ಪರ್ತ್: ಒಂದಡೆ ಪುಣೆಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸತತ ವಿಕೆಟ್ ಕಳೆದುಕೊಂಡು ಆಲೌಟಾದ ಪ್ರಸಂಗ ನಡೆದಿದ್ದರೆ, ಇತ್ತ ಆಸ್ಟ್ರೇಲಿಯಾದ ಒನ್ ಡೇ ಕಪ್ ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು ಕೇವಲ ಒಂದು ರನ್ ಅಂತರದಲ್ಲಿ ಎಂಟು ವಿಕೆಟ್ ಕಳೆದುಕೊಂಡು ಮುಖಭಂಗ ಅನುಭವಿಸಿದೆ.
ಶುಕ್ರವಾರ (ಅ.25) ಪರ್ತ್ ನ ವಾಕಾ ಮೈದಾನದಲ್ಲಿ ನಡೆದ ಟ್ಯಾಸ್ಮೆನಿಯಾ ವಿರುದ್ದದ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು ಸೋಲು ಕಂಡಿದೆ. ವಿಪರ್ಯಾಸವೆಂದರೆ ಎಂಟು ವಿಕೆಟ್ ಉರುಳಿದ ನಡುವೆ ಬಂದ ಒಂದು ರನ್ ಕೂಡಾ ವೈಡ್ ಮೂಲಕ ಬಂದಿತ್ತು.
ಅಮೋಘ ದಾಳಿ ಸಂಘಟಿಸಿದ ಬ್ಯೂ ವೆಬ್ಸ್ಟರ್ ಆರು ಓವರ್ಗಳಲ್ಲಿ 17 ರನ್ ನೀಡಿ ಆರು ವಿಕೆಟ್ ಕಿತ್ತರು. ಟಾಸ್ಮೇನಿಯಾ ತಂಡದ ದಾಳಿಗೆ ಬೆದರಿದ ವೆಸ್ಟರ್ನ್ ಆಸ್ಟ್ರೇಲಿಯಾ 20.1 ಓವರ್ಗಳಲ್ಲಿ 53 ರನ್ ಗಳಿಗೆ ಆಲೌಟಾಯಿತು.
ವೆ.ಆಸ್ಟ್ರೇಲಿಯಾ 16ನೇ ಓವರ್ ನಲ್ಲಿ 2 ವಿಕೆಟ್ಗೆ 52 ರನ್ ಗಳಿಸಿತ್ತು. ಇದರ ಬಳಿಕ ವೃತ್ತಿಪರ ಕ್ರಿಕೆಟ್ ನಲ್ಲಿ ಕಂಡ ಅತ್ಯಂತ ಕೆಟ್ಟ ಬ್ಯಾಟಿಂಗ್ ಕುಸಿತವನ್ನು ಅನುಭವಿಸಿತು. 28 ಕಾನೂನುಬದ್ಧ ಎಸೆತಗಳ ಅಂತರದಲ್ಲಿ, ವೆಸ್ಟರ್ನ್ ಆಸ್ಟ್ರೇಲಿಯಾ ಎಂಟು ವಿಕೆಟ್ಗಳನ್ನು ಕಳೆದುಕೊಂಡಿತು. ಕೇವಲ ಒಂದು ರನ್ ಅನ್ನು ದಾಖಲಿಸಿತು.
ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ಏಳು ಮಂದಿ ಆಟಗಾರರು ಶೂನ್ಯಕ್ಕೆ ಔಟಾದರು. ಜೋಶ್ ಇಂಗ್ಲಿಶ್, ಆಸ್ಟನ್ ಟರ್ನರ್, ಆಸ್ಟನ್ ಆಗರ್, ಕ್ಯಾಮರೂನ್ ಬ್ಯಾಂಕ್ರಫ್ಟ್ ಮುಂತಾದ ಅನುಭವಿ ಆಟಗಾರರಿದ್ದರೂ ತಂಡ ಅವಮಾನಕ್ಕೆ ಸಿಲುಕಿತು.
ಟಾಸ್ಮೇನಿಯಾ ತಂಡವು ಕೇವಲ 8.3 ಓವರ್ ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು.