ಬೆಂಗಳೂರು: ಮೈಸೂರು ರಸ್ತೆ ಸಿರ್ಸಿ ವೃತ್ತದ ಮೇಲ್ಸೇತುವೆಯ ಒಂದು ಬದಿ ಬಿಬಿಎಂಪಿ ಕೈಗೊಂಡಿರುವ ಮರು ಡಾಂಬರೀಕರಣ ವಾರದೊಳಗೆ ಪೂರ್ಣಗೊಳ್ಳಲಿದ್ದು, ಒಂದು ಬದಿ ರಸ್ತೆ ವಾಹನ ಸಂಚಾರಕ್ಕೆ ಲಭ್ಯವಾಗಲಿದೆ.
ಮೊದಲ ಹಂತವಾಗಿ ಪುರಭವನದ ಕಡೆಯಿಂದ ಮೈಸೂರು ರಸ್ತೆವರೆಗಿನ ಮೇಲ್ಸೇತುವೆ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದೀಗ ಕಾಮಗಾರಿ ಕೊನೆಯ ಹಂತ ತಲುಪಿದ್ದು, ಮುಂದಿನ ಶನಿವಾರದ ವೇಳೆಗೆ ಸಂಚಾರಕ್ಕೆ ಸಿದ್ಧವಾಗಲಿದೆ.
ಎರಡು ದಿನಗಳಲ್ಲಿ ಪುರಭವನ ಕಡೆಯಿಂದ ರಾಯನ್ ವೃತ್ತದ ಕಡೆಗಿನ ಡೌನ್‌ರ್‍ಯಾಂಪ್ ಮಾರ್ಗದ ಮರು ಡಾಂಬರೀಕರಣ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅದಾದ ಮೂರ್ನಾಲ್ಕು ದಿನಗಳಲ್ಲಿ ರಾಯನ್ ವೃತ್ತದ ಕಡೆಗೆ ಹೋಗುವ ಡೌನ್ ರ್‍ಯಾಂಪ್‌ನಿಂದ ಮೈಸೂರು ರಸ್ತೆವರೆಗಿನ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಮೈಸೂರು ರಸ್ತೆಯಿಂದ ಟೌನ್‌ಹಾಲ್ ಕಡೆಗೆ ಹೋಗುವ ಮಾರ್ಗದ ದುರಸ್ತಿ ಕಾಮಗಾರಿ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದು, ಕನಿಷ್ಠ 30ರಿಂದ 40 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಸಂಚಾರ ಪೊಲೀಸರಿಗೆ ಪರ್ಯಾಯ ರಸ್ತೆಗಳನ್ನು ಕಲ್ಪಿಸುವಂತೆ ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮೈಸೂರು ರಸ್ತೆಯಿಂದ ಟೌನ್‌ಹಾಲ್ ಕಡೆಗಿನ ಕಾಮಗಾರಿಯನ್ನು ಮೊದಲಿಗೆ ಮೆಜೆಸ್ಟಿಕ್ ಕಡೆಗೆ ಸಾಗುವ ಡೌನ್ ರ್‍ಯಾಂಪ್ ಅಥವಾ ಕೆ.ಆರ್.ಮಾರುಕಟ್ಟೆ ಕಡೆಗೆ ಹೊಗುವ ಡೌನ್ ರ್‍ಯಾಂಪ್‌ನಿಂದ ಟೌನ್‌ಹಾಲ್‌ವರೆಗೆ ಸಾಗುವ ಮೇಲ್ಸೇತುವೆ ಮಾರ್ಗದಲ್ಲಿ ಮೊದಲು ಕಾಮಗಾರಿ ನಡೆಸಲು ಚಿಂತಿಸಲಾಗಿದೆ. ಬಳಿಕ ಮೈಸೂರು ರಸ್ತೆ ಕಡೆಯಿಂದ ಬರುವ ಮಾರ್ಗದ ಉಳಿದ ಭಾಗದಲ್ಲಿ ಮರು ಡಾಂಬರೀಕರಣ ಮಾಡುವ ಕುರಿತಂತೆ ಚರ್ಚಿಸಲಾಗುತ್ತಿದೆ.