Advertisement

UV Fusion: ಸಿರಿಗನ್ನಡಂ ಗೆಲ್ಗೆ

04:06 PM Nov 06, 2023 | Team Udayavani |

ಕನ್ನಡ ಕೇವಲ ಭಾಷೆಯಲ್ಲ ಅದೊಂದು ಸುಂದರವಾದ ಭಾವನೆ. ಪ್ರತಿಯೊಬ್ಬ ಕನ್ನಡಿಗನ ಅಸ್ಮಿತೆ. ಕನ್ನಡಿಗರ ಮಾತೃಭಾಷೆ. ನಮ್ಮ ರಾಜ್ಯದ ನೆರೆರಾಜ್ಯಗಳಾದ ಆಂಧ್ರ, ತಮಿಳುನಾಡು, ಕೇರಳಗಳಲ್ಲಿ ಕೂಡ ಕನ್ನಡ ಭಾಷೆಯನ್ನ ಬಳಸುವ ಅದೆಷ್ಟೋ ಕನ್ನಡಿಗರಿದ್ದಾರೆ. ಕನ್ನಡಿಗರು ಅಲ್ಲದಿದ್ದರೂ ಕನ್ನಡ ಕಲಿಯಲು ಪ್ರಯತ್ನಿಸುತ್ತಿರುವ ಅದೆಷ್ಟೋ ಕನ್ನಡ ಅಭಿಮಾನಿಗಳು ಇದ್ದಾರೆ. ಆದರೆ ಕರ್ನಾಟಕದಲ್ಲೇ ಇದ್ದುಕೊಂಡು ಕನ್ನಡ ಮಾತನಾಡಲು ಹಿಂದೆಮುಂದೆ ಯೋಚಿಸುವ ಕನ್ನಡಿಗರು ಕೂಡ ನಮ್ಮಲ್ಲಿ ಇದ್ದಾರಲ್ಲ ಎಂಬುವುದೇ ವಿಪರ್ಯಾಸ.

Advertisement

ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋಗಿದ್ದರೂ ಕೂಡ ಆಂಗ್ಲ ಭಾಷೆಯ ಕೊಡುಗೆಯನ್ನ ಇಲ್ಲೇ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಎಲ್ಲೆಲ್ಲೂ ಕಾಣಿಸುತ್ತಿದೆ. ಆದರೆ ಈ ಸಂಭ್ರಮ ಕನ್ನಡ ಪರ ಘೋಷಣೆಗಳು ನಮ್ಮಲ್ಲಿ ಕಾಣಸಿಗುವುದು ಬಹುಶ‌ಃ ನವೆಂಬರ್‌ ಒಂದನೇ ತಾರೀಕಿನಂದು ಮಾತ್ರಾ ಎಂದೆನಿಸುತ್ತದೆ. ವರ್ಷದ ಎಲ್ಲ ದಿನಗಳಲ್ಲೂ ಆಂಗ್ಲ ಭಾಷೆಯಲ್ಲೇ ವ್ಯವಹರಿಸುವ ನಮ್ಮವರು ಅನಿಸಿಕೊಂಡ ಪರಕಿಯರಿಗೆ ನವೆಂಬರ್‌ ಒಂದನೇ ತಾರೀಕಿನಂದು ನಾವು ಕೂಡ ಕನ್ನಡಿಗರು ಎಂಬ ಜ್ಞಾನೋದಯವಾಗುತ್ತದೆ.

ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದೇ. ಎಂದು ಅಂದು ಕುವೆಂಪುರವರು ಬರಹದ ಮೂಲಕ ಕನ್ನಡವನ್ನು ಹಾಡಿ ಹೊಗಳಿದರು. ಆದರೆ ಇಂದಿನ ಪ್ರಸ್ತುತ ಯುಗಕ್ಕೆ ಈ ಹಾಡಿನ ಸಾಲುಗಳು ಪ್ರಾಯಶ‌ ಅಷ್ಟಾಗಿ ಒಪ್ಪುವುದಿಲ್ಲವೇನೋ…… ಯಾಕೆ ಈ ಮಾತನ್ನು ಹೇಳುತ್ತಿರುವೆನೆಂದರೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದು ಕಾವೇರಿ ನೀರನು ಕುಡಿದು ಬಾಯಲ್ಲಿ ಮಾತ್ರಾ ಕನ್ನಡ ಭಾಷೆಯನ್ನ ಬಿಟ್ಟು ಬೇರೆ ಭಾಷೆಗಳನ್ನೇ ಮಾತಾಡುವ ಅದೆಷ್ಟೋ ಕನ್ನಡಿಗರು ನಮ್ಮ ರಾಜ್ಯದಲ್ಲೇ ಇದ್ದಾರೆ. ಅಂಥವರಿಗೆ  ಏನೆಂದು ಹೇಳಲು ಸಾಧ್ಯ!?

ನಮ್ಮ ಭಾಷೆ ನಮ್ಮ ನೆಲವನ್ನ ಮೊದಲು ಅಭಿಮಾನದಿಂದ, ಗೌರವದಿಂದ ಕಾಣುವುದನ್ನು ಕಲಿಯಬೇಕು.ರೆಂಬೆ ಕೊಂಬೆ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಬೀಡು ಬಿಟ್ಟ ಬೇರುಗಳನ್ನ ಮರೆಯಬಾರದು. ಯಾಕೆಂದರೆ ಆ ರೆಂಬೆ ಕೊಂಬೆಗಳ ಉಗಮಕ್ಕೆ ಮೂಲ ಆಧಾರವೇ ಮಣ್ಣನ್ನು ಬಿಗಿದಪ್ಪಿಕೊಂಡಿರುವ ಬೇರುಗಳು.

ಹಾಗಾಗಿ ನಮ್ಮ ಮೂಲ ಬೇರು ಕನ್ನಡ ಭಾಷೆ. ನಮ್ಮ ಮಾತೃಭಾಷೆ. ಇದರರ್ಥ ಬೇರೆ ಭಾಷೆಯನ್ನು ಪ್ರೀತಿಸಬಾರದು ಬಳಸಬಾರದು ಎಂದಲ್ಲ. ಪ್ರೀತಿಸಬೇಕು ಆದರೆ ನಮ್ಮ ಮಾತೃಭಾಷೆಯನ್ನ ಮರೆಯುವಷ್ಟು ಅಲ್ಲ. ಬೇರೆ ಭಾಷೆಗಳನ್ನ ಬಳಸಬೇಕು. ಆದರೆ ನಮ್ಮ ಭಾಷೆಯನ್ನೇ ಮರೆಯುವಷ್ಟು ಅಲ್ಲ.

Advertisement

ನನ್ನ ಪ್ರಕಾರ ಕನ್ನಡ ರಾಜ್ಯೋತ್ಸವದ ದಿನ ಕೆಂಪು ಹಳದಿ ಬಾವುಟವನ್ನ ಹಾರಿಸಿ ಸಭಿಕರ ಮುಂದೆ ಕನ್ನಡ ಭಾಷೆಯಲ್ಲಿ ಭಾಷಣ ಮಾಡಿ ನಾನೊಬ್ಬ ಕನ್ನಡಪರ ಹೋರಾಟಗಾರ ನಾನು ಕನ್ನಡಿಗ ಎಂದು ತೋರಿಸುವುದು ಕನ್ನಡ ಅಭಿಮಾನವಲ್ಲ. ಅದು ತೋರ್ಪಡಿಕೆಯ ಅಭಿಮಾನ ಆಗುತ್ತದೆ. ಉಳಿದ ದಿನಗಳಲ್ಲೂ ಕನ್ನಡದ ನಿತ್ಯೋತ್ಸವವನ್ನು ಆಚರಿಸುವುದು ನಿಜವಾದ ಮಾತೃಭಾಷಾ ಅಭಿಮಾನ.ಕನ್ನಡ ಮೇಲಿನ ಪ್ರೀತಿ ಅಭಿಮಾನವನ್ನು ತೋರಿಸಲು ನವೆಂಬರ್‌ ಒಂದನೇ ತಾರೀಕು ಆಗಬೇಕೆಂದಿಲ್ಲ.

ನಮ್ಮಲ್ಲಿ ಜನರ ಮನಸ್ಥಿತಿಗಳು ಹೇಗಿದ್ದಾವೆ ಅಂದರೆ ಅವರ ಪ್ರಕಾರ ಕ್ಯಾಲೆಂಡರ್‌ ನಲ್ಲಿ ಬರುವ ನವೆಂಬರ್‌ ಒಂದನೇ ತಾರೀಕು ಮಾತ್ರಾ ಕನ್ನಡ ಭಾಷೆಯನ್ನ ಸಂಭ್ರಮಿಸುವ ದಿನ. ಭಾಷೆ ಎಂಬುದು ಕೇವಲ ಎರಡಕ್ಷರದ ಪದವಲ್ಲ. ಅದು ಪ್ರತಿಯೊಬ್ಬನ ಐಡೆಂಟಿಟಿ. ಗುರುತಿನ ಚೀಟಿ ಇದ್ದ ಹಾಗೇ. ಕನ್ನಡವನ್ನ ಬೆಳೆಸುವ ಯಾವ ಅಗತ್ಯವೂ ಇಲ್ಲ. ಕನ್ನಡವನ್ನ ಬಳಸಿ ಆಗ ಕನ್ನಡ ತನ್ನಿಂದ ತಾನೇ ಬೆಳೆಯುತ್ತದೆ.ಕನ್ನಡ ರಾಜ್ಯೋತ್ಸವ ಬರೀ ನವೆಂಬರ್‌ ಒಂದನೇ ದಿನಕ್ಕೆ ಮಾತ್ರಾ ಸೀಮಿತವಾಗಿರದೆ ಪ್ರತಿ ದಿನವೂ ನಿತ್ಯೋತ್ಸವವನ್ನು ಆಚರಿಸುವ ಹಾಗಾಗಲಿ. ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.

-ಸುಸ್ಮಿತಾ ಕೆ.ಎನ್‌.

ಅನಂತಾಡಿ

Advertisement

Udayavani is now on Telegram. Click here to join our channel and stay updated with the latest news.

Next