ಮಣಿಪಾಲ: ರಾಜ್ಯದ ಉಪಚುನಾವಣಾ ಕಣ ರಂಗೇರುತ್ತಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದೆ. ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಈ ಮಧ್ಯೆ ಜಾತಿ ಲೆಕ್ಕಾಚಾರ ಸೇರಿದಂತೆ ಮತ ಗಳಿಸಲು ನೆರವಾಗುವ ಲೆಕ್ಕಾಚಾರದಲ್ಲಿ ಪಕ್ಷಗಳು ಬ್ಯುಸಿಯಾಗಿದೆ.
ತುಮಕೂರಿನ ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ನ.3ರಂದು ಮತದಾನ ನಡೆಯಲಿದೆ. ಇತ್ತೀಚೆಗೆ ಮೃತರಾದ ಶಾಸಕ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಕಾಂಗ್ರೆಸ್ ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರಿಗೆ ಟಿಕೆಟ್ ನೀಡಿದರೆ, ಬಿಜೆಪಿಯಿಂದ ರಾಜೇಶ್ ಗೌಡ ಸ್ಪರ್ಧೆ ಮಾಡುತ್ತಿದ್ದಾರೆ.
ತುಮಕೂರು ಜಿಲ್ಲೆಯಾದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಡಿ ಬರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿಯ ಪ್ರದರ್ಶನ ಅಷ್ಟೇನು ಸಮಾಧಾನಕರವಾಗಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿ ಇದುವರೆಗೂ ತನ್ನ ಖಾತೆ ತೆರದಿಲ್ಲ.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಮತದಾನದ ವೇಳೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಘರ್ಷಣೆ
1951ರಿಂದ ಇದುವರೆಗೆ ಶಿರಾ ಕ್ಷೇತ್ರದಲ್ಲಿ ಒಟ್ಟು 16 ವಿಧಾನಸಭೆ ಚುನಾವಣೆಗಳು ನಡೆದಿದೆ. ಅದರಲ್ಲಿ 10 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾದರೆ, ತಲಾ ಮೂರು ಬಾರಿ ಜೆಡಿಎಸ್ ಮತ್ತು ಪಕ್ಷೇತರರು ಆಯ್ಕೆಯಾಗಿದ್ದಾರೆ. ಬಿ ಸತ್ಯನಾರಯಣ ಅವರೇ ಮೂರು ಬಾರಿಯೂ ಜೆಡಿಎಸ್ ನಿಂದ ಆಯ್ಕೆಯಾಗಿದ್ದರು.
ಬಿಜೆಪಿ ಕಳೆದುಕೊಂಡಿದ್ದೇ ಹೆಚ್ಚು!
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಳೆದ ಮೂರು ವಿಧಾನಸಭಾ ಚುನಾವಣೆಗಳ ಮತ ಲೆಕ್ಕಾಚಾರ ನೋಡಿದರೆ ಪ್ರತಿ ಚುನಾವಣೆಯಲ್ಲಿ ಬಿಜೆಪಿಯ ಮತ ಗಳಿಕೆ ಪ್ರಮಾಣ ಕಡಿಮೆಯಾಗುತ್ತಾ ಸಾಗಿದೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಜಯಚಂದ್ರ 45.02% ಮತ ಪಡೆದಿದ್ದರೆ, ಜೆಡಿಎಸ್ ನ ಸತ್ಯನಾರಾಯಣ 25.4% ಮತ ಗಳಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ ಕೆ ಮಂಜುನಾಥ್ 17.79% ಮತ ಪಡೆದಿದ್ದರು.
2013ರ ಚುನಾವಣೆಯಲ್ಲಿ ಜಯಚಂದ್ರ 46.47% ಮತಗಳೊಂದಿಗೆ ಮತ್ತೆ ಗೆಲುವು ಸಾಧಿಸಿದ್ದರು. ಜೆಡಿಎಸ್ ನ ಸತ್ಯನಾರಾಯಣ 37.26% ಮತ ಗಳಿಸಿದರೆ, ಬಿ.ಕೆ ಮಂಜುನಾಥ್ 11.84% ಮತಗಳಷ್ಟೇ ಪಡೆದಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಸತ್ಯನಾರಾಯಣ ಅವರು 41.24% ಮತಗಳನ್ನು ಪಡೆದು ಜಯ ಸಾಧಿಸಿದ್ದರೆ, ಟಿ ಬಿ ಜಯಚಂದ್ರ ಅವರು 35.49% ಮತ ಗಳಿಸಿದ್ದರು. ಆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್. ಆರ್ ಗೌಡ ಅವರಿಗೆ ಲಭಿಸಿದ್ದು ಕೇವಲ 9.41% ಮತಗಳು.
ಇದನ್ನು ಗಮನಿಸಿದರೆ ಪ್ರತಿ ಚುನಾವಣೆಯಲ್ಲೂ ಬಿಜೆಪಿ ಮತಗಳಿಕೆ ಪ್ರಮಾಣ ಕಡಿಮೆಯಾಗುತ್ತಾ ಸಾಗಿದೆ. 2008ರಲ್ಲಿ 17.79 %ರಷ್ಟಿದ್ದ ಮತ ಗಳಿಕೆ 2013ರಲ್ಲಿ 11.84 % ರಷ್ಟಾಗಿ, 2018ರ ಚುನಾವಣೆಯಲ್ಲಿ 9.41%ಕ್ಕೆ ತಲುಪಿದೆ.