ಉಡುಪಿ: ಜಗತ್ತಿನಲ್ಲೇ ಕರ್ನಾಟಕ ಜಾನಪದ ಸಂಸ್ಕೃತಿ ಅದ್ಭುತವಾಗಿದ್ದು, ಚಿನ್ನಪ್ಪ ಗೌಡರು ಬರೆದ ಸಿರಿಸಂಧಿ ಕೃತಿಯೂ ತುಳುವ ನಾಡು ಸಹಿತ ರಾಜ್ಯದ ಇತರ ಭಾಗದ ಜಾನಪದಗಳ ಅಧ್ಯಯನಕ್ಕೂ ಮೇಲ್ಪಂಕ್ತಿಯಾಗಿದೆ ಎಂದು ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಹೇಳಿದರು.
ಮಾಹೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂಜಿಎಂ ಕಾಲೇಜು ಆಶ್ರಯದಲ್ಲಿ ಶನಿವಾರ ಡಾ| ಕೆ. ಚಿನ್ನಪ್ಪ ಗೌಡ ಬರೆದ ಮಾಚಾರು ಗೋಪಾಲ ನಾಯ್ಕ ಹೇಳಿದ “ಸಿರಿಸಂಧಿ’ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳುನಾಡು ವ್ಯಾಪ್ತಿ ಮಾತ್ರವಲ್ಲದೇ ಮಂಟೇಸ್ವಾಮಿ, ಮಲೆಮಹದೇಶ್ವರ, ಹಾಲುಮತ, ಕೃಷ್ಣಗೊಲ್ಲ ಮೊದಲಾದ ಜಾನಪದಗಳ ಅಧ್ಯಯನಕ್ಕೆ ಇದೊಂದು ಮಾರ್ಗದರ್ಶಿಯಾಗಿದೆ. ಸಿರಿ ಸಾಹಿತ್ಯದ ಬಗ್ಗೆ ನಿರಂತರ ಅಧ್ಯಯನ ಮುಂದುವರಿಯಬೇಕು ಎಂದರು.
ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಯುವಜನರು ಕಲೆ, ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು ಎಂದರು. ವಿಮರ್ಶಕ ಡಾ| ಬಿ. ಜನಾರ್ದನ್ ಭಟ್ ಕೃತಿ ಪರಿಚಯಿಸಿದರು. ಡಾ| ಕೆ. ಚಿನ್ನಪ್ಪ ಗೌಡ ಅವರನ್ನು ಸಮ್ಮಾನಿಸಲಾಯಿತು. ಎಂಜಿಎಂ ಪ್ರಾಂಶುಪಾಲ ಪ್ರೊ| ಲಕ್ಷ್ಮೀ ನಾರಾಯಣ ಕಾರಂತ ಉಪಸ್ಥಿತರಿದ್ದರು. ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಅಂಬಿಕಾ ನಿರೂಪಿಸಿ, ವಂದಿಸಿದರು.
ಕು. ಶಿ. ಹರಿದಾಸ ಭಟ್ ಶತಮಾನೋತ್ಸವ ಆಚರಣೆ
ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಸಾಹಿತಿ ದಿ| ಕು. ಶಿ. ಹರಿದಾಸ ಭಟ್ ಜನ್ಮವೆತ್ತಿ 2024ರ ಮಾರ್ಚ್‌ಗೆ 100 ವರ್ಷ ತುಂಬಲಿದ್ದು, ಇವರ ನೆನಪಿನಲ್ಲಿ ಜನ್ಮ ಶತಮಾನೋತ್ಸವ ಆಚರಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಡಾ| ವಿವೇಕ್ ರೈ ಹೇಳಿದರು. ಕೂಡಲೇ ಪ್ರತಿಕ್ರಿಯಿಸಿದ ಡಾ| ಎಚ್. ಎಸ್. ಬಲ್ಲಾಳ್ ಅವರು ಮಾರ್ಚ್‌ನಲ್ಲಿ ಜನ್ಮ ಶತಮಾನೋತ್ಸವ ಆಚರಿಸಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.