Advertisement

ಸಿಲಿಕಾನ್‌ ಸಿಟಿಯಲ್ಲೀಗ ಸಿರಿಧಾನ್ಯದ್ದೇ ಧ್ಯಾನ

11:54 AM Jan 22, 2018 | Team Udayavani |

ಐಟಿ ಎಂದರೆ ಎಲ್ಲರಿಗೂ ಸಿಲಿಕಾನ್‌ ಸಿಟಿ ಬೆಂಗಳೂರು ಕಣ್ಮುಂದೆ ಬರುತ್ತದೆ. ಒಂದು ಕಾಲದಲ್ಲಿ ಐಟಿ ಉದ್ಯಮದಿಂದ ಜಗತ್ತು ನಗರದ ಕಡೆಗೆ ನೋಡುತ್ತಿತ್ತು. ಇದರ ಪರಿಣಾಮ ಲಕ್ಷಾಂತರ ಯುವಕರು ಐಟಿ ಕ್ಷೇತ್ರಕ್ಕೆ ಹೊರಳಿದರು. ಈ ಟ್ರೆಂಡ್‌ ಬದಲಾಗುತ್ತಿದ್ದು, ಐಟಿ ಸಿಟಿ ಈಗ “ಮಿಲೆಟ್‌ ಸಿಟಿ’ಯಾಗಿ ಪರಿವರ್ತನೆಯಾಗುತ್ತಿದೆ. ಹೌದು, ಬೆಂಗಳೂರಿನಲ್ಲಿ “ಮಿಲೆಟ್‌ ಮಂತ್ರ’ ಕೇಳಿಬರುತ್ತಿದೆ. ಉತ್ಪಾದಕರು, ಉದ್ಯಮಿಗಳು ಮತ್ತು ಗ್ರಾಹಕರು ಈ ಮೂವರ ಬಾಯಲ್ಲೂ ಸಿರಿಧಾನ್ಯಗಳದ್ದೇ ಮಾತು.

Advertisement

ಹಾಗಾಗಿ, ಸಿರಿಧಾನ್ಯಗಳ ಉದ್ಯಮ ಈಗ ಚಿನ್ನದ ಮೊಟ್ಟೆ ಇಡುವ ಕೋಳಿ. ತಿಂಗಳಾಂತ್ಯಕ್ಕೆ ಲಕ್ಷಗಟ್ಟಲೆ ಸಂಬಳ ಎಣಿಸುವ ಐಟಿ ಉದ್ಯೋಗಿಗಳು, ಅಮೆರಿಕದಂತಹ ಶ್ರೀಮಂತ ದೇಶಗಳಲ್ಲಿನ ವ್ಯಾಪಾರಿಗಳು ಕೂಡ ಈ “ಕೋಳಿ’ಯ ಹಿಂದೆಬಿದ್ದಿದ್ದಾರೆ. ಯಾರೇ ಇದನ್ನು ಸಾಕಿದರೂ ಅವರಿಗೆ “ಚಿನ್ನದ ಮೊಟ್ಟೆ’ ಗ್ಯಾರಂಟಿ. ಕೇವಲ ಎಂಟು ತಿಂಗಳ ಹಿಂದಿನ ಮಾತು. ಸಿರಿಧಾನ್ಯಗಳ ವಹಿವಾಟು ಲಕ್ಷಗಳ ಲೆಕ್ಕದಲ್ಲಿ ನಡೆಯುತ್ತಿತ್ತು. ಈಗ ಅದು ಕೋಟಿಗಳಿಗೆ ತಲುಪಿದೆ. 

ಅಮೆರಿಕೆ ತೊರೆದು ಅಂಗಡಿ ತೆರೆದ!: ಅಮೆರಿಕದಲ್ಲಿ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆರ್‌. ಜಯಕುಮಾರ್‌, ಈಗ ವೈಟ್‌ಫೀಲ್ಡ್‌ನಲ್ಲಿ “ಗ್ರಾಮಿ’ ಎಂಬ ಸಿರಿಧಾನ್ಯ ಉತ್ಪನ್ನಗಳ ಅಂಗಡಿ ತೆಗೆದುಕೊಂಡು ಕುಳಿತಿದ್ದಾರೆ. ಅಮೆರಿಕದಲ್ಲಿ ಅವರಿಗೆ ಪ್ರತಿ ವರ್ಷ ಮೂರು ಕೋಟಿ ರೂ. ಸಂಬಳ ಬರುತ್ತಿತ್ತು. ಅದನ್ನು ತೊರೆದು, ಸಿರಿಧಾನ್ಯಗಳ ರೆಡಿಮೇಡ್‌ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದ್ದಾರೆ.

ಕೇವಲ ಎಂಟು ತಿಂಗಳಲ್ಲಿ ಅವರು 30 ಲಕ್ಷ ರೂ. ವಹಿವಾಟು ನಡೆಸಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಒಂದು ಕೋಟಿ ರೂ. ವಹಿವಾಟಿನ ಗುರಿಯನ್ನು ಹೊಂದಿದ್ದಾರೆ. ಇದು ಸಿರಿಧಾನ್ಯಗಳ ಕ್ಷೇತ್ರ ಬೆಳೆಯುತ್ತಿರುವ ವೇಗಕ್ಕೆ ಸಣ್ಣ ಉದಾಹರಣೆ. ದೇಶದಲ್ಲಿ 400ರಿಂದ 500 ಕೋಟಿ ರೂ. ಸಿರಿಧಾನ್ಯಗಳ ವಹಿವಾಟು ನಡೆಯುತ್ತಿರುವ ಅಂದಾಜಿದೆ. ಇದರಲ್ಲಿ ಶೇ. 50ರಷ್ಟು ಕರ್ನಾಟಕದ್ದೇ ಆಗಿದೆ.

ಯಾಕೆಂದರೆ, ದೇಶದಲ್ಲಿ ಅತಿ ಹೆಚ್ಚು ಉತ್ಪಾದನೆ ಮಾಡುವ ಮತ್ತು ಒಟ್ಟಾರೆ ದೇಶದ ಸಿರಿಧಾನ್ಯಗಳ ಮಾರುಕಟ್ಟೆಯಲ್ಲಿ ಶೇ. 50ರಷ್ಟು ಬೆಂಗಳೂರಿನಲ್ಲೇ ಇದೆ. ಸ್ಟಾರ್ಟ್‌ಅಪ್‌ಗ್ಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಇದು ಕಾರಣವಾಗಿದೆ ಎಂದು ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ (ಐಐಎಂಆರ್‌) ನಿರ್ದೇಶಕ ಡಾ.ವಿಲಾಸ್‌ ಎ. ಟೊಣಪಿ ತಿಳಿಸುತ್ತಾರೆ. 

Advertisement

ಈ ಮಧ್ಯೆ ಕೇಂದ್ರ ಸರ್ಕಾರ 2018 ಅನ್ನು ಸಿರಿಧಾನ್ಯಗಳ ವರ್ಷವನ್ನಾಗಿ ಘೋಷಿಸಲು ನಿರ್ಧರಿಸಿದ್ದು, ವಿಶ್ವ ಸಿರಿಧಾನ್ಯ ವರ್ಷಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಕೂಡ ಬೃಹತ್‌ ಮೇಳಗಳನ್ನು ಆಯೋಜಿಸುತ್ತಿದೆ. ಬಿಗ್‌ಬಾಸ್ಕೆಟ್‌, ಬ್ರಿಟಾನಿಯಾ, ಅಮೇಝಾನ್‌, ಐಟಿಸಿ ಸೇರಿದಂತೆ ದೈತ್ಯ ಕಂಪೆನಿಗಳೂ ಈ ಸಿರಿಧಾನ್ಯಗಳತ್ತ ಮುಖಮಾಡಿವೆ. ಇದೆಲ್ಲದರ ಪರಿಣಾಮ ಸಿರಿಧಾನ್ಯಗಳಿಗೆ ಅವಕಾಶಗಳ ಬಾಗಿಲು ತೆರೆದುಕೊಂಡಿದೆ. 

ಜನಪ್ರಿಯತೆಗೆ ಆರೋಗ್ಯ ಜಾಗೃತಿ ಕಾರಣ: ಸಿರಿಧಾನ್ಯಗಳು ಇಷ್ಟೊಂದು ಜನಪ್ರಿಯವಾಗಲು ಪ್ರಮುಖ ಕಾರಣ- ಆರೋಗ್ಯದ ಬಗ್ಗೆ ಜನರಲ್ಲಿ ಉಂಟಾಗಿರುವ ಜಾಗೃತಿ ಎಂದು ಅಭಿಪ್ರಾಯಪಡುತ್ತಾರೆ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಉಪ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಡಾ.ಬಿ.ಕೆ.ಭಾಸ್ಕರಾಚಾರಿ. ಪ್ರಸ್ತುತ ಸಮಾಜದಲ್ಲಿ ಅಪೌಷ್ಟಿಕತೆ ಮತ್ತು ಅಧಿಕ ಪೌಷ್ಟಿಕತೆ ಹೊಂದಿರುವ ಎರಡು ವರ್ಗಗಳಿವೆ.

ಇವರಿಬ್ಬರಿಗೂ ಹೊಂದಾಣಿಕೆಯಾಗುವಂತಹ ಆಹಾರ ಸಿರಿಧಾನ್ಯ. ಇದರೊಂದಿಗೆ ಸಿರಿಧಾನ್ಯಗಳಿಂದ ತಯಾರಿಸಿದ ನಾನಾ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳು ಯುವಕರನ್ನು ಸೆಳೆಯುತ್ತಿವೆ. ಹೀಗೆ ಬೇಡಿಕೆ ಹೆಚ್ಚಾದಾಗ, ಸಹಜವಾಗಿ ಆ ಕಡೆಗೆ ಉದ್ಯಮಿಗಳು ಹೊರಳುತ್ತಾರೆ. ಈಗ ಆಗುತ್ತಿರುವುದು ಇದೇ ಎಂದು ಅವರು ತಿಳಿಸುತ್ತಾರೆ. 

ಸಿರಿಧಾನ್ಯಗಳ ಟ್ರೆಂಡ್‌; ರೈತರಿಗೂ ಲಾಭ: ರಾಜಧಾನಿಯಲ್ಲಿ ಸಿರಿಧಾನ್ಯಗಳ ಟ್ರೆಂಡ್‌ ಶುರುವಾಗಿರುವುದರಿಂದ ಸಹಜವಾಗಿಯೇ ಇದರ ಲಾಭ ರೈತರಿಗೂ ಆಗುತ್ತಿದೆ.ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ಹೆಚ್ಚಿನ ಬೆಲೆ ಕೊಟ್ಟು ಖರೀದಿಸಲಾಗುತ್ತಿದೆ. ಸಿರಿಧಾನ್ಯ ಮೇಳಗಳು ನೇರ ಮಾರುಕಟ್ಟೆ ವ್ಯವಸ್ಥೆಗೆ ವೇದಿಕೆ ಕಲ್ಪಿಸಿರುವುದರಿಂದ ಬಹುತೇಕ ರೈತರಿಗೆ ಇದರ ಲಾಭ ದೊರೆಯುತ್ತಿದೆ.

ಹಾಗಾಗಿ, ಈ ಮೊದಲು ಕೃಷಿಯಲ್ಲಿ ಉಪ ಬೆಳೆಗಳಾಗಿದ್ದ ಸಿರಿಧಾನ್ಯಗಳು ಶ್ರೀಮಂತರ ಖರೀದಿಯಿಂದ ಪ್ರಮುಖ ಬೆಳೆಯಾಗಿ ಮುನ್ನೆಲೆಗೆ ಬರುತ್ತಿದೆ. 2004ರಲ್ಲಿ ಕೇವಲ 2,500 ಹೆಕ್ಟೇರ್‌ಗೆ ಸೀಮಿತವಾಗಿದ್ದ ಈ ಬೆಳೆಗಳು ಈಗ ಒಂದು ಲಕ್ಷ ಹೆಕ್ಟೇರ್‌ಗೆ ವಿಸ್ತರಣೆಯಾಗಿವೆ. ರಾಜ್ಯದಲ್ಲಿ 14 ಪ್ರಾಂತೀಯ ಸಹಕಾರಿ ಸಾವಯವ ರೈತರ ಸಂಘಟನೆಗಳ ಒಕ್ಕೂಟಗಳನ್ನು ಸ್ಥಾಪಿಸಿದ್ದು, ಇಲ್ಲಿ ಉತ್ಪಾದನೆಯಾಗುವ ಸಿರಿಧಾನ್ಯಗಳ ಉತ್ಪನ್ನಗಳಲ್ಲಿ ಶೇ. 60ರಿಂದ 70ರಷ್ಟು ಬೆಂಗಳೂರು ಮಾರುಕಟ್ಟೆಗೆ ಬರುತ್ತದೆ.

ಕಳೆದ ಎಂಟು ತಿಂಗಳಲ್ಲಿ ಈ ಒಕ್ಕೂಟಗಳ ವಹಿವಾಟು ಮೂರ್‍ನಾಲ್ಕು ಪಟ್ಟು ಹೆಚ್ಚಳವಾಗಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರಿ ಸಾವಯವ ರೈತರ ಸಂಘಗಳ ಒಕ್ಕೂಟದ ವಾರ್ಷಿಕ ವಹಿವಾಟು ಕಳೆದ ವರ್ಷ 30 ಲಕ್ಷ ಇತ್ತು. ಎಂಟು ತಿಂಗಳಲ್ಲಿ 3.70 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ನಮಲ್ಲಿನ ಉತ್ಪನ್ನಗಳಲ್ಲಿ ಬಹುತೇಕ ಬೆಂಗಳೂರು ಮಾರುಕಟ್ಟೆಗೇ ಬರುತ್ತದೆ ಎಂದು ಅಧ್ಯಕ್ಷ ಟಿ. ಕೃಪಾ ಮಾಹಿತಿ ನೀಡುತ್ತಾರೆ. 

250 ಸಾವಯವ ಮಳಿಗೆಗಳು: ನಗರದಲ್ಲಿ ಸುಮಾರು 650ರಿಂದ 700 ಸಾವಯವ ಮಳಿಗೆಗಳಿದ್ದು, ಇದರಲ್ಲಿ ಸುಮಾರು ಶೇ. 10ರಷ್ಟು ಮಳಿಗೆಗಳನ್ನು ಐಟಿ ಉದ್ಯೋಗಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಡೆಸುತ್ತಿದ್ದಾರೆ. ಬರೀ ಸಾವಯವ ಉತ್ಪನ್ನಗಳ ಮಳಿಗೆಗಳು 250 ಇವೆ. ಜತೆಗೆ ಅಂದಾಜು 450-500 ಮಾಲ್‌ಗ‌ಳು, ದೊಡ್ಡ ಮಳಿಗೆಗಳಲ್ಲೂ ಸಾವಯವ-ಸಿರಿಧಾನ್ಯಗಳ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದೆ.

ಸಾವಯವ ಮಳಿಗೆಗಳಲ್ಲಿ ಶೇ. 10ರಷ್ಟು ಐಟಿ ಉದ್ಯೋಗಿಗಳು ನಡೆಸುತ್ತಿದ್ದಾರೆ. ಇದರಲ್ಲಿ ಕೆಲವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಸಂಪೂರ್ಣ ಈ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಹಲವರು ಎಲ್ಲವನ್ನೂ ಸಜ್ಜುಗೊಳಿಸಿ, ಬಾಡಿಗೆ ಅಥವಾ ಕುಟುಂಬದ ಸದಸ್ಯರಿಗೆ ವಹಿಸಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. 

ಆದರೆ, ನಿಖರವಾಗಿ ಎಷ್ಟು ವಹಿವಾಟು ನಡೆಯುತ್ತಿದೆ? ಎಷ್ಟು ಸಾವಯವ ಮತ್ತು ಸಿರಿಧಾನ್ಯಗಳಿಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗ್ಳು ರಾಜ್ಯದಲ್ಲಿವೆ? ಎಂಬ ನಿಖರ ಮಾಹಿತಿ ಲಭ್ಯ ಇಲ್ಲ. ಆದರೆ, ಇತ್ತೀಚೆಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಅಧ್ಯಯನಕ್ಕೆ ಕೃಷಿ ಇಲಾಖೆ ಮುಂದಾಗಿದೆ ಎಂದೂ ಅಧಿಕಾರಿಗಳು ಹೇಳಿದರು. 

ಆದರೆ, ಕೃಷಿ ಸ್ಟಾರ್ಟ್‌ಅಪ್‌ ಮೇಲೆ ಬೆಳಕು ಚೆಲ್ಲಿದ ಮೊದಲ ರಾಜ್ಯ ಕರ್ನಾಟಕ. ಕಳೆದ ವರ್ಷ ಅಗ್ರಿ ಸ್ಟಾರ್ಟ್‌ಅಪ್‌ಗ್ಳಿಗಾಗಿಯೇ ಸರ್ಕಾರ 10 ಕೋಟಿ ರೂ. ನೀಡಿದೆ. ಇದು ಕೇವಲ ಒಂದು ವರ್ಷಕ್ಕೆ ಸೀಮಿತವಾಗುವುದಿಲ್ಲ; ಬರುವ ವರ್ಷ ಈ ಅನುದಾನ ಮತ್ತಷ್ಟು ಹೆಚ್ಚಳ ಆಗಲಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

ಬೆಂಗಳೂರಲ್ಲೇ ಯಾಕೆ?: ಉದ್ಯಾನ ನಗರಿ ವೈವಿಧ್ಯತೆಯಿಂದ ಕೂಡಿದ್ದು, ಇಲ್ಲಿ ಎಲ್ಲ ವರ್ಗದ ಜನ ನೆಲೆಸಿದ್ದಾರೆ. ಹಾಗಾಗಿ, ಯಾವುದೇ ಉತ್ಪನ್ನಕ್ಕೆ ಬೆಂಗಳೂರು “ಟೆಸ್ಟ್‌ ಮಾರ್ಕೆಟ್‌’ ಎಂದು ಉದ್ಯಮಿಗಳು ಹೇಳುತ್ತಾರೆ. ಕೇವಲ ಸಿರಿಧಾನ್ಯಗಳಲ್ಲ; ಯಾವುದೇ ಉತ್ಪನ್ನಗಳನ್ನು ತೆಗೆದುಕೊಂಡರೂ ಮೊದಲು ಅದು ಬೆಂಗಳೂರು ಮಾರುಕಟ್ಟೆಗೆ ಬರುತ್ತದೆ.

ಉತ್ತಮ ಪ್ರತಿಕ್ರಿಯೆಗಳು, ಸ್ಪಂದನೆಗಳು ದೊರೆಯುತ್ತವೆ. ಇದಲ್ಲದೆ, ಸಿರಿಧಾನ್ಯಗಳನ್ನು ಬೆಳೆಯುವ ದೇಶಗಳು ಭಾರತ ಮತ್ತು ಆಫ್ರಿಕಾ ಮಾತ್ರ. ಇನ್ನು ದೇಶದ ಬಹುತೇಕ ಉತ್ಪಾದನೆ ಕರ್ನಾಟಕದಲ್ಲೇ ಆಗುತ್ತದೆ. ಇದು ಕೂಡ ಒಂದು ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ನಮ್ಮಲ್ಲಿ ಸಿರಿಧಾನ್ಯ ಲಭ್ಯ!: ನಮ್ಮಲ್ಲಿ ಸಿರಿಧಾನ್ಯಗಳು-ಸಾವಯವ ಉತ್ಪನ್ನಗಳು ದೊರೆಯುತ್ತವೆ. ಕೇಳಿ ಪಡೆಯಿರಿ…! ಕೆಲವು ಜನರಲ್‌ ಕಿರಾಣಿ ಅಂಗಡಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಈ ಫ‌ಲಕಗಳು ಕಂಡುಬರುತ್ತಿವೆ. ಇದು ಜನರಲ್ಲಿ ಮೂಡಿದ ಜಾಗೃತಿ ಮತ್ತು ಬೇಡಿಕೆಯ ಎಫೆಕ್ಟ್. 

ಸಾಮಾನ್ಯವಾಗಿ ನಿರ್ದಿಷ್ಟ ಅಂಗಡಿಗಳಿಗೆ ಸೀಮಿತವಾಗಿದ್ದ ಸಿರಿಧಾನ್ಯಗಳು, ಇತ್ತೀಚೆಗೆ ಜನರಲ್‌ ಕಿರಾಣಿ ಅಂಗಡಿಗಳಿಗೂ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿವೆ. ಮೊದಲು ಮಿಲೆಟ್ಸ್‌ ಕೇಳುತ್ತಲೇ ಇರಲಿಲ್ಲ. ಆದರೆ, ಈಚೆಗೆ ಕೆಲ ಗ್ರಾಹಕರಿಂದ ಬೇಡಿಕೆಗಳು ಬರುತ್ತಿವೆ. ಹಾಗಾಗಿ, ಅಂಗಡಿಯಲ್ಲಿ ಮಾರಾಟಕ್ಕಿಡಲಾಗಿದೆ ಎಂದು ರಾಜಾಜಿನಗರದ ಶಿವನಹಳ್ಳಿಯ ಕಿರಾಣಿ ಅಂಗಡಿಯ ಮಂಜುನಾಥ್‌ ತಿಳಿಸುತ್ತಾರೆ.  

ಬೇಡಿಕೆಯಷ್ಟು ಪೂರೈಕೆ ಇಲ್ಲ: ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ, ಅದಕ್ಕೆ ತಕ್ಕಂತೆ ಪೂರೈಕೆ ಇಲ್ಲ. ಇದೇ ಕಾರಣಕ್ಕೆ ದುಬಾರಿಯಾಗಿ ಪರಿಣಮಿಸಿವೆ ಎಂದು ಹೇಳುತ್ತಾರೆ ವ್ಯಾಪಾರಿಗಳು. ಹಾಗಾಗಿ, ನೆರೆಯ ತಮಿಳುನಾಡು, ಆಂಧ್ರಪ್ರದೇಶದಿಂದ ಸಿರಿಧಾನ್ಯಗಳು ಬೆಂಗಳೂರು ಮಾರುಕಟ್ಟೆಗೆ ಬರುತ್ತಿವೆ. 

ರಾಜಸ್ತಾನ ಹೊರತುಪಡಿಸಿದರೆ, ಅತಿ ಹೆಚ್ಚು ಒಣಭೂಮಿ ಹೊಂದಿರುವ ಪ್ರದೇಶ ಕರ್ನಾಟಕ. ಇಂತಹ ಪ್ರದೇಶಗಳಿಗೆ ಸಿರಿಧಾನ್ಯ ಹೇಳಿಮಾಡಿಸಿದ ಬೆಳೆ. ಆದ್ದರಿಂದ ಸಾಕಷ್ಟು ಅವಕಾಶಗಳಿದ್ದು, ಉತ್ಪಾದನೆ ಏರಿಕೆಯಾದರೆ, ಸ್ಪರ್ಧೆ ಏರ್ಪಟ್ಟು ದರ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದೂ ವ್ಯಾಪಾರಿಗಳು ಹೇಳುತ್ತಾರೆ. 

ಸಿರಿಧಾನ್ಯದಿಂದ ಏನು ಉಪಯೋಗ?: ನಿತ್ಯ ಬಳಸುವ ಅಕ್ಕಿ, ಗೋಧಿಗೆ ಹೋಲಿಸಿದರೆ, ಸಿರಿಧಾನ್ಯಗಳಲ್ಲಿ ಕೊಬ್ಬು, ನಾರು, ಖನಿಜ ಮತ್ತು ರಂಜಕ ಹೆಚ್ಚಿನ ಪ್ರಮಾಣದಲ್ಲಿವೆ. ನಾರಿನ ಅಂಶ ಶೇ. 1ರಿಂದ 9ರಷ್ಟು ಇದ್ದು, ದೇಹದಲ್ಲಿರುವ ಕೊಲೆಸ್ಟ್ರಾಲ್‌, ಟ್ರೈಗ್ಲಿಸಾರಾಯ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುವುದಕ್ಕೆ ಸಹಾಯಕಾರಿಯಾಗಿದೆ.

ಹೃದಯ ಸಂಬಂಧಿ ಕಾಯಿಲೆಗಳು, ಹೆಚ್ಚು ತೂಕದ ಸಮಸ್ಯೆಯನ್ನು ನಿವಾರಿಸುತ್ತದೆ. ಅದರಲ್ಲೂ ನವಣೆ ಉತ್ಪನ್ನಗಳು ಸಕ್ಕರೆ ರೋಗಿಗಳಿಗೆ ಅವಶ್ಯ. ರಾಗಿಯಲ್ಲಿ ಕೂಡ ಹೆಚ್ಚಿನ ಸುಣ್ಣದಂಶ, ರಂಜಕ ಇರುವುದರಿಂದ ಎಲಬು, ಹಲ್ಲು ಗಟ್ಟಿಯಾಗುತ್ತವೆ. ಹೀಗಾಗಿ ರಾಗಿ ಚಿಕ್ಕಮಕ್ಕಳ ಆಹಾರದಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಅದೇ ರೀತಿ, ಸಜ್ಜೆ, ಸಾವೆಯಲ್ಲಿ ಹೆಚ್ಚಿನ ಕಬ್ಬಿಣ ಅಂಶವಿದ್ದು ರಕ್ತಹೀನತೆ ತಡೆಗಟ್ಟುತ್ತದೆ. ಸಿರಿಧಾನ್ಯಗಳಲ್ಲಿ ಒಟ್ಟು 9 ಪ್ರಕಾರಗಳಿವೆ. 

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next