Advertisement

ರಾರಾವಿ ಮೇಲ್ಸೇತುವೆ ಕಾಮಗಾರಿ ಮತ್ತೆ ನನೆಗುದಿಗೆ

01:19 PM Jun 15, 2019 | Naveen |

ಬಸವರೆಡ್ಡಿ
ಸಿರುಗುಪ್ಪ:
ತಾಲೂಕಿನ ರಾರಾವಿ-ಬೇಲೂರು ರಾಜ್ಯಹೆದ್ದಾರಿ 63ರಲ್ಲಿ ಬರುವ ರಾರಾವಿ ಗ್ರಾಮದ ಹತ್ತಿರ ಹರಿಯುತ್ತಿರುವ ವೇದಾವತಿ ಹಗರಿ ನದಿಗೆ ರಾಜ್ಯ ಹೆದ್ದಾರಿಗಳಲ್ಲಿ ಸೇತುವೆಗಳ ಸುಧಾರಣೆ ಯೋಜನೆಯಡಿಯಲ್ಲಿ ಹಗರಿ ನದಿಗೆ ಅಡ್ಡಲಾಗಿ ಮೇಲ್ಮಟ್ಟದ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿ 6 ವರ್ಷ ಕಳೆದರೂ ಮುಗಿದಿಲ್ಲ.

Advertisement

ಪ್ರದೀಪ್‌ ಕಿಲಾರು (ಮೆ| ಮಾಧವ ಹೈಟೆಕ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌) ಕಂಪನಿಯು ಈ ಸೇತುವೆಯ ನಿರ್ಮಾಣ ಕಾರ್ಯವನ್ನು ರೂ.30ಕೋಟಿ ವೆಚ್ಚದಲ್ಲಿ ಮಾಡಲು ಗುತ್ತಿಗೆ ಪಡೆದಿದ್ದು, 10-01-2013ರಂದು ಅಂದಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸೇತುವೆ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದ್ದರು.

ಸೀಮಾಂದ್ರ ಮತ್ತು ಕರ್ನಾಟಕ ರಾಜ್ಯದ ಮುಖ್ಯ ಸಂಪರ್ಕ ಸೇತುವೆಯಾಗಿರುವ ಈ ಸೇತುವೆಯ ಮೇಲೆ ಮಹಾರಾಷ್ಟ್ರ, ತೆಲಂಗಾಣ, ಸೀಮಾಂದ್ರ ಪ್ರದೇಶದಿಂದ ಸಂಚರಿಸುವವರಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಈ ಸೇತುವೆ ನಿರ್ಮಾಣವಾದರೆ ಮಂತ್ರಾಲಯ, ಶ್ರೀಶೈಲ, ಹೈದ್ರಾಬಾದ್‌, ತಿರುಪತಿ ಮುಂತಾದ ಪ್ರೇಕ್ಷಣಿಯ ಸ್ಥಳಗಳಿಗೆ ತೆರಳಲು ಹೈದ್ರಾಬಾದ್‌ ಕರ್ನಾಟಕದ ಜಿಲ್ಲೆಗಳಿಂದ ತೆರಳಲು ಅನುಕೂಲವಾಗುತ್ತದೆ
ಎನ್ನುವ ದೃಷ್ಟಿಯಿಂದ ಸರ್ಕಾರ ಈ ಸೇತುವೆಯ
ನಿರ್ಮಾಣ ಕಾರ್ಯಕ್ಕೆ ಮುಂದಾಗಿತ್ತು.

ಸೇತುವೆ ಕಾಮಗಾರಿಯು 09-01-2015ರೊಳಗೆ ಮುಗಿಸಿಕೊಡಬೇಕೆಂದು ನಿರ್ಮಾಣ ಕಾರ್ಯದ ಗುತ್ತಿಗೆ ಪಡೆದಿರುವ ಕಂಪನಿಗೆ ಸರ್ಕಾರ ತಿಳಿಸಿತ್ತು. ಆದರೆ ಗುತ್ತಿಗೆದಾರರಿಗೆ ಸರ್ಕಾರ ಮಾಡಿದ ಕಾಮಗಾರಿಗೆ ಹಣ ಬಿಡುಗಡೆ ಮಾಡದಿದ್ದರಿಂದ ಗುತ್ತಿಗೆದಾರರು ಸೇತುವೆ ನಿರ್ಮಾಣ ಕಾರ್ಯವನ್ನು
ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು. 2 ವರ್ಷ ಸಂಪೂರ್ಣವಾಗಿ ಸೇತುವೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, 2018ರಲ್ಲಿ ಸೇತುವೆ ನಿರ್ಮಾಣ ಕಾರ್ಯ ಮಾಡಿದ ಗುತ್ತಿಗೆದಾರರಿಗೆ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಸೇತುವೆ ನಿರ್ಮಾಣ ಕಾರ್ಯದ ಕಾಮಗಾರಿಯನ್ನು 31-03-2018ಕ್ಕೆ ಮುಗಿಸುವಂತೆ ಗುತ್ತಿಗೆದಾರರಿಗೆ ಸರ್ಕಾರ ತಾಕೀತು
ಮಾಡಿತ್ತು. ಆದರೂ ನಿರ್ಮಾಣ ಕಾರ್ಯ ಮಾತ್ರ ಇಂದಿಗೂ ಮುಗಿದಿಲ್ಲ. 2020ರ ಮಾರ್ಚ್‌ ಒಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಸದ್ಯ ಸೇತುವೆಯ ನಿರ್ಮಾಣಕ್ಕಾಗಿ 20 ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಮುಗಿದಿದ್ದು, ಇದರಲ್ಲಿ ಒಂದು ಪಿಲ್ಲರ್‌ನ ಫೌಂಡೇಷನ್‌ ಕಾರ್ಯ ನಡೆಯುತ್ತಿದ್ದು, ಸೇತುವೆಯ ಮೇಲೆ ಅಳವಡಿಸಲು ಬೇಕಾದ ಸ್ಲ್ಯಾಬ್‌ಗಳ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರು ತೊಡಗಿದ್ದಾರೆ. ಪಿಲ್ಲರ್‌ ಗಳ ನಿರ್ಮಾಣ ಕಾರ್ಯವು ಸಂಪೂರ್ಣವಾದ ನಂತರ ಸ್ಲ್ಯಾಬ್‌ ಅಳವಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

30ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾರಾವಿ ಸೇತುವೆಯ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿಕೊಡಲು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರಿಗೆ
ತಿಳಿಸಲಾಗಿದೆ. ಕಾಮಗಾರಿ ಮುಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು.
.ಎಂ.ಎಸ್‌.ಸೋಮಲಿಂಗಪ್ಪ,
ಶಾಸಕರು

ಹಲವು ತಾಂತ್ರಿಕ ಸಮಸ್ಯೆಗಳಿಂದ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗಿದ್ದು, 2020ರ ಮಾರ್ಚ್‌ ಒಳಗೆ ಸೇತುವೆಯ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಪ್ರಯಾಣಿಕರ ಸಂಚಾರಕ್ಕೆ
ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ.
.ಹನುಮಂತರಾವ್‌,
ಎಇಇ, ಲೋಕೋಪಯೋಗಿ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next