Advertisement

ನಕಲಿ ಬೀಜ ಮಾರಾಟಗಾರರ ಮೇಲೆ ನಿಗಾ

04:01 PM Jun 10, 2020 | |

ಸಿರುಗುಪ್ಪ: ರೈತರಿಗೆ ಮಾರಾಟಗಾರರು ಕಳಪೆ ಪರಿಕರ, ಬೀಜಗಳನ್ನು ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ಸಿ.ಆರ್‌. ಚಂದ್ರಶೇಖರ್‌ ಹೇಳಿದರು.

Advertisement

ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ನಡೆದ ಬೀಜ ಮತ್ತು ಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮುಂಗಾರು ಹಂಗಾಮು ಪ್ರಾರಂಭಗೊಂಡಿದೆ. ರೈತರು ಮಳೆಯಾಶ್ರಿತ ಜಮೀನುಗಳಲ್ಲಿ ಹತ್ತಿ, ಮುಸುಕಿನ ಜೋಳ, ಸೂರ್ಯಕಾಂತಿ, ನವಣೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಬಿತ್ತನೆ ಬೀಜಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತಾಲೂಕಿನ ಗಡಿಭಾಗದ ಸೀಮಾಂಧ್ರ ಪ್ರದೇಶದಿಂದ ನಕಲಿ ಹತ್ತಿ ಬೀಜಗಳನ್ನು ಕೂಲ್ಲಾ ತರುತ್ತಿದ್ದು, ತಾಲೂಕಿನ ಮಾರಾಟಗಾರರು ವಿನಿಮಯ ಮಾಡಿಕೊಳ್ಳುತ್ತಿರುವ ಮಾಹಿತಿ ಬಂದಿದೆ. ಕೃಷಿ ಇಲಾಖೆಯ ವಿಜಿಲೆನ್ಸ್‌ ತಂಡದವರು ನಿಗಾವಹಿಸಿದೆ. ಅಂತಹ ಮಾರಾಟಗಾರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಸೀಮಾಂಧ್ರ ಪ್ರದೇಶದಿಂದ ನಕಲಿ ಹತ್ತಿ ಬೀಜಗಳನ್ನು ತಂದು ಮಾರಾಟ ಮಾಡುವವರ ಮೇಲೆ ಕೃಷಿ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಬಂದರೆ ಸಾರ್ವಜನಿಕರು ಮತ್ತು ರೈತರು ಮಾಹಿತಿ ನೀಡಬೇಕು. ತಾಲೂಕಿನ ಹೆಚ್ಚಿನ ಮಾರಾಟಗಾರರು ಇದುವರೆಗೂ ಕೃಷಿ ಇಲಾಖೆಯಿಂದ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳದೇ ಇರುವುದರಿಂದ ಅಂತಹ ಪರವಾನಗಿ ಹೊಂದಿಲ್ಲದ ಮಾರಾಟದ ಅಂಗಡಿಗಳನ್ನು ಸೀಜ್‌ ಮಾಡಲಾಗುವುದು. ಮಾರಾಟಗಾರರು ಕಡ್ಡಾಯವಾಗಿ ತಾವು ಮಾರಾಟ ಮಾಡುವ ವಸ್ತುಗಳ ದಾಖಲೆಯನ್ನು ಆನ್‌ಲೈನ್‌ನಲ್ಲಿ ನಿಯಮಿತವಾಗಿ ದಾಖಲೀಕರಣಗೊಳಿಸಬೇಕು. ರೈತರಿಗೆ ಕಾಣುವಂತೆ ಉತ್ಪನ್ನಗಳ ದರ ಹಾಗೂ ದಾಸ್ತಾನು ವಿವರ ಪ್ರದರ್ಶಿಸಬೇಕು. ರೈತರು ಖರೀದಿಸಿದ ವಸ್ತುಗಳಿಗೆ ರಸೀದಿ ನೀಡಬೇಕೆಂದು ಸೂಚಿಸಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಜೀರ್‌ ಅಹಮ್ಮದ್‌ ಮಾತನಾಡಿ, ಯೂರಿಯಾ, ಡಿಎಪಿ ರಸಗೊಬ್ಬರಗಳ ಉತ್ಪಾದನೆ ಕೋವಿಡ್‌-19 ಹಿನ್ನೆಲೆಯಲ್ಲಿ ಕುಂಠಿತಗೊಂಡಿದೆ. ತಾಲೂಕಿಗೆ ದೊರೆಯುವ ರಸಗೊಬ್ಬರ ಪ್ರಮಾಣವನ್ನು ಇತರ ಪ್ರದೇಶಕ್ಕೆ ನೀಡದೆ ತಾಲೂಕಿನ ರೈತರಿಗೆ ಅಗತ್ಯ ರಸಗೊಬ್ಬರಗಳನ್ನು ಮಾರಾಟ ಮಾಡಬೇಕೆಂದು ತಿಳಿಸಿದರು.

ವಿಜಿಲೆನ್ಸ್‌ ತಂಡದ ಅಧಿಕಾರಿಗಳಾದ ನಾಗರಾಜ, ಮುಜಬಿರ್‌ ರಹೆಮಾನ್‌, ಕೃಷಿ ಅಧಿಕಾರಿಗಳಾದ ಗರ್ಜೆಪ್ಪ, ಸೌಮ್ಯ ಹಾಗೂ ತೆಕ್ಕಲಕೋಟೆ, ಕರೂರು ಹೋಬಳಿ ವ್ಯಾಪ್ತಿಯ ಬೀಜ ಮತ್ತು ಕ್ರಿಮಿನಾಶಕ ಮಾರಾಟಗಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next