Advertisement

ಅದೊಂದು ಬಣ್ಣಿಸಲಾಗದ ಅನುಭೂತಿ : ಬಾಹ್ಯಾಕಾಶ ಪಯಣದ ಬಗ್ಗೆ ಶಿರಿಷಾ ಮಾತು

08:31 PM Jul 12, 2021 | Team Udayavani |

ಹೂಸ್ಟನ್‌: “ಅದೊಂದು ಬಣ್ಣಿಸಲು ಅಸಾಧ್ಯವಾದ ಅನುಭೂತಿ… ಜೀವನದ ಚಿಂತನೆಯನ್ನೇ ಬದಲಿಸುವಂಥ ಅನುಭವ…”

Advertisement

ವರ್ಜಿನ್‌ ಗ್ಯಾಲಾಕ್ಟಿಕ್‌ನ ಟು ಯೂನಿಟಿಯಲ್ಲಿ ಭಾನುವಾರ, ಬಾಹ್ಯಾಕಾಶದಲ್ಲಿ ತಿರುಗಾಡಿ ಹಿಂದಿರುಗಿದ ಭಾರತ ಮೂಲದ ಶಿರಿಷಾ ಬಾಂದ್ಲಾ ತಮ್ಮ ಪಯಣವನ್ನು ಬಣ್ಣಿಸಿದ ರೀತಿಯಿದು.

34 ವರ್ಷದ ಶಿರಿಷಾ, ವರ್ಜಿನ್‌ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಿಚರ್ಡ್‌ ಬ್ರಾನ್ಸನ್‌ ಹಾಗೂ ಇತರ ನಾಲ್ವರೊಂದಿಗೆ ಯೂನಿಟಿ ರಾಕೆಟ್‌-ಏರೋಪ್ಲೇನ್‌ನಲ್ಲಿ ನ್ಯೂಮೆಕ್ಸಿಕೋದ ಸ್ಪೇಸ್‌ ಪೋರ್ಟ್‌ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು. ಅಲ್ಲಿ, 90 ನಿಮಿಷಗಳ ಕಾಲ ಗಗನಯಾತ್ರೆ ನಡೆಸಿ ವಾಪಸಾಗಿದ್ದರು.

ಮರುಭೂಮಿಯ ಮೇಲೆ, ಭೂಮಿಯಿಂದ ಸುಮಾರು 88 ಕಿ.ಮೀ. ಎತ್ತರದಲ್ಲಿ ಬಾಹ್ಯಾಕಾಶಕ್ಕೆ ಕಾಲಿಟ್ಟ ಕೂಡಲೇ ಯೂನಿಟಿ ಕ್ಯಾಪ್ಸೂಲ್‌ನಲ್ಲಿದ್ದ ಶಿರಿಷಾ ಮತ್ತವರ ಸಂಗಡಿಗರಿಗೆ ತಮ್ಮ ದೇಹದ ತೂಕ ಏಕಾಏಕಿ ಕಡಿಮೆಯಾದಂತೆ ಭಾಸವಾಯಿತಂತೆ.

ಗುರುತ್ವಾಕರ್ಷಕ ಪರಿಧಿ ದಾಟಿದ ಕಾರಣಕ್ಕಾಗಿ ಇಂಥ ಅನುಭವ ಉಂಟಾಗಿದ್ದು ಕೆಲವೇ ಸೆಕೆಂಡ್‌ಗಳಲ್ಲಿ ಆ ಸ್ಥಿತಿಗೆ ಮನಸ್ಸು ಹೊಂದಿಕೊಂಡಿತು ಎಂದು ಶಿರಿಷಾ ತಿಳಿಸಿದ್ದಾರೆ. ಅಲ್ಲದೆ, ತಾವು ಹಾರಾಡುವಾಗ, ಭೂಮಧ್ಯ ರೇಖೆಯನ್ನು ನಿಚ್ಚಳವಾಗಿ ಗಮನಿಸಿದ್ದಾಗಿಯೂ ಅವರು ತಿಳಿಸಿದ್ದಾರೆ. ಆ ಗಗನ ಸೌಂದರ್ಯವನ್ನು ಬಣ್ಣಿಸಲು ಹೊಸ ಪದಗಳನ್ನು ಹುಡುಕಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Advertisement

ಇದನ್ನೂ ಓದಿ : ಝೀಕಾ ವೈರಸ್‌ ಬಗ್ಗೆ ಎಚ್ಚರವಹಿಸಿ : ಸಾರ್ವಜನಿಕರಲ್ಲಿ ಉಡುಪಿ ಜಿಲ್ಲಾಧಿಕಾರಿ ಮನವಿ

ಟಿಕೆಟ್‌ ಬುಕ್‌ ಮಾಡಿದ ಮಸ್ಕ್!
ಜಗತ್ತಿನ ಅತಿ ಶ್ರೀಮಂತ ಉದ್ಯಮಿ, ಸ್ನೇಹಿತ ರಿಚರ್ಡ್‌ ಬ್ರಾನ್ಸನ್‌, ಭಾನುವಾರವಷ್ಟೇ ತಮ್ಮ ವರ್ಜಿನ್‌ ಗ್ಯಾಲಾಕ್ಟಿಕ್‌ನ ಯೂನಿಟಿ 22 ಕ್ಯಾಪ್ಸೂಲ್‌ನಲ್ಲಿ 90 ನಿಮಿಷಗಳವರೆಗೆ ಬಾಹ್ಯಾಕಾಶದಲ್ಲಿ ಸುತ್ತಾಡಿ ಬಂದಿದ್ದಾರೆ. ಇದೇ ಸೆಪ್ಟೆಂಬರ್‌ನಲ್ಲಿ ರಿಚರ್ಡ್‌ರವರ ಆಪ್ತಮಿತ್ರ ಹಾಗೂ ಜಗತ್ತಿನ ಮತ್ತೂಬ್ಬ ದೈತ್ಯ ಉದ್ಯಮಿ ಎಲಾನ್‌ ಮಸ್ಕ್ ಕೂಡ ತಮ್ಮ “ಸ್ಪೇಸ್‌ ಎಕ್ಸ್‌’ ರಾಕೆಟ್‌ ಮೂಲಕ ಬಾಹ್ಯಾಕಾಶ ಪರ್ಯಟನೆ ಮಾಡಲಿದ್ದಾರೆ.

ಒಬ್ಬರ ಸಾಧನೆ ಮೇಲೆ ಮತ್ತೂಬ್ಬರಿಗೆ ಹೊಟ್ಟೆಕಿಚ್ಚಿಲ್ಲ, ಇಬ್ಬರ ನಡುವೆ ಸ್ಪರ್ಧೆಯಿಲ್ಲ. ಬದಲಿಗೆ, ಪರಸ್ಪರ ಗೌರವವಿದೆ. ಹಾಗಾಗಿಯೇ, ಮಸ್ಕ್ ಅವರು ಗ್ಯಾಲಾಕ್ಟಿಕ್‌ನ ಮುಂದಿನ ಬಾಹ್ಯಾಕಾಶ ಪಯಣಕ್ಕೆ 7.4 ಲಕ್ಷ ರೂ. ನೀಡಿ ಮುಂಗಡ ಟಿಕೆಟ್‌ ಬುಕ್‌ ಮಾಡಿದ್ದಾರೆ. ಇದನ್ನು ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ರಿಚರ್ಡ್‌, “”ನನ್ನ ಸ್ನೇಹಿತ ನನ್ನ ಕಂಪನಿಯ ಬಾಹ್ಯಾಕಾಶ ನೌಕೆಯಲ್ಲಿ ಪಯಣಿಸಲು ಸಿದ್ಧರಾಗಿದ್ದಾರೆ. ಮುಂದೊಂದು ದಿನ, ನಾನು ಮಸ್ಕ್ ಅವರ ನೌಕೆಯಲ್ಲಿ ಪಯಣಿಸುವ ಸಂದರ್ಭ ಬರಬಹುದು” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next