ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣ ಬುಧವಾರ ಪ್ರಕಟಿಸುವುದಾಗಿ ತಿಳಿಸಿತ್ತು. ಇದು 28 ವರ್ಷಗಳ ಹಿಂದಿನ ಕೊಲೆ ಪ್ರಕರಣವಾಗಿದೆ ಎಂದು ವರದಿ ತಿಳಿಸಿದೆ.
ಏನಿದು ಪ್ರಕರಣ?
ಕೊಟ್ಟಾಯಂನ ಚರ್ಚ್ ವೊಂದರಲ್ಲಿ ನಡೆಯುತ್ತಿದ್ದ ಕೆಲವು ಅನೈತಿಕ ಚಟುವಟಿಕೆಗಳನ್ನು ಸಿಸ್ಟರ್ ಅಭಯಾ ಕಣ್ಣಾರೆ ಕಂಡಿದ್ದರು. ಈ ಹಿನ್ನೆಲೆಯಲ್ಲಿ ವಿಷಯ ಬಹಿರಂಗವಾಗಬಾರದು ಎಂದು ಅಭಯಾ ಅವರನ್ನು ಕೊಡಲಿಯ ಹಿಡಿಕೆಯಿಂದ ಹೊಡೆದು ಕೊಲೆಗೈದಿದ್ದರು.
ಸಿಸ್ಟರ್ ಅಭಯಾ ಅವರನ್ನು ಹತ್ಯೆಗೈದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದ್ದರೂ ಕೂಡಾ ಪ್ರಕರಣ ಮುಚ್ಚಿಹಾಕಲು ಇದೊಂದು ಆತ್ಮಹತ್ಯೆ ಎಂದು ಸ್ಥಳೀಯ ಪೊಲೀಸರು ವರದಿ ನೀಡಿ ಕೇಸ್ ಅಂತ್ಯಗೊಳಿಸಿದ್ದರು. ನಂತರ ಪೋಷಕರ ತೀವ್ರ ವಿರೋಧದ ಪರಿಣಾಮ 2008ರಲ್ಲಿ ಈ ಪ್ರಕರಣ ಸಿಬಿಐಗೆ ವಹಿಸಲಾಗಿತ್ತು. ಇದೀಗ ಬರೋಬ್ಬರಿ 28 ವರ್ಷಗಳ ಬಳಿಕ ಅಭಯಾ ಕೊಲೆ ಪ್ರಕರಣಕ್ಕೆ ನ್ಯಾಯ ದೊರೆತಂತಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.