“ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಅನ್ನುವ ಮಾತು ಇಂದಿಗೂ ಪ್ರಸ್ತುತ. ಆದರೆ ಒಬ್ಬರು ಉತ್ತರ ಅಂದರೆ, ಇನ್ನೊಬ್ಬರು ದಕ್ಷಿಣ ಅನ್ನುವ ಜೋಡಿ ಸೇರಿ ಮದುವೆ ಮಾಡಿಸೋಕೆ ಹೊರಟರೆ ಆ ಮದುವೆ ಪರಿಸ್ಥಿತಿ ಏನಾಗಬಹುದು! ಹೌದು, ಇಂಥದ್ದೆ ಒಂದು ಕಾಮಿಡಿ ಜರ್ನಿಯ ಕಥೆ ಈ ವಾರ ತೆರೆಕಂಡ “ಎಸ್‌ಎಲ್‌ವಿ’ (ಸಿರಿ ಲಂಬೋದರ ವಿವಾಹ) ಚಿತ್ರ.
ಚಿತ್ರದ ನಾಯಕ ಸಂಜಯ್ ಮತ್ತು ನಾಯಕಿ ಲೀಲಾ ಇಬ್ಬರೂ ಬಾಲ್ಯ ಸ್ನೇಹಿತರು. ಮೇಲಾಗಿ ಇಬ್ಬರ ತಂದೆಯಂದಿರೂ ಸ್ನೇಹಿತರು. ಸ್ನೇಹಿತರಾದರೂ ವಿಚಿತ್ರ ಎಂಬ ಇವರ ತಂದೆಯರ ಬಾಂಡಿಂಗ್. ಅದೇ ಕಿತ್ತಾಟದ ಸ್ನೇಹ ಈ ಇಬ್ಬರಲ್ಲೂ ಇದೆ. ಸಂಜಯ್ ಮತ್ತು ಲೀಲಾ ಜೀವನದಲ್ಲಿ ಅದ್ಧೂರಿಯಾಗಿ ಬದುಕಬೇಕೆಂಬ ಕನಸು ಹೊತ್ತವರು. ವಿಧಿಯಾಟ ಅವರ ಯೋಚನೆಗಳು ತಲೆಕೆಳಗಾಗಿ, ವೆಡ್ಡಿಂಗ್ ಪ್ಲಾನರ್‌ಗಳಾಗಿ ಕೆಲಸ ಆರಂಭಿಸುತ್ತಾರೆ. ಬಾಲ್ಯದಿಂದಲೂ ಪೈಪೋಟಿ ಮನೋಭಾವದ ಈ ಇಬ್ಬರೂ ತಮ್ಮ ಪ್ರೊಫೆಷನ್‌ನಲ್ಲೂ ಪೈಪೋಟಿ ಮುಂದುವರಿಸುತ್ತಾರೆ. ಲೈಫ್ ಚೆಂಜಿಂಗ್ ಅನ್ನುವ ಒಂದು ಸುರ್ವಣಾವಕಾಶ, ರಾಜಕಾರಿಣಿಗಳ ಮಕ್ಕಳ ಮದುವೆ ಮಾಡಿಸುವುದು ಇವರ ಪಾಲಾಗುತ್ತದೆ. ಈ ಗಲಾಟೆ ಜೋಡಿ “ಸಿರಿ ಲಂಬೋದರ ವಿವಾಹ’ವನ್ನು ನೇರವೇರಿಸುತ್ತಾರಾ? ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.
“ಎಸ್‌ಎಲ್‌ವಿ’ ಸಿನಿಮಾದ ಮೊದಲಾರ್ಧ ನಾಯಕ-ನಾಯಕಿಯರ ಕಿತ್ತಾಟ, ಕಾಮಿಡಿ ನಡುವೆ ಒಂದೊಂದು ಆ್ಯಕ್ಷನ್ ಸೀನ್‌ಗಳ ಮೂಲಕ ಸಾಗುತ್ತದೆ. ಆದರೆ ಕಥೆಗೆ ನಿಜವಾದ ಸಸ್ಪೆನ್ಸ್ ನೀಡುವುದೇ ದ್ವಿತಿಯಾರ್ಧ. ಪಂಚಿಂಗ್ ಕಾಮಿಡಿಗೆ ನಗುವ ಪ್ರೇಕ್ಷಕರನ್ನು ದ್ವಿತಿಯಾರ್ಧ ಗಂಭೀರವಾಗಿಸುವಂತೆ ಮಾಡುತ್ತದೆ. ನಿರ್ದೇಶಕ ಸೌರಭ್ ಕುಲರ್ಕಣಿ ತಮ್ಮ ಮೊದಲ ಪ್ರಯತ್ನದಲ್ಲೇ ಸಂಪೂರ್ಣ ಮನರಂಜನೆ ನೀಡುವ ಕಡೆಗೆ ಶ್ರಮ ವಹಿಸಿದ್ದಾರೆ ಎಂಬುದು ಚಿತ್ರದಲ್ಲಿ ಕಾಣುತ್ತದೆ. ಚಿತ್ರಕಥೆ ಇನ್ನಷ್ಟು ಬಿಗಿಯಾಗಿದ್ದರೆ ಚಿತ್ರ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಆದರೂ ಒಂದೊಳ್ಳೆ ಪ್ರಯತ್ನವಾಗಿ “ಎಸ್‌ಎಲ್‌ವಿ’ಯನ್ನು ಮೆಚ್ಚುಬಹುದು.
ಇನ್ನು ನಾಯಕ ಅಂಜನ್ ಭಾರಾದ್ವಾಜ್, ನಾಯಕಿ ದಿಶಾ ಮೊದಲ ಪ್ರಯತ್ನದಲ್ಲೆ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಸುಂದರ್, ರಾಜೇಶ್ ನಟರಂಗ, ಬಾಲಾ ರಾಜವಾಡಿ, ರೋಹಿತ್ ಸೇರಿದಂತೆ ಪ್ರಮುಖ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ವಾಣಿ ಭಟ್ಟ