Advertisement

ಮಾರಿಕಾಂಬಾ ಜಾತ್ರಾ ಸಂಭ್ರಮ:ಗದ್ದುಗೆ ಏರಿದ ಮಾರಮ್ಮ

01:33 PM Apr 14, 2020 | |

ಶಿರಸಿ: ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಕರ್ನಾಟಕದ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಗೆ ಶೋಭಾಯಾತ್ರೆಯು ಇನ್ನಷ್ಟು ಮೆರಗು ನೀಡಿದ್ದು, ಉಘೇ ಉಘೇ ಘೋಷಣೆಗಳ ಮಧ್ಯೆ ಬುಧವಾರ ಮಧ್ಯಾಹ್ನ ಜಾತ್ರೆ ನಡೆಯುವ ಬಿಡಕಿಬಯಲಿನಲ್ಲಿ ಮಾರಿಕಾಂಬೆ ದೇವಿ ಗದ್ದುಗೆ ಏರಿದಳು.

Advertisement

ಮಂಗಳವಾರ ತಡರಾತ್ರಿಯ ತನಕವೂ ವಿವಿಧ ಸೇವೆ ಸ್ವೀಕರಿಸಿ ಕಲ್ಯಾಣ ಪ್ರತಿಷ್ಠೆಯನ್ನೂ ಸ್ವೀಕರಿಸಿದ ಅಮ್ಮ ಬುಧವಾರ ಸರ್ವಾಲಂಕಾರ ಭೂಷಿತಳಾಗಿದ್ದಳು. ಭಟ್ಕಳದ ಮಲ್ಲಿಗೆಯ ಹಾರ, ಹಸಿರು ಬಳೆ, ಹೊಸತಾಗಿ ಮಾಡಿಸಲಾದ ಬಳೆಗಳನ್ನು ತೊಟ್ಟು, ಕುಂಕುಮ ಬಣ್ಣದ ಚೌಕಡಿಯ ಸೀರೆ ಉಟ್ಟಿದ್ದು, ದೇವಿ ಗದ್ದುಗೆಯತ್ತ ಗಜಗಾಂಭೀರ್ಯದಲ್ಲಿ ಬರುವುದು ನೋಡುವುದೇ ಒಂದು ಆಮೋಘ ಕ್ಷಣವಾಗಿತ್ತು. ಅಂತಹ ಪುನೀತ ಕಾರ್ಯವನ್ನು ಭಕ್ತರು ಮಹಡಿಗಳಲ್ಲಿ, ಹಂಚಿನ ಮಾಡುಗಳ ಮೇಲೆ, ಇರುವ ನೆರಳಿನಲ್ಲೇ ನಿಂತು ನೋಡಿದರು. ಮಕ್ಕಳನ್ನು ವಾಹನಗಳ ಮೇಲೆ, ಮೈಮೇಲೆ ಹೊತ್ತು ಕಾಣಿಸಿದರು. ಗರ್ಭಿಣಿಯರು, ಮಹಿಳೆಯರು, ವೃದ್ಧರೂ ಉತ್ಸಾಹದಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.

ಬಾಬುದಾರರು, ಮೈತ್ರಿಗಳು, ಅಸಾದಿಗಳು ಎಲ್ಲರೂ ಹೊಸ ಉಡುಗೆ ತೊಟ್ಟು ಜಾತ್ರೆಯಲ್ಲಿ ಪಾಲ್ಗೊಂಡರು. ನಾರಿ ಕೇಳ, ಅಡಿಕೆ, ಬಾಳೆಕೊನೆ, ಕಬ್ಬು ಹಾಗೂ ಇತರ ಬೆಳೆಗಳನ್ನು ಕಟ್ಟಿದ್ದ ರಥವನ್ನು ಭಕ್ತಾದಿಗಳು ಜಯಘೋಷ ಹಾಕುತ್ತ ಎಳೆದರು. ಮಾರಿಕಾಂಬೆಗೆ ಜಯವಾಗಲಿ ಎಂಬ ಘೋಷಗಳು ಮೊಳಗಿದವು. ಎಲ್ಲೆಲ್ಲೂ ಜಗನ್ಮಾತೆಯ ಜೈಕಾರ ಕೇಳಿಬಂದಿತು. ಭಕ್ತಿ ಪರಾಕಾಷ್ಠೆಯಲ್ಲಿ ಮಿಂದೆದ್ದ ಭಕ್ತ ಸಮೂಹ ರಥವೇರಿ ಬರುವ ಜಗನ್ಮಾತೆಗೆ ಹಾರುಕೊಳಿ, ಬಾಳೆಹಣ್ಣುಗಳನ್ನು ಎಸೆದು ಭಕ್ತಿ ಭಾವ ಮೆರೆದರು.

Advertisement

ನಾಡಿನ ಅ ಧಿದೇವತೆ, ಶಿರಸಿಯ ಗ್ರಾಮದೇವತೆ ಶ್ರೀ ಮಾರಿಕಾಂಬೆ ಶಾಂತ ಸ್ವರೂಪಿ ಸರ್ವಮಂಗಳೆಯಾಗಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿ ಹರಸುವ ಕ್ಷಣಕ್ಕೆ ಭಕ್ತಾದಿಗಳು ಕಾತರರಾದರು. ಕಿಲೋಮೀಟರ್‌ ದೂರದ ಇದ್ದಕ್ಕೂ ದೇವಿಯ ನಾಮಸ್ಮರಣೆ ಮೊಳಗಿದ್ದವು. ರಥವನ್ನು ಅಚ್ಚುಕಟ್ಟಾಗಿ ಜಾತ್ರೆ ಬಯಲಿಗೆ ತರುವಲ್ಲಿ ಸ್ವಯಂ ಸೇವಕರು, ಪೊಲೀಸರು,ಬಾಬುದಾರರು ಕಾರ್ಯ ಮಾಡಿದರು. ಬಾಬುದಾರರು ಬರಿಗಾಲಲ್ಲೇ ಸುಡುವ ಬಿಸಿಲಿನ ಟಾರಿನ ಮೇಲೂ ನಡೆದು
ದೇವಿಯ ಸೇವೆ ಸಲ್ಲಿಸಿದರು.

ಬುಧವಾರ ಬೆಳಗ್ಗೆ 7:36ರೊಳಗೆ ದೇವಸ್ಥಾನದ ಸಭಾಂಗಣದಿಂದ ಅಮ್ಮನಿಗೆ ಜಯಕಾರ ಹಾಕುತ್ತ ರಥಾರೂಢಗೊಳಿಸಲಾಯಿತು. ದೇಗುಲದಿಂದ ಎರಡು ವರ್ಷಕ್ಕೊಮ್ಮೆ ಮಾತ್ರ ಎಂಟಡಿ ಎತ್ತರದ ಕಾಷ್ಠದೇವಿ ಹೊರಗೆ ಬರುವುದನ್ನು ಹಾಗೂ ರಥ ಏರುವ ದೃಶ್ಯ ಅವರ್ಣನೀಯ. ಮೂರು ಗಂಟೆಗಳ ಅವಧಿ ಯಲ್ಲಿ ಒಂದೂವರೆ ಕಿಮೀ ದೂರದ ಗದ್ದುಗೆಗೆ ದೇವಿ ಬಂದಾಗ ಮತ್ತೆ ಜಯಘೋಷಗಳು ಮೊಳಗಿದವು. ಪೂರ್ವ ನಿಗದಿತ ಸಮಯದ 1.10ರೊಳಗೆ ದೇವಿ ಜಾತ್ರಾ ಗದ್ದುಗೆ ಆಸೀನಳಾದಳು.

ಈ ನಡುವೆ ಸಾಂಪ್ರದಾಯಿಕ ವಿಧಾನಗಳಂತೆಯೇ ಮಾರಿಕಾಂಬೆಗೆ ದೇವಸ್ಥಾನದ ಪೂಜಾರ ಕುಟುಂಬದ ಪ್ರಮುಖರು ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮಾರಿಕಾಂಬೆಗೆ ಮಂಗಳರಾತಿ ನೆರವೇರಿಸಿ, ಮಾರಿಕಾಂಬೆಯನ್ನು ಹೊತ್ತೂಯ್ಯುವ ರಥದ ಗಾಲಿಗಳಿಗೆ ಸಾಂಪ್ರದಾಯಿಕ ಸಾತ್ವಿಕ ಬಲಿ ವಿಧಾನಗಳನ್ನು ನೆರವೇರಿಸಲಾಯಿತು.

ದೇವಸ್ಥಾನದ ಬಾಬುದಾರರು, ಧರ್ಮದರ್ಶಿಗಳು ಸೇರಿದಂತೆ ಭಕ್ತಾದಿಗಳೆಲ್ಲರೂ ದೇವಿಯ ರಥೋತ್ಸವಕ್ಕೆ ಯಾವುದೆ ಅಡಚಣೆಗಳು ಉಂಟಾಗದಂತೆ ನಿರ್ವಿಘ್ನವಾಗಿ ಜಾತ್ರಾ ಕಾರ್ಯಕ್ರಮಗಳು ನೆರವೇರುವಂತೆ ಪ್ರಾರ್ಥಿಸಿದರು. ಮೊದಲೆ ನಿಗದಿ ಯಾದಂತೆ ರಥೋತ್ಸವದ ಶೋಭಾಯಾತ್ರೆ 8.52ಕ್ಕೆ ಆರಂಭವಾಯಿತು.

ಆಂಧ್ರಪ್ರದೇಶ, ರಾಜಸ್ತಾನ, ಕೇರಳ, ತಮಿಳುನಾಡು, ಮಂಗಳೂರು, ಸವದತ್ತಿ, ಹಾವೇರಿ, ಶಿವಮೊಗ್ಗ, ಧಾರವಾಡ ಸೇರಿದಂತೆ ಹೊರನಾಡುಗಳಿಂದ ಆಗಮಿಸಿದ್ದ ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು. ವಿವಿಧ ಕಲಾತಂಡಗಳೂ ಪಾಲ್ಗೊಂಡಿದ್ದವು.

ಶಾಂತಾರಾಮ ಶೆಟ್ಟಿ ತಂಡದ ಯಕ್ಷವೇಷ, ಕಲಗಾರ, ಕತಗಾಲುಹಾಗೂ ಇತರಡೆಯ ಡೊಳ್ಳು ಕುಣಿತಗಳು, ಡೊಳ್ಳು, ಕೋಲಾಟ, ವಾಲಗ, ಅಸಾದಿಯರಿದ ಹಾಡು, ಕಹಳೆ ಇನ್ನೂ ಹತ್ತಾರು ಕಲಾತಂಡಗಳು, ದೇವಿಯನ್ನು ಮೈಮೆಲೆ ಆಹ್ವಾನಿಸಿಕೊಳ್ಳುವವರ ಭಕ್ತೋನ್ಮಾದಗಳ ನಡುವೆ ರಥೋತ್ಸವ ನಡೆಯಿತು. ಬಿಸಿಲಿನ ಝಳ ಇದ್ದರೂ ಭಕ್ತರು ಇದ್ಯಾವುದನ್ನು ಲೆಕ್ಕಿಸದೇ ಇರುವುದು ಗಮನ ಸೆಳೆಯಿತು. ಭಕ್ತಾ ದಿಗಳು ರಸ್ತೆಯಂಚಿನ ಮನೆಗಳ ಮಹಡಿಗಳ ಮೇಲೆ ಕುಳಿತು ರಥೋತ್ಸವ ವೀಕ್ಷಿಸಿದರು. ಹಲವು ಸಂಘಟನೆಗಳು ಅಲ್ಲಿ ಇಲ್ಲಿ ಪಾನಕ, ಮಜ್ಜಿಗೆ ಅರವಟಿಗೆ ಸೇವೆ ನೀಡಿದರು.

ರಥೋತ್ಸವದಲ್ಲಿ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಾಪಟ್ಟಣ, ಶಾಂತಾರಾಮ ಹೆಗಡೆ, ಬಾಬುದಾರ ಪ್ರಮುಖ ಜಗದೀಶ ಗೌಡ, ವ್ಯವಸ್ಥಾಪಕ ನರೇಂದ್ರ ಜಾಧವ್‌ ನೇತೃತ್ವದ ತಂಡಗಳು ಸಕಲ ವ್ಯವಸ್ಥೆಗೆ ಮುಂಚೂಣಿಯಲ್ಲಿದ್ದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ಭೀಮಣ್ಣ ನಾಯ್ಕ ಸೇರಿದಂತೆ ಅನೇಕ ಗಣ್ಯರೂ ಶೋಭಾಯಾತ್ರೆಯಲ್ಲಿದ್ದರು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್‌ ಎನ್ನದೇ ಭಕ್ತರು ದೇವಿ ಕಣ್ತುಂಬಿಕೊಂಡರು.

ಉಚಿತ ಪ್ರಸಾದ ಭೋಜನ
ಮಾರಿಕಾಂಬಾ ದೇವಸ್ಥಾನ ಹಿಂಬದಿಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಾತ್ರೆಗೆ ಆಗಮಿಸುವ ಭಕ್ತಾ ದಿಗಳಿಗೆ ಉಚಿತ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ದೇವಿಯ ಪ್ರಸಾದ ರೂಪದಲ್ಲಿ ಬುಧವಾರ ಸುಮಾರು 10 ಸಾವಿರ ಜನರಿಗೆ ಉಚಿತ ಅನ್ನಪ್ರಸಾದ ವಿತರಿಸಲಾಯಿತು. ಅನ್ನ, ಸಾಂಬಾರ, ಪಲ್ಯ, ಪಾಯಸಗಳನ್ನು ಉಣಬಡಿಸಲಾಯಿತು. ಮೂವತ್ತಕ್ಕೂ ಹೆಚ್ಚು ಪಾಕ ಪ್ರವೀಣರು ಊಟ ತಯಾರಿಕೆ ಕಾರ್ಯದಲ್ಲಿ ನಿರತರಾಗಿದ್ದು, ಮಾ. 7ರ ತನಕವೂ ಸೇವೆ ಸಿಗಲಿದೆ. ರಾಘವೇಂದ್ರ ಮಠ ವೃತ್ತ, ಹಳೆ ಬಿಇಒ ಕಚೇರಿ ಹತ್ತಿರವೂ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಹಲವಡೆ ಅರವಟ್ಟಿಗೆ ಸೇವೆ ನಡೆದವು.

ಪೌರ ಕಾರ್ಮಿಕರ ಶ್ರಮ
ನಗರದಲ್ಲಿ ನಡೆದ ರಥೋತ್ಸವದ ವೇಳೆ ರಥಕ್ಕೆ ಎಸೆಯಲಾದ ಬಾಳೆ ಹಣ್ಣುಗಳ ರಾಶಿ ರಥದ ದಾರಿಯಲ್ಲಿ ಬಿದ್ದಿರುತ್ತವೆ. ಕೆಲವರು ಪ್ರಸಾದ ಎಂದು ಸ್ವೀಕರಿಸಿದರೂ ಹಲವು ಕಾಲ್ತುಳಿತಕ್ಕೆ ಬೀಳುತ್ತವೆ. ಇವುಗಳನ್ನು ಸ್ವಚ್ಛಗೊಳಿಸುವ ಮೂಲಕ ನಗರಸಭೆಯ ಪೌರ ಕಾರ್ಮಿಕರು ಗಮನ ಸೆಳೆದರು. ಸಾರ್ವಜನಿಕರ ಶ್ಲಾಘನೆಗೆ ಕಾರಣರಾದರು.

ಹಾರುಗೋಳಿ, ಬಾಳೆ ಹಣ್ಣು
ಕೇಳಿದ್ದನ್ನು ನೀಡುವ ಅಮ್ಮ ಎಂದೇ ಹೆಸರಾದ ಈಕೆಗೆ ಹೇಳಿಕೊಂಡ ಹರಕೆ ಈಡೇರಿಸಲು ಹಾರುಗೋಳಿ, ಬಾಳೆಹಣ್ಣು ಅರ್ಪಿಸಲಾಯಿತು. ಭಕ್ತರು ಹಾಡಿ ಬಿಟ್ಟ ಕೋಳಿಯನ್ನು, ಎಸೆದ ಬಾಳೆಹಣ್ಣನ್ನು ಪ್ರಸಾದವಾಗಿ ಭಕ್ತರು ಸ್ವೀಕರಿಸಿದರು. ಒಂದು ಹಾರು ಕೋಳಿಗೆ 400 ರೂ.,ನಾಲ್ಕು ಬಾಳೆ ಹಣ್ಣಿಗೆ ಹತ್ತು ರೂಪಾಯಿಗೆ ಮಾರಾಟ ಆದವು.

ರಥೋತ್ಸವ ಲೈವ್‌
ಎಲ್ಲೆಡೆ ಸೆಲ್ಫಿ ಮಾರಿಕಾಂಬಾ ದೇವಿ ಗದ್ದುಗೆಗೆ ಬರುವ ದಾರಿಯಲ್ಲಿನ ಕಲಾ ತಂಡಗಳ ಜೊತೆ ಅನೇಕರು ಸೆಲ್ಫಿ ತೆಗಸಿಕೊಂಡರು. ಯಕ್ಷಗಾನ ವೇಷಧಾರಿಗಳು, ಲಂಬಾಣಿಗಳ ಜೊತೆ ಹಲವರು ಸೆಲ್ಫಿ ಕ್ಲಿಕಿಸಿಕೊಂಡರು. ಸಾಮಾಜಿಕ ಜಾಲ ತಾಣದಲ್ಲಿ ರಥೋತ್ಸವದ ಲೈವ್‌ ಪ್ರದರ್ಶನಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next