ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು ಇದರ ಕನಸಿನ ಕೂಸು ಅರ್ಥಾಂತರಂಗ. ಇದರ ಹಿಂದೆ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಶ್ರಮ ಅಪಾರ.ಒಂದೊಂದು ಪ್ರಯೋಗದಲ್ಲಿ ಒಂದೊಂದು ಭಿನ್ನತೆ ವೈವಿಧ್ಯತೆಗಳು ಹೊಸ ಪ್ರಯತ್ನಗಳು ನಡೆಯುತ್ತವೆ.ಸುಬ್ರಹ್ಮಣ್ಯದಲ್ಲಿ ಜರಗಿದ ಅರ್ಥಾಂರಂಗ ಇದರ 9ನೇ ಪ್ರಯೋಗ.
ಪೀಠಿಕೆ ವಿನ್ಯಾಸ ಹಾಗೂ ವಿಸ್ತಾರ, ಸ್ವಗತ ಹಾಗೂ ಪೀಠಿಕೆ -ವ್ಯತ್ಯಾಸ, ಸಂವಾದದಲ್ಲಿ ವೈವಿಧ್ಯ , ಅವಲೋಕನ ಸಂವಾದ ಅನಿಸಿಕೆ ಈ ನಾಲ್ಕು ಹಂತಗಳಲ್ಲಿ ಶಿಬಿರ ಜರಗಿತು. ಅರ್ಥಧಾರಿಗಳಾದ ರಾಧಾಕೃಷ್ಣ ಕಲ್ಚಾರ್ ಇವರು ನೀಡಿದ ಶ್ರೀ ರಾಮ ನಿರ್ಯಾಣ ಪ್ರಸಂಗದಲ್ಲಿ ಐದು ನಿಮಿಷದ ಶ್ರೀ ರಾಮನ ಪೀಠಿಕೆ , 10 ನಿಮಿಷದ ಭೀಷ್ಮ ವಿಜಯದ ಭೀಷ್ಮನ ಪೀಠಿಕೆ ಹಾಗೂ ಮನೋಜ್ಞವಾಗಿ ಕಾಲಮಿತಿಯಲ್ಲಿ ಪೀಠಿಕೆ ಮಾತುಗಳನ್ನು ಹೇಗೆ ಹೇಳುವುದು ಎಂಬ ಪ್ರಾತ್ಯಕ್ಷಿಕೆ ಅರ್ಥವತ್ತಾಗಿತ್ತು.
ಸ್ವಗತ ಮತ್ತು ಪೀಠಿಕೆಯಲ್ಲಿ ವ್ಯತ್ಯಾಸವನ್ನು ಬಹಳ ಸ್ಪಷ್ಟವಾಗಿ ತಿಳಿಸಿದರು.ವಿಷ್ಣುಭಟ್ ವಾಟೆಪಡು³ ಮತ್ತು ಹರೀಶ ಬಳಂತಿಮೊಗರು ಇವರ ವಾದ – ಸಂವಾದ ನೈಜ ಜೀವನದ ಚಿತ್ರಣ ಮೂಡಿಸಿತು. ಗಿರಿಜಾ ಕಲ್ಯಾಣದ ಭೈರಾಗಿಯಾಗಿ ರಾಧಾಕೃಷ್ಣ ಕಲ್ಚಾರ್ ಶಿವನ ವೈಶಿಷ್ಟéತೆಗಳನ್ನು ಅನಾವರಣಗೊಳಿಸುವಲ್ಲಿ ಸಫಲರಾದರೆ ಗಿರಿಜೆಯಾಗಿ ವಾಟೆಪಡು³ ವಿಷ್ಣುಭಟ್ ಪಾರ್ವತಿಗೆ ಶಿವನ ಮೇಲಿರುವ ಪ್ರೀತಿ ಭಕ್ತಿಯ ಕುರಿತು ಚಿತ್ರಣ ಬರುವಂತೆ ಮಾಡಿದರು.
ಚಕ್ರವ್ಯೂಹ ಪ್ರಸಂಗದಲ್ಲಿ ಧರ್ಮರಾಯನಾಗಿ ಹರೀಶ ಬಳಂತಿಮೊಗರು ಚಿಂತೆ ಸಂದಿಗ್ಧತೆಯನ್ನು ಸಶಕ್ತವಾಗಿ ವ್ಯಕ್ತಪಡಿಸಿದರೆ, ಅಭಿಮನ್ಯವಾಗಿ ವಾಟೆಪಡು³ ವಿಷ್ಣುಭಟ್ ಅಭಿಮನ್ಯವಿನ ಉತ್ಸಾಹ ವೀರಾವೇಶವನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾದರು.ಒಟ್ಟಾರೆಯಾಗಿ ತಾಳಮದ್ದಳೆಯ ಸ್ವರೂಪದಲ್ಲಿ ಬದಾಲವಣೆಯಿಲ್ಲದೆ ಕಾಲಮಿತಿಯಲ್ಲಿ ಹೇಗೆ ಪ್ರಸ್ತುತ ಪಡಿಸಬಹುದೆಂಬುದಕ್ಕೆ ಈ ಕಾರ್ಯಗಾರ ಸಾಕ್ಷಿಯಾಯಿತು.
ನಂತರದ ಸಂವಾದದಲ್ಲಿ ಡಾ|ಪೂವಪ್ಪ ಕಣಿಯೂರು ,ಮಂಜು ಸುಳ್ಯ ,ಕೆ. ರಾಮಶರ್ಮ,ಕೃಷ್ಣಶರ್ಮ ,ಸತ್ಯಶಂಕರ ಮಲೆಯಾಳ ,ಶಂಭಯ್ಯ ಕಂಜರ್ಪಣೆ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಿದರು.ಸರ್ವಾಧ್ಯಕ್ಷರಾದ ಕಲಾವಿದ ಡಾ| ಪ್ರಭಾಕರ ಶಿಶಿಲ ತಾಳಮದ್ದಳೆಯ ಬೆಳವಣಿಗೆಯಲ್ಲಿ ಇದೊಂದು ಹೊಸ ಆಯಾಮ.ವೇಗದ ಯುಗದಲ್ಲಿ ಕಾಲಮಿತಿಯ ಮತ್ತು ವೈವಿಧ್ಯತೆ ಅನಿವಾರ್ಯತೆ,ಪ್ರಸ್ತುತ ವಿದ್ಯಮಾನಗಳನ್ನು ಅರ್ಥವತ್ತಾಗಿ ಸೇರಿಸಿದಾಗ ವಿಷಯ ಪ್ರಕ್ಷಕರಿಗೆ ಖುಷಿಯಾಗುತ್ತದೆ ಮತ್ತು ವಿಷಯ ಮನವರಿಕೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಥಾಂತರಂಗ -9ಕ್ಕೆ ಮಂಗಳ ಹಾಡಿದರು.
ಹಿಮ್ಮೇಳದಲ್ಲಿ ರಮೇಶ ಭಟ್ ಪುತ್ತೂರು ಮತ್ತು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಕಂಠಸಿರಿಯಿಂದ ರಂಜಿಸಿದರು.ಚೆಂಡೆ ಮದ್ದಳೆಯಲ್ಲಿ ದೇಲಂತ ಮಜಲು ಸುಬ್ರಹ್ಮಣ್ಯ ಭಟ್ ಮತ್ತು ಲವ ಕುಮಾರ್ ಐಲ ಪ್ರಬುದ್ಧತೆಯನ್ನು ಪ್ರದರ್ಶಿಸಿದರು.
ಕೃಷ್ಣ ಶರ್ಮ