ಬೆಂಗಳೂರು: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯರವರು ದೇಶಕಂಡ ಅಪ್ರತಿಮ ದಾರ್ಶನಿಕ ಹಾಗೂ ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿದ್ದ ತಂತ್ರಜ್ಞ ಎಂದು ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್(ಯುವಿಸಿಇ) ಪ್ರಾಂಶುಪಾಲ ಪ್ರೊ. ಕೆ.ಆರ್.ವೇಣುಗೋಪಾಲ್ ಬಣ್ಣಿಸಿದರು.
ಯುವಿಸಿಇ ನೂರು ವರ್ಷ ಪೂರೈಸಿದ ಸಂಭ್ರಮದಲ್ಲಿ ಶುಕ್ರವಾರ ಕೆ.ಆರ್.ವೃತ್ತದ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಎಂಜಿನಿಯರ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರ್.ಎಂ.ವಿರವರು ರೈತರ, ಬಡವರ ಹಾಗೂ ನಿರುದ್ಯೋಗಿಗಳ ಬಗ್ಗೆ ಕಾಳಜಿ ಹೊಂದಿದ್ದರು ಎಂಬುದನ್ನು ವಿವರಿಸಿದರು.
ಜನರ ನಾಡಿಮಿಡಿತವನ್ನು ತಿಳಿದಿದ್ದ ವಿಶ್ವೇಶ್ವರಯ್ಯ ಅವರು ಸಮಾಜಕ್ಕಾಗಿ ವಿದ್ಯಾಸಂಸ್ಥೆಗಳನ್ನು, ಕಾರ್ಖಾನೆಗಳನ್ನು, ಅಣೆಕಟ್ಟನ್ನು ನಿರ್ಮಿಸಿದ್ದರು. ಈ ರಾಜ್ಯ ಮರೆಯಲಾಗದಂತಹ ಕೊಡುಗೆ ನೀಡಿದ್ದಾರೆ. ವಿಶ್ವೇಶ್ವರಯ್ಯ ಅವರು ಶಿಸ್ತಿನ ವ್ಯಕ್ತಿಯಾಗಿದ್ದು, ತಮ್ಮ ಸಂಗಡಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಸೇವೆಯಲ್ಲಿ ನಿಷ್ಠತೆ, ಪ್ರಾಮಾಣಿಕತೆಯನ್ನು ತೋರಿದ ಶ್ರಮಜೀವಿ ಎಂದು ಬಣ್ಣಿಸಿದರು.
ಸರ್.ಎಂ.ವಿ ಹಾಗೂ ಯುಸಿಇಯ ಬಗ್ಗೆ ಕಾಲೇಜಿನಲ್ಲಿ ನಡೆದ ಪ್ರಬಂಧ ರಚನಾ ಸ್ಪರ್ಧೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಸಿದ್ದರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ರೇಖಾ ಮೊದಲ ಸ್ಥಾನ ಪಡೆದರು. ಕುಸುಮಶ್ರೀ, ಬಸವರಾಜ್ ಕೋಲಾರ್, ಪ್ರೀತಿ ಹಾಗೂ ಸಂಜಯ್ ಕ್ರಮವಾಗಿ ಮುಂದಿನ ಸ್ಥಾನ ಪಡೆದುಕೊಂಡರು. ಪ್ರಾಧ್ಯಾಪಕರಾದ ಡಾ.ಕಿರಣ್, ಡಾ.ಮಂಜುಳಾ, ಡಾ.ಚಂಪಾ, ಡಾ.ತ್ರಿವೇಣಿ, ಉದ್ಯೋಗ ಮಾಹಿತಿ ಅಧಿಕಾರಿಗಳಾದ ಡಾ.ಅರುಣಾ ಲತಾ, ಡಾ.ಪಿ.ದೀಪಾ ಶೇಣೈ ಮೊದಲಾದವರು ಉಪಸ್ಥಿತರಿದ್ದರು.