ಪ್ರತಿದಿನ ಸಂಜೆಯಾಗುವುದರೊಳಗೆ ಮನೆ ಸೇರಿಕೊಳ್ಳುವ ಮಗಳು, ಅಂದು ರಾತ್ರಿಯಾದರೂ ಆಕೆಯ ಸುಳಿವೇ ಇಲ್ಲ. ಗಾಬರಿಯಾದ ತಾಯಿ ತಮ್ಮ ಮತ್ತೂಬ್ಬ ಮಗಳ ಜೊತೆ ನಡುರಾತ್ರಿ ಪೊಲೀಸ್ ಸ್ಟೇಷನ್‌ನತ್ತ ಹೆಜ್ಜೆ ಹಾಕುತ್ತಾಳೆ. ತನ್ನ ಮಗಳು ಕಾಣೆಯಾಗಿದ್ದಾಳೆ ಹುಡುಕಿಕೊಡಿ ಎಂದು ಪೊಲೀಸರ ಮುಂದೆ ಅಂಗಲಾಚುವ ಆ ತಾಯಿಗೆ ಅಲ್ಲಿನ ಪೊಲೀಸ್ ವ್ಯವಸ್ಥೆಯ ಮತ್ತೂಂದು ಮುಖ ಪರಿಚಯವಾಗುತ್ತದೆ. ಅಂತೂ ಕಾಡಿ-ಬೇಡಿ ಪೊಲೀಸರಿಗೆ ದೂರು ಕೊಟ್ಟರೂ, ಬೆಳಗಾಗುವುದರೊಳಗೆ ಕಾಣೆಯಾದ ಮಗಳು ಅರೆಬೆಂದ ಸ್ಥಿತಿಯಲ್ಲಿ ನಗರದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗುತ್ತಾಳೆ.
ಹಾಗಾದರೆ, ಕಾಣೆಯಾದ ಆ ಹುಡುಗಿ ಯಾರು? ಇಂಥದ್ದೊಂದು ಪೈಶಾಚಿಕ ಕೃತ್ಯಕ್ಕೆ ಕಾರಣವೇನು? ಇದರ ಹಿಂದಿನ ಕಾಣದ ಕೈಗಳು ಯಾರು? ಎಂಬುದನ್ನು ಪತ್ತೆ ಹಚ್ಚಲು ಯುವ ಐಪಿಎಸ್ ಅಧಿಕಾರಿ ಸಮರ್ಥ್ (ನಾಯಕ)ನನ್ನು ಪೊಲೀಸ್ ಇಲಾಖೆ ನೇಮಿಸುತ್ತದೆ. ಈ ಕೃತ್ಯದ ಹೆಜ್ಜೆ ಗುರುತು ಹಿಡಿದು ತನಿಖೆಗೆ ಹೊರಡುವ ನಾಯಕನಿಗೆ ಪ್ರತಿ ಹೆಜ್ಜೆಗೂ ಸವಾಲು ಎದುರಾಗುತ್ತದೆ. ಅದೆಲ್ಲವನ್ನು ಭೇದಿಸಿ ಪಾತಕಿಯ ಮುಖವನ್ನು ಪರಿಚಯಿಸುವ ಹೊತ್ತಿಗೆ ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಸೈರನ್’ ಚಿತ್ರದ ಕಥಾಹಂದರ. ಅದು ಹೇಗಿದೆ ಎಂಬ ಕುತೂಹಲ ನಿಮಗೂ ಇದ್ದರೆ, ಒಮ್ಮೆ ಥಿಯೇಟರ್‌ನಲ್ಲಿ “ಸೈರನ್’ ಸೌಂಡ್ ನೋಡಿಬರಲು ಅಡ್ಡಿಯಿಲ್ಲ.
ಆರಂಭದಲ್ಲಿಯೇ ಸಿನಿಮಾದ ಟೈಟಲ್, ಪೋಸ್ಟರ್, ಟೀಸರ್, ಟ್ರೇಲರ್ ನೋಡಿದರವರಿಗೆ ಮತ್ತು ಸ್ವತಃ ಚಿತ್ರತಂಡವೇ ಹೇಳಿಕೊಂಡಿರುವಂತೆ “ಸೈರನ್’ ಒಂದು ಔಟ್ ಆ್ಯಂಡ್ ಔಟ್ ಇನ್ವೆಸ್ಟಿಗೇಷನ್, ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ.
ಹುಡುಗಿಯೊಬ್ಬಳ ಕಣ್ಮರೆ, ನಿಗೂಢ ಸಾವು, ಅದರ ಹಿಂದಿನ ಕಾರಣಗಳು ಮತ್ತು ಕಾರಣರಾದವರ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. ತುಂಬ ಗಂಭೀರವಾಗಿ ತೆರೆದುಕೊಳ್ಳುವ “ಸೈರನ್’ ಅಷ್ಟೇ ಗಂಭೀರವಾಗಿ ಕ್ಲೈಮ್ಯಾಕ್ಸ್ ವರೆಗೂ ಸಾಗುತ್ತದೆ. ಕ್ರೈಂ-ಥ್ರಿಲ್ಲರ್ ಸಿನಿಮಾಗಳಿಗೆ ಕುತೂಹಲವೇ ಜೀವಾಳ. ಅಂಥದ್ದೇ ಒಂದಷ್ಟು ಕುತೂಹಲ, ಟ್ವಿಸ್ಟ್-ಟರ್ನ್ಗಳ ಜೊತೆ ಚಿತ್ರವನ್ನು ತೆರೆಮೇಲೆ ತಂದಿದ್ದಾರೆ ನಿರ್ದೇಶಕ ರಾಜ ವೆಂಕಯ್ಯ.
ಇನ್ನು ಯುವನಟ ಪ್ರವೀರ್ ಮೊದಲ ಸಿನಿಮಾದಲ್ಲೇ ಒಂದಷ್ಟು ಭರವಸೆ ಮೂಡಿಸುತ್ತಾರೆ. ಆ್ಯಕ್ಷನ್, ಡ್ಯಾನ್ಸ್ ಎಲ್ಲದಕ್ಕೂ ಪ್ರವೀರ್ ಹಾಕಿರುವ ಪರಿಶ್ರಮ ತೆರೆಮೇಲೆ ಕಾಣುತ್ತದೆ. ಉಳಿದಂತೆ ಪವಿತ್ರಾ ಲೋಕೇಶ್, ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ, ಸ್ಪರ್ಶ ರೇಖಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ “ಸೈರನ್’ ನೋಡಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್