ಸಿರುಗುಪ್ಪ: ಗ್ರಾಮಾಂತರ ಪ್ರದೇಶದಲ್ಲಿರುವ ಕೂಲಿ ಕಾರ್ಮಿಕರಿಗೆ ಕೆಲಸ ಅರಸಿ ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ನರೇಗಾ ಯೋಜನೆ ಜಾರಿಗೆ ತಂದಿದೆ. ಕೂಲಿ ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದರು.
ತಾಲೂಕಿನ ಉಪ್ಪಾರಹೊಸಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಮಹಾತ್ಮಾಗಾಂಧಿ ಉದ್ಯೋಗಾ ಖಾತ್ರಿ ಯೋಜನೆಯಡಿ ಪ್ರಗತಿಪರ ರೈತ ಎಸ್. ಶರಣಬಸವ ಜಮೀನಿನಲ್ಲಿ ಕೈಗೊಂಡ ಕೃಷಿ ಹೊಂಡ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಕೂಲಿ ಕಾರ್ಮಿಕರೊಂದಿಗೆ ಮಾತನಾಡಿದ ಅವರು, ರೈತರು ಮಳೆ ನೀರನ್ನು ಜಮೀನುಗಳಲ್ಲಿ ಸಂಗ್ರಹಿಸಿಕೊಂಡು ಅಗತ್ಯವಿದ್ದಾಗ ಬೆಳೆಗಳಿಗೆ ನೀಡುವ ಮೂಲಕ ವರ್ಷವಿಡೀ ಅಲ್ಪ ನೀರಾವರಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಆದ್ದರಿಂದ ರೈತರು ಕೃಷಿ ಹೊಂಡ ನಿರ್ಮಿಸಿಕೊಳ್ಳಬೇಕು ಎಂದರು.
ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಕೃಷಿ ಇಲಾಖೆ ಮೂಲಕ ಸಣ್ಣ ರೈತರ ಜಮೀನುಗಳಲ್ಲಿ ಕೃಷಿ ಹೊಂಡ, ಕ್ಷೇತ್ರ ಬದುಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಪ್ರಾರಂಭಿಸಿ ಜಾಬ್‌ಕಾರ್ಡ್ ಹೊಂದಿದವರಿಗೆ ಕೆಲಸ ನೀಡಲಾಗುತ್ತಿದೆ. ಕೆಲಸ ಪೂರ್ಣಗೊಂಡ ಮೂರು ದಿನಗಳೊಗೆ ಕೂಲಿಯನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ತಾಲೂಕು ಸಹಾಯಕ ಕೃಷಿ ನಿದೇರ್ಶಕ ನಜೀರ್ ಅಹಮ್ಮದ್ ಮಾತನಾಡಿ, ಸಣ್ಣ ರೈತರಿಗೆ ಕೃಷಿ ಹೊಂಡಗಳ ನಿರ್ಮಾಣ ಮಾಡಿಕೊಳ್ಳಲು ಉದ್ಯೋಗ ಖಾತ್ರಿ ಅಡಿಯಲ್ಲಿ ಅವಕಾಶವಿದ್ದು, ಖುಷ್ಕಿ ಜಮೀನು, ಬಿಪಿಎಲ್ ಕಾರ್ಡ್, ಜಾಬ್‌ಕಾರ್ಡ್ ಹೊಂದಿರುವ ರೈತರು ಅಗತ್ಯ ದಾಖಲೆಗಳೊಂದಿಗೆ ಕೃಷಿ ಇಲಾಖೆಗೆ ಭೇಟಿ ನೀಡಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಒಂದು ಕೃಷಿ ಹೊಂಡಕ್ಕೆ 323 ಮಾನವ ದಿನಗಳನ್ನು ಹಾಗೂ 30 ಸಾವಿರ ರೂ. ಸಾಮಗ್ರಿ ಹಾಗೂ ನಿರ್ಮಾಣಕ್ಕೆ ನೀಡಲಾಗುವುದು. ಒಟ್ಟು ರೂ.1,02,840/- ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅವಕಾಶವಿದೆ.
ರೈತರ ಜಮೀನುಗಳಲ್ಲಿ ಇರುವ ಫಲವತ್ತಾದ ಮೇಲ್ಮೈ ಮಣ್ಣು ಮಳೆಗೆ ಕೊಚ್ಚಿ ಹೋಗದಂತೆ ಕ್ಷೇತ್ರ ಬದುಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ತಾಲೂಕಿನ 13 ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ 30 ಕೃಷಿ ಹೊಂಡ ಸೇರಿದಂತೆ 10 ಕ್ಷೇತ್ರ ಬದು ಕಾಮಗಾರಿ ಕೈಗೊಳ್ಳಲಾಗಿದ್ದು, ಪ್ರತಿನಿತ್ಯ 1521 ಜನ ಜಾಬ್‌ಕಾರ್ಡ್ ಹೊಂದಿದವರು ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕರೂರು ಹೋಬಳಿಯ ಕೃಷಿ ಅಧಿಕಾರಿಗಳಾದ ಪಲ್ಲವಿ, ಪರಮೇಶ್ವರರೆಡ್ಡಿ, ಪ್ರಗತಿಪರ ರೈತ ಎಸ್.ಶರಣಬಸವ, ಮುಖಂಡ ಎಂ.ಎಸ್.ಸಿದ್ದಪ್ಪ ಮತ್ತು ರೈತರು ಇದ್ದರು.