ಸಿರುಗುಪ್ಪ: ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತ ಕಟಾವು ಪ್ರಾರಂಭವಾಗಿದ್ದರೂ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಿಲ್ಲ. ಇದರಿಂದಾಗಿ ಉತ್ತಮ ಇಳುವರಿ ಬಂದರೂ ಬೆಂಬಲ ಬೆಲೆ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಕಡಿಮೆ ದರಕ್ಕೆ ಭತ್ತ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ಭತ್ತದ ಕಟಾವು ಪ್ರಾರಂಭವಾಗಿದ್ದು, ಶೇ.40 ರಷ್ಟು ಕೊಯ್ಲು ಮುಗಿದಿದ್ದು, ಶೇ.60ರಷ್ಟು ಕೊಯ್ಲು ನಡೆಯುತ್ತಿದೆ. ರೈತರಿಗೆ ಈ ಬಾರಿ ಒಂದು ಎಕರೆಗೆ ಸರಾಸರಿ 40 ರಿಂದ 50 ಚೀಲ ಇಳುವರಿ ಬರುತ್ತಿದ್ದರೂ ಉತ್ತಮ ಬೆಲೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರವು ಹಿಂಗಾರು ಹಂಗಾಮಿನಲ್ಲಿ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಪ್ರಾರಂಭಿಸಬೇಕಾಗಿತ್ತು. ಆದರೆ ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಈವರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ. ಖರೀದಿ ಕೇಂದ್ರವನ್ನು ತೆರೆಯಲು ಅನುಮತಿ ನೀಡಿಲ್ಲ. ಇದರಿಂದಾಗಿ ರೈತರು ವ್ಯಾಪಾರಿಗಳು ನಿಗದಿಪಡಿಸಿದ ಬೆಲೆಗೆ ಭತ್ತ ಮಾರುತ್ತಿದ್ದಾರೆ.
ತಾಲೂಕಿನಲ್ಲಿ ಅತಿಹೆಚ್ಚಾಗಿ ಕಾವೇರಿ ತಳಿಯ ಭತ್ತವನ್ನೇ ಬೆಳೆದಿದ್ದು, ಈ ಭತ್ತವು ಒಂದು ಕ್ವಿಂಟಾಲ್‌ಗೆ ರೂ.1600 ರಿಂದ 1650ರ ವರೆಗೆ ಮಾರಾಟವಾಗುತ್ತದೆ. ಸಿರುಗುಪ್ಪ, ತುಮಕೂರು, ಬಳ್ಳಾರಿ ಮುಂತಾದ ಕಡೆಗಳಿಂದ ವ್ಯಾಪಾರಿಗಳು ಬಂದು ಭತ್ತ ಖರೀದಿ ಮಾಡುತ್ತಿದ್ಧಾರೆ. ಇದರಿಂದಾಗಿ ಹೊಲದಲ್ಲಿಯೇ ಕೊಯ್ಲು ಮಾಡುತ್ತಿದ್ದಂತೆ ಭತ್ತ ಮಾರಾಟ ಆಗುತ್ತಿರುವುದು, ರೈತರು ನಿರಾತಂಕವಾಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಭತ್ತ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಿದ್ದರಿಂದ ರೂ.1700 ರಿಂದ 1775ರ ವರೆಗೆ ಭತ್ತವು ಮಾರಾಟವಾಗಿತ್ತು. ಆದರೆ ಸದ್ಯ ಮಾರಾಟ ಕೇಂದ್ರ ಆರಂಭವಾಗದೇ ಇರುವುದರಿಂದ ರೈತರು ಉತ್ತಮ ಇಳುವರಿ ಬಂದಿದ್ದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಮತ್ತು ಕೇಂದ್ರ ಸರ್ಕಾರ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದರೆ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ (ಪ್ರೊ| ನಂಜುಂಡಸ್ವಾಮಿ ಬಣ)ಯ ರಾಜ್ಯ ಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಒತ್ತಾಯಿಸಿದ್ದಾರೆ.
ಇಳುವರಿ ಉತ್ತಮವಾಗಿದ್ದರೂ ಉತ್ತಮ ಬೆಲೆ ಸಿಗದೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಕೂರಿಗನೂರು ರೈತ ಗಾದಿಲಿಂಗಪ್ಪ ಒತ್ತಾಯಿಸಿದ್ದಾರೆ. ರೈತರಿಗೆ ಉತ್ತಮ ಬೆಲೆ ದೊರಕಿಸುವ ಉದ್ದೇಶದಿಂದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರದೊಂದಿಗೆ ಚರ್ಚಿಸಲಾಗಿದೆ.
ಎಂ.ಎಸ್. ಸೋಮಲಿಂಗಪ್ಪ,
ಶಾಸಕ, ಸಿರುಗುಪ್ಪ.
ಆರ್.ಬಸವರೆಡ್ಡಿ ಕರೂರು