ಬೆಂಗಳೂರು: ಮೈಸೂರು ರಸ್ತೆಯ ಬಾಲ ಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ (ಸಿರ್ಸಿ ವೃತ್ತ) ರಸ್ತೆ ದುರಸ್ತಿ ಕಾಮಗಾರಿ ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಆರಂಭವಾಗಲಿದೆ. ಕಾಮಗಾರಿ ಪ್ರಾರಂಭವಾದರೆ ಒಂದು ಭಾಗದಲ್ಲಿ (ಮೈಸೂರು ರಸ್ತೆ ಕಡೆಯಿಂದ ಟೌನ್‌ಹಾಲ್ ಕಡೆಗಿನ ಮಾರ್ಗ) 1 ತಿಂಗಳು ವಾಹನ ಸಂಚಾರ ಬಂದ್ ಆಗಲಿದೆ.
ಸಿರ್ಸಿ ಮೇಲ್ಸೇತುವೆ ರಸ್ತೆ ಡಾಂಬರೀಕರಣ ಕಾಮ ಗಾರಿ ಪ್ರಾರಂಭಿಸುವ ಸಲುವಾಗಿ ಇತ್ತೀಚೆಗೆ ಮೇಯರ್ ಎಂ.ಗೌತಮ್‌ಕುಮಾರ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ಸಂಚಾರ ಪೊಲಿಧೀಸರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದರು. ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಿ ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿ ಕೊಂಡುವಂತೆ ಸಂಚಾರ ಪೊಲೀಸರಿಗೆ ಮನವಿ ಮಾಡಿದ್ದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಎಂ.ಗೌತಮ್ ಕುಮಾರ್, 2.65 ಕಿ.ಮೀ ಉದ್ದದ ಸಿರ್ಸಿ ವೃತ್ತದ ಮೇಲ್ಸೇತುವೆ ಮೇಲ್ದಜೆಗೇರಿಸಲು 5 ಕೋಟಿ ರೂ. ವೆಚ್ಚದಲ್ಲಿ ಸುಧಾರಿತ ತಂತ್ರಜ್ಞಾನದ ಮೂಲಕ ಕಾಮಗಾರಿ ನಡೆಸಲಾಗುವುದು. ಇದರಿಂದ ಈ ಮಾರ್ಗದಲ್ಲಿ ರಸ್ತೆ ಗುಂಡಿ ಬೀಳುವ ಹಾಗೂ ಮಳೆನೀರು ನಿಲ್ಲುವುದು ತಪ್ಪಲಿದೆ ಎಂದರು.
ಈಗಾಗಲೇ ಒಂದು ಭಾಗದ ರಸ್ತೆಗೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಮತ್ತೂಂದು ಭಾಗದ ರಸ್ತೆ ಡಾಂಬರೀಕರಣ ಪ್ರಾರಂಭಿಸುತ್ತಿದ್ದು, ಪರ್ಯಾಯ ಮಾರ್ಗ ಕಲ್ಪಿಸುವ ಬಗ್ಗೆ ಸಂಚಾರ ಪೊಲೀಸರ ಜತೆ ಚರ್ಚಿಸಲಾಗಿದೆ. 4 ದಿನದೊಳಗಾಗಿ ಅನುಮತಿ ನೀಡುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅನುಮತಿ ಸಿಕ್ಕ ಬಳಿಕ 30 ದಿನದೊಳಗಾಗಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕಾಮಗಾರಿ ನಡೆಯುವ ವೇಳೆ ಸಿರ್ಸಿ ಮೇಲ್ಸೇತುವೆ ಮಾರ್ಗದಲ್ಲಿ ಮಾರ್ಗ ಬದಲಾವಣೆ ನಾಮಫಲಕ, ಬ್ಯಾರಿಕೇಡ್ ಹಾಗೂ ಎಚ್ಚರಿಕೆ ದೀಪಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಮಲ್ಟಿ ಲೆವೆಲ್ ಕಾರ್‌ಪಾರ್ಕಿಂಗ್: ಧರ್ಮರಾಯ ಸ್ವಾಮಿ ದೇವಸ್ಥಾನದ ಸಮೀಪದ ಪಾಲಿಕೆಯ ಖಾಲಿ ಜಾಗದಲ್ಲಿ ಮಲ್ಟಿ ಲೆವೆಲ್ ಕಾರ್‌ಪಾರ್ಕಿಂಗ್ (ಎಂಎಲ್‌ಸಿಪಿ) ಕಟ್ಟಡ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಮೇಯರ್ ಎಂ.ಗೌತಮ್ ಕುಮಾರ್ ತಿಳಿಸಿದರು.
ಅಲ್ಲದೆ, ದಾಸಪ್ಪ ಆಸ್ಪತ್ರೆ ಪುನರ್ ನಿರ್ಮಾಣ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪಾರ್ಕಿಂಗ್ ವ್ಯವಸ್ಥೆ ಸೇರಿ ಈ ಪ್ರದೇಶಾಭಿವೃದ್ಧಿಗೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾಮಗಾರಿಗಳನ್ನು ಶಾಸಕರ ಅನುದಾನದಲ್ಲೇ ನಡೆಸಲಾಗುವುದು ಎಂದು ತಿಳಿಸಿದರು.