Advertisement
ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ 1908ರ ಆಗಸ್ಟ್ 27ರಂದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ ಜನಿಸಿದವರು. 1922ರಲ್ಲಿ ಶಾಲೆಯನ್ನು ತೊರೆದು ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸಕ್ಕೆ ಸೇರಿ ಸ್ಥಳೀಯ ಕೂಟಗಳಲ್ಲಿ ಕ್ರಿಕೆಟ್ ಆಡಲಾರಂಭಿಸಿದರು. ಈ ಸಮಯದಲ್ಲಿ ಬೌರಲ್ ತಂಡದ ಪರವಾಗಿ ಮಾಸ್ ವಾಲೆ ತಂಡದ ವಿರುದ್ದ ಬಾರಿಸಿದ ಅಜೇಯ 320 ರನ್ ಗಳು ಬ್ರಾಡ್ಮನ್ ರನ್ನು ಆಸ್ಟ್ರೇಲಿಯಾ ತಂಡಕ್ಕೆ ಸೇರಲು ಸಹಕಾರಿಯಾಯಿತು. 1926ರ ಆಶಸ್ ಟ್ರೋಫಿಯಲ್ಲಿ ಹೀನಾಯವಾಗಿ ಸೋತ ತಂಡ ಅದೇ ಸಮಯದಲ್ಲಿ ಅನೇಕ ಆಟಗಾರರ ನಿವೃತ್ತಿಯಿಂದ ಬಡವಾಗಿತ್ತು. ಈ ಸಮಯದಲ್ಲಿ ತಂಡ ಸೇರಿದ ಡೊನಾಲ್ಡ್ ಬ್ರಾಡ್ಮನ್ ಮುಂದೆ ವಿಶ್ವ ಕ್ರಿಕೆಟ್‌ನಲ್ಲಿ ಮಹರಾಜನಾಗಿ ಮೆರೆದದ್ದು ಈಗ ಇತಿಹಾಸ.
1930ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಐತಿಹಾಸಿಕ ಆಶಸ್ ಸರಣಿಯಲ್ಲಿ ಬ್ರಾಡ್ಮನ್ ತಮ್ಮ ಅದ್ಭುತ ಆಟ ಆಡಿ ವಿಶ್ವ ಕ್ರಿಕಟ್ ನ ಗಮನ ಸೆಳೆದಿದ್ದರು. ಈ ಸರಣಿಯಲ್ಲಿ 139.14ರ ಸರಾಸರಿಯಲ್ಲಿ ಬರೋಬ್ಬರಿ 974 ರನ್ ಬಾರಿಸಿದ್ದರು. ಇದು ಈಗಲೂ ದಾಖಲೆಯಾಗಿಯೇ ಉಳಿದಿದೆ. ಎರಡು ದ್ವಿತಕ ಶತಕ ಒಂದು ತ್ರಿತಕ ಸೇರಿದಂತೆ ಒಟ್ಟು ನಾಲ್ಕು ಶತಕಗಳು ಬ್ರಾಡ್ಮನ್ ಬ್ಯಾಟಿನಿಂದ ಹೊರಹೊಮ್ಮಿತ್ತು.
ಡಾನ್ ಬ್ರಾಡ್ಮನ್ ತಮ್ಮ ಆಸ್ಟ್ರೇಲಿಯಾ ಕ್ರಿಕೆಟ್ ಜೀವನದಲ್ಲಿ ಒಟ್ಟು 52 ಪಂದ್ಯಗಳಿಂದ 6996 ರನ್ ಗಳಿಸಿದ್ದರು. ಬರೋಬ್ಬರಿ 29 ಶತಕ, 13 ಅರ್ಧ ಶತಕ ಸಿಡಿಸಿದ್ದ ಈ ಆಸ್ಟ್ರೇಲಿಯನ್ ದಿಗ್ಗಜ ಸರ್ವಾರ್ಧಿಕ ರನ್ 334. ತಾನು ಆಡಿದ ಎಲ್ಲಾ ದೇಶಗಳ ವಿರುದ್ದ ದ್ವಿಶತಕ ಬಾರಿಸಿದ ಅಪರೂಪದ ದಾಖಲೆಯು ಕೂಡಾ ಬ್ರಾಡ್ಮನ್ ಹೆಸರಲ್ಲಿದೆ. ವಿಶ್ವ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ದ್ವಿಶತಕ ಸಿಡಿಸಿದ ದಾಖಲೆ ಇಂದಿಗೂ ಇದೇ ದಿಗ್ಗಜನ ಹೆಸರಲ್ಲಿದೆ (12). ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 234 ಪಂದ್ಯ ಆಡಿರುವ ಬ್ರಾಡ್ಮನ್ 95.14ರ ಸರಾಸರಿಯಲ್ಲಿ 28167 ರನ್ ಗಳಿಸಿದ್ದರು. ಇವರು ಗಳಿಸಿದ ಶತಕಗಳ ಸಂಖ್ಯೆ 117! ಅತೀ ಹೆಚ್ಚು ಸರಾಸರಿ
ಇಂದಿಗೂ ವಿಶ್ವ ಕ್ರಿಕಟ್‌ನ ಇತಿಹಾಸದ ಅತೀ ಹೆಚ್ಚಿನ ಸರಾಸರಿ ಬ್ರಾಡ್ಮನ್ ಹೆಸರಲ್ಲಿದೆ (99.94). ಟೆಸ್ಟ್ ಕ್ರಿಕೆಟ್ ನಲ್ಲಿ ಭರ್ತಿ100ರ ಸರಾಸರಿಯನ್ನು ಪಡೆಯಲು ಬ್ರಾಡ್ಮನ್ ಗೆ ಬೇಕಾಗಿದ್ದು ಕೇವಲ 4 ರನ್. ತನ್ನ ಕೊನೆಯ ಇನ್ನಿಂಗ್ಸ್ ಆಡುತ್ತಿದ್ದ ಡಾನ್ ಬ್ರಾಡ್ಮನ್ ಈ ಅಪೂರ್ವ ಅವಕಾಶ ಕಳೆದು ಕೊಂಡರು. ಈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಆದ ಬ್ರಾಡ್ಮನ್ ಗೆ ಎರಡನೇ ಇನ್ನಿಂಗ್ಸ್ ನಲ್ಲಿ ಮೈದಾನಕ್ಕಿಳಿಯುವ ಅವಕಾಶವೇ ಸಿಗಲಿಲ್ಲ. ಹೀಗೆ ಕ್ರಿಕೆಟ್ ಲೋಕದ ಅಪರೂಪದ ದಾಖಲೆಯೊಂದು ಮರೀಚಿಕೆಯಾಗಿಯೇ ಉಳಿಯಿತು.
1979ರಲ್ಲಿ ಕಮಾಂಡರ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವ, 1999ರಲ್ಲಿ ಆಸ್ಟ್ರೇಲಿಯಾದ ಶತಮಾನದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದರು ಈ ದಿಗ್ಗಜ ಕ್ರಿಕೆಟರ್. 2001ರ ಫೆಬ್ರವರಿ 25ರಂದು ತಮ್ಮ 92ನೇ ವಯಸ್ಸಿನಲ್ಲಿ ನಿಧನ ಹೊಂದಿದರು.
Related Articles
Advertisement