Advertisement

ನೋಡಬನ್ನಿ ಮೈದುಂಬಿ ಹರಿಯೋ ಸಿರಿಮನೆ ಜಲಪಾತ…

05:27 PM Aug 03, 2018 | Sharanya Alva |

ಮಲೆನಾಡಿದೆ ಕಾಲಿಟ್ಟರೆ ಸಾಕು ಜಿಟಿ ಜಿಟಿ ಜಿನುಗುವ ಮಳೆ , ಮೈಕೊರೆಯುವ ಚಳಿ,  ಜೊತೆಗೆ ಭತ್ತದ ಗದ್ದೆಗಳಲ್ಲಿ ನಾಟಿಯ ಸಂಭ್ರಮ,  ಎತ್ತ ನೋಡಿದರು ಬಾನೆತ್ತರಕ್ಕೆ ಶಿರವೆತ್ತಿ ನಿಂತಿರುವ ಗಿರಿ ಶಿಖರಗಳು,  ಈ ಗಿರಿ ಶಿಖರಗಳ ಸಂಧಿಯಲ್ಲಿ ಹರಿಯುವ ಜಲಧಾರೆಗಳು,  ವಾಹ್,  ಮಲೆನಾಡಿನ ವರ್ಣನೆಗೆ ಪದಗಳೇ ಸಾಲದು.

Advertisement

ಸುತ್ತಲೂ ಹಚ್ಚ ಹಸುರಿನ ಕಾನನದ ನಡುವೆ ಜುಳುಜುಳು ಹರಿಯುವ ಜಲಪಾತದ ನಿನಾದ, ಧುಮ್ಮಿಕ್ಕಿ ಹರಿಯುವ ನೀರಿನಲ್ಲಿ ಮಿಂದೇಳುತ್ತಿರುವ ಪ್ರವಾಸಿಗರು ಇದನ್ನು ಕಣ್ತುಂಬಿಕೊಳ್ಳಲು ಹರಿದು ಬರುತ್ತಿರುವ ಜನಸಾಗರ.  ಇದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ದೃಶ್ಯವೈಭವ.

ಅಂದ ಹಾಗೆ ಸಿರಿಮನೆ ಜಲಪಾತ ತನ್ನದೇ ಆದ ಶೈಲಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸುಮಾರು 50ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಪ್ರವಾಸಿಗರ ಸ್ವರ್ಗವೇ ಸರಿ. ಜಲಪಾತದ ನೀರಿಗೆ ಮೈಯೊಡ್ಡಿ ನಿಂತರೆ ಮೈಮನಗಳ ಸುಳಿಯಲ್ಲಿ ಕಚಗುಳಿ ಇಟ್ಟಂತಹ ಅನುಭವ.

ರಾಜ್ಯದ ವಿವಿಧೆಡೆಗಳಿಂದ ಶೃಂಗೇರಿ ಶ್ರೀಶಾರದಾ ಪೀಠಕ್ಕೆ ಆಗಮಿಸುವ ಪ್ರವಾಸಿಗರು ಕಿಗ್ಗಾದ ಶ್ರೀಋಷ್ಯ ಶೃಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವುದಲ್ಲದೆ, ಸಿರಿಮನೆ ಜಲಪಾತಕ್ಕೂ ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಿರಿಮನೆ ಜಲಪಾತ ಮಳೆಗಾಲ ಮುಗಿದ ನಂತರವೂ ಆಕರ್ಷಣೀಯವಾಗಿರುತ್ತಿದ್ದು, ಬೇಸಿಗೆ ಕಾಲದಲ್ಲಿಯೂ ಪ್ರವಾಸಿಗರನ್ನು ಸೆಳೆಯುತ್ತದೆ.

Advertisement

ವಿದ್ಯುತ್ ಉತ್ಪಾದನೆ

ಇಲ್ಲಿನ ಇನ್ನೊಂದು ವಿಶೇಷತೆ ಏನೆಂದರೆ ಈ ಜಲಪಾತದಲ್ಲಿ ಹರಿಯುವ ನೀರನ್ನು ಬಳಸಿ ಸಣ್ಣ ಯಂತ್ರಗಳನ್ನು ಉಪಯೋಗಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದು ಇಲ್ಲಿನ ಸುಮಾರು ಹತ್ತು ಮನೆಗಳು ಉಪಯೋಗಿಸುತ್ತಾರೆ. ಮಲೆನಾಡಿನಲ್ಲಿ ಸಾಮಾನ್ಯವಾಗಿ ಎಲ್ಲಾ ಮನೆಯವರು ಗುಡ್ಡದಿಂದ ಹರಿಯುವ ನೀರಿಗೆ ಅಡ್ಡಲಾಗಿ ಯಂತ್ರಗಳನ್ನು ಉಪಯೋಗಿಕೊಂಡು ವಿದ್ಯುತ್ ಉತ್ಪಾದಿಸುವುದು ಸಾಮಾನ್ಯವಾಗಿರುತ್ತದೆ.

ಅಂದ ಹಾಗೆ ಸಿರಿಮನೆ ಜಲಪಾತವು ಶೃಂಗೇರಿಯಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಕಿಗ್ಗ ಎಂಬ ಹಳ್ಳಿಯ ಮೂಲಕ ಸಾಗಿ ನಿರಾಯಾಸವಾಗಿ ತಲುಪಬಹುದು. ಜಲಪಾತದವರೆಗೂ ಉತ್ರಮ ರಸ್ತೆ ಸಂಪರ್ಕವಿದ್ದು, ಪ್ರತಿದಿನವೂ ನೂರಾರು ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next