ಶಿರಸಿ: ಕರ್ನಾಟಕದ ಪ್ರಸಿದ್ಧ ಇಲ್ಲಿನ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ದೇವಾಲಯದ ಮುಂದೆ ನಿರ್ಮಾಣಗೊಂಡ ರಥಕ್ಕೆ ಪೂಜೆ, ಕಲಶಾರೋಹಣ ನಡೆಯುವ ಮೂಲಕ ವಿದ್ಯುಕ್ತ ಚಾಲನೆ ಸಿಕ್ಕಿದೆ.
ಗಣ ಹವನ ಪೂರೈಸಿ,ದೇವಿ ಆಸೀನಳಾಗುವ ರಥದ ಪೂಜೆಯನ್ನು ಅರ್ಚಕರು ನಡೆಸಿಕೊಟ್ಟರು. ಹಣ್ಣು ಕಾಯಿ ಸಮರ್ಪಿಸಿದ ಬಳಿಕ ಕಲಶವನ್ನು ಮಧ್ಯಾಹ್ನ 12:20ರ ಸುಮಾರಿಗೆ ರಥಕ್ಕೆ ಆರೋಹಣ ಮಾಡಲಾಯಿತು. ಸವದತ್ತಿ, ಕುಂದಾಪುರ ಇತರ ಭಾಗದಿಂದ ಆಗಮಿಸಿದ್ದ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು. ಮಾರಿಕಾಂಬೆಗೆ ಜೈ ಎಂದು ಘೋಷಿಸಿದರು. ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಬಾಬುದಾರ ಪ್ರಮುಖ ಜಗದೀಶ ಗೌಡ ಇತರರು ಇದ್ದರು.
ರಾತ್ರಿ 10 ಗಂಟೆ ಸುಮಾರಿಗೆ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ನವ ವಧುವಾಗಿ ಕಂಗೊಳಿಸುವ ಅಮ್ಮನನ್ನು ಸಾರ್ವಜನಿಕ ದರ್ಶನಕ್ಕೆ ನೀಡಲಾಯಿತು. ಬಾಬುದಾರರು, ನಾಡಿಗ ಮನೆತನದವರು ಪಾಲ್ಗೊಂಡು ವಿವಿಧ ಧಾರ್ಮಿಕ ಕಾರ್ಯ ನಡೆಸಿದರು. ಸರ್ವಾಲಂಕಾರ ಭೂಷಿತೆ ದೇವಿಗೆ ದೃಷ್ಟಿ ಬೊಟ್ಟು ಇಟ್ಟು ಪ್ರಥಮ ಆರತಿ ಬೆಳಗಿದ ಬಳಿಕ ನಾಡಿಗ ಮನೆತನದವರು ದೇವಿಗೆ ಮಾಂಗಲ್ಯ ಧಾರಣೆ ಮಾಡಿದರು.
ಕಲ್ಯಾಣ ಪ್ರತಿಷ್ಠೆಯ ವಿವಿಧ ಕಾರ್ಯಕ್ರಮಗಳು ನಡೆದವು. ಫೆ.27ರಿಂದ ಮಾ.7ರ ತನಕ ನಡೆಯಲಿರುವ ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆ ಇದಾಗಿದ್ದು, ಫೆ.28ರಂದು ಬೆಳಗ್ಗೆ 8ರ ಬಳಿಕ ದೇವಿಯ ರಥೋತ್ಸವ ನಡೆಯಲಿದೆ. ಮಧ್ಯಾಹ್ನದ ಒಳಗೆ ದೇವಿ ಜಾತ್ರಾ ಬಯಲಿನಲ್ಲಿ ಆಸೀನಳಾಗಲಿದ್ದು, ಮಾ.1 ರಿಂದ ದೇವಿಗೆ ಹರಕೆ, ಸೇವೆಗಳು ಆರಂಭವಾಗಲಿದೆ. ತಿರುಪತಿ ಮಾದರಿಯ ಜಾತ್ರಾ ಚಪ್ಪರ ದೇವಿ ಆಸೀನಳಾಗುವ ಮೂಲಕ ಕಳೆ ಹೆಚ್ಚಿಸಲಿದೆ.
ವಿಜೃಂಭಣೆಯ ಕಲ್ಯಾಣ ಮಹೋತ್ಸವ
ಮಾರಿಕಾಂಬೆ ಜಾತ್ರೆ ಮಹೋತ್ಸವದ ಪ್ರಮುಖ ಘಟ್ಟವಾದ ದೇವಿಯ ಕಲ್ಯಾಣ ಮಹೋತ್ಸವ ಮಂಗಳವಾರ ರಾತ್ರಿ 10 ಗಂಟೆಗೆ ಸರಿಯಾಗಿ ನಡೆಯಿತು. ದೇವಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದಾಳೆ.
ಕಲ್ಯಾಣ ಮಹೋತ್ಸವದಂಗವಾಗಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ತಾಂಬೂಲ ಬದಲಾವಣೆ, ಆರತಕ್ಷತೆ ಮುಂತಾದ ಕಾರ್ಯಗಳೂ ವಿಧಿವತ್ತಾಗಿ ನೆರವೇರಿದವು. ಶ್ರೀ ದೇವಿಯನ್ನು ಗದ್ದುಗೆಗೆ ಒಯ್ಯಲು ರಥ ಸಿದ್ಧಗೊಳ್ಳುತ್ತಿದೆ. ರಥಕ್ಕೆ ಕಳಶಾರೋಹಣ ನಡೆಯಿತು. ವಿವಿಧ ಬಣ್ಣದ ಪತಾಕೆಗಳನ್ನು ಸಿಕ್ಕಿಸಲಾಗುತ್ತಿದೆ.