ಶಿರಸಿ: ಇಷ್ಟು ಸಲ ಜನಪ್ರತಿನಿಧಿಯಾಗಿದ್ದವರು, ಹಿರಿಯರು, ಉನ್ನತ ಹುದ್ದೆಯಲ್ಲಿದ್ದವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು. ಅಂಥ ಜವಬ್ದಾರಿಯುತ ಸ್ಥಾನದಲ್ಲಿ ಇದ್ದವರು ಅರಬರೆ ಕಾಮಗಾರಿ ಮಾಡಿಸುತ್ತಿದ್ದಾರೆ. ಇದು ಅವರಿಗೆ ಜನರ ಮೇಲಿನ ಕಾಳಜಿ ಬಿಂಬಿಸುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಅವರು ತಾಲೂಕು ಜೆಡಿಎಸ್ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಎಷ್ಟೋ ಕಡೆ ಅರಬರೆ ಕಾಮಗಾರಿ ಆಗಿದೆ. ಬಾಳೂರು ತೂಗು ಸೇತುವೆಗೆ ರೋಫ್ ಇದೆ, ಓಡಾಡಲು ಹಲಗೆ ವ್ಯವಸ್ಥೆ ಯೋಜನೆಯಲ್ಲೇ ಇಲ್ಲವಂತೆ. ಎಷ್ಟೋ ಕಡೆ ಅರಬರೆ ಸೇತುವೆ, ಕಾಮಗಾರಿ ಆಗಿದೆ.
ಕುಮಟಾ ಶಿರಸಿ, ಶಿರಸಿ ಹಾವೇರಿ ಮುಖ್ಯ ರಸ್ತೆಯಲ್ಲೇ ಓಡಾಟ ಮಾಡಲು ಆಗುತ್ತುಲ್ಲ.ಜನತೆಯ ಪ್ರತಿನಿಧಿಯಾಗಿ ಮಾನವೀಯತೆ ಮೆರೆಯಬೇಕಿತ್ತು ಎಂದರು.
ಶಿರಸಿ ಜಿಲ್ಲೆ ಘೋಷಣೆ ಮಾಡಿಲ್ಲ,ಬಿಡಿ. ಏಳು ತಾಲೂಕಿಗೆ ಬಜೆಟ್ ನಲ್ಲಿ ಏನು ಕೊಟ್ಟಿದ್ದಾರೆ. ಲಕ್ಷ ಕೋಟಿ ರಾಜ್ಯ ಬಜೆಟ್ ಸಿಎಂ ಮಂಡಿಸಿದರೂ ಇಲ್ಲಿ ಬಂದಿದ್ದೆಷ್ಟು ಎಂದು ಸ್ಪೀಕರ್ ಅವರೇ ಹೇಳಬೇಕು. ಅವರು ಚುನಾವಣೆ ಬರುತ್ತಿದ್ದ ವೇಳೆ ಹೋದ ಹೋದಲ್ಲಿ ಉದ್ಘಾಟನೆ ಮಾಡಿ ಭರವಸೆ ಕೊಡುತ್ತಿದ್ದಾರೆ. ಇದೂ ನಿಲ್ಲಬೇಕು.ಜನತೆ ಆಮಿಷಕ್ಕೆ ಹಚ್ಚಬಾರದು ಎಂದರು.
ಶಿರಸಿ ಅಭಿವೃದ್ದಿ ಎಂಬುದು ಹರಕೆ ಆಟ ಮಾಡುತ್ತಿದ್ದಾರೆ. ವಿವಿ ಎಂಬುದು ಜಂಬೋಜೆಟ್ ಮಾದರಿಯಲ್ಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ವಿವರಗಳೇ ಇಲ್ಲ ಎಂದೂ ವ್ಯಂಗ್ಯವಾಡಿದ ಅವರು, ನಗರದಲ್ಲಿ ಕಣ್ಣಿಗೆ ಕಾಣುವ ಸ್ಥಳದಲ್ಲಿ ಮಾತ್ರ ಅಭಿವೃದ್ದಿ ಆಗುತ್ತಿದೆ. ಆದರೆ, ಹಳ್ಳಿಗಳಲ್ಲಿ ಸಮಸ್ಯೆ ಬೆಟ್ಟದಷ್ಟಿದೆ. ಮಳೆಗಾಲ ಬಂದರೆ ಇದು ದ್ವಿಗುಣ ಆಗಲಿದೆ ಎಂದರು.
ಏ 1 ಹಾಗೂ 2 ರಂದು ಶಿರಸಿಗೆ ಹಾಗೂ ಸಿದ್ದಾಪುರಕ್ಕೆ ಮಾಜಿ ಸಿಎಂ ಕುಮಾರ ಸ್ವಾಮಿ ಅವರ ನೇತೃತ್ವದ ಪಂಚ ರತ್ನ ಯಾತ್ರೆ ಬರುತ್ತದೆ. ಈಗಾಗಲೇ ಶಿರಸಿ,ಕುಮಟಾ, ಹಳಿಯಾಳ ಘೊಷಣೆ ಆಗಿದೆ. ಆರಕ್ಕೆ ಆರೂ ಕ್ಷೇತ್ರಕ್ಕೆ ಸ್ಪರ್ಧಿಸಿ ಜೆಡಿಎಸ್ ಬಿರುಗಾಳಿ ಎಬ್ಬಿಸಲಿದೆ. ರೈತ ಪರ ಕುಮಾರಸ್ವಾಮಿ ಅವರು ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದ ಪೈ,ಜೆಡಿಎಸ್ ನಲ್ಲಿ ಹಳಬರು ಹೊಸಬರು ಭಿನ್ನಾಭಿಪ್ರಾಯ ಇಲ್ಲ. ಕ್ಷೇತ್ರದ 264ಬೂತ್ ಗಳೂ ಕ್ರಿಯಾಶೀಲವಾಗಿವೆ ಎಂದರು.
ಈ ವೇಳೆ ಪ್ರಮುಖರಾದ ಅರುಣ ಗೌಡ, ಆರ್.ಜಿ.ನಾಯ್ಕ ಕಿಬ್ಬಳ್ಳಿ, ಜುಬೆರ ಜುಕಾಕೊ, ರಜಾಕ್ ಸಾಬ್, ಆನಂದ ಗೌಡ, ಅನಿಲ ನೇತ್ರೇಕರ್, ರಾಜು ಅಂಬಿಗ ಇತರರು ಇದ್ದರು.