Advertisement
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ನಿರಾಣಿ ಅವರು ಗುರುವಾರ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ಮಂಡನೆ ಮಾಡಿ ಮಾತನಾಡಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿನಲ್ಲಿ 2013ರಲ್ಲಿ ವಿಶೇಷ ಹೂಡಿಕೆ ಪ್ರದೇಶ(ಎಸ್‌ಐಆರ್)ವನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗಿತ್ತು. ಅಲ್ಲಿನ ಯಶಸ್ಸು ಹಿನ್ನೆಲೆಯಲ್ಲಿ ಅದನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
Related Articles
Advertisement
ಆಡಳಿತ ಪಕ್ಷದವರು ವಿಧೇಯಕ ಉತ್ತಮವಾಗಿದೆ ಇದು ಕೈಗಾರಿಕಾಭಿವೃದ್ಧಿಗೆ ಪೂರಕವಾಗಿದೆ ಎಂದರೆ, ವಿಪಕ್ಷ ಸದಸ್ಯರು, ಇದೊಂದು ಸಂವಿಧಾನ ನಿಯಮ ಹಾಗೂ ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿದೆ, ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಕುಟುಂಬದವರ ಹೆಸರಲ್ಲಿ 5-10 ನಿವೇಶನಗಳನ್ನು ಹೊಂದಿದ್ದು, ಕೈಗಾರಿಕೆ ಮಾಡಬೇಕೆಂಬುವವರಿಗೆ ನಿವೇಶನ ಇಲ್ಲವಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಬಲಾಡ್ಯರಿಗೆ ಅವಕಾಶ ದೊರೆಯುತ್ತಿದ್ದು, ಅದೇ ಸಮುದಾಯದ ಧ್ವನಿ ಇಲ್ಲದವರಿಗೆ ಅವಕಾಶ ನೀಡಬೇಕು ಹಾಗೂ ಮಹಿಳಾ ಉದ್ಯಮಿಗಳಿಗೆ ಶೇ.75ರಷ್ಟು ಸಬ್ಸಿಡಿಯಡಿ 2 ಎಕರೆ ಜಮೀನು ನೀಡಬೇಕೆಂದು ಒತ್ತಾಯಿಸಿದರು. ವಿಧೇಯಕ ವಿರೋಧಿಸಿ ಸಭಾತ್ಯಾಗ ಮಾಡುವುದಾಗಿ ಹೇಳಿ ಕಾಂಗ್ರೆಸ್ ಸದಸ್ಯರು ಹೊರ ನಡೆದರು. ಕಾಂಗ್ರೆಸ್ ಸಭಾತ್ಯಾಗದ ನಡುವೆಯೇ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.
ಧರ್ಮಪತ್ನಿಯರಿಂದ ಸೊಂಟ ಮುರಿಸಬೇಕಾದೀತು:
ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ಮೇಲಿನ ಚರ್ಚೆಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು, ಅನೇಕ ಅಧಿಕಾರಿಗಳು, ಬಲಾಡ್ಯರು ತಮ್ಮ ಉಪ ಪತ್ನಿಯರ ಹೆಸರಿನಲ್ಲಿ ಕೈಗಾರಿಕಾ ನಿವೇಶನಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ, ಕೇವಲ ಉಪಪತ್ನಿ ಎಂದು ಯಾಕೆ ಹೇಳುತ್ತೀರಿ? ಬಿಟ್ಟು ಬಿಡಿ ಎಂದರು. ಮಾತು ಮುಂದುವರಿಸಿದ ಮರಿತಿಬ್ಬೇಗೌಡರು ಮತ್ತೆ ಪದ ಬಳಕೆ ಮಾಡಿದರು.
ಸಚಿವರು ಉತ್ತರ ನೀಡುವ ವೇಳೆ ಮಹಿಳೆಯರಿಗೆ ಶೇ.75 ಸಬ್ಸಿಡಿಯಲ್ಲಿ 2 ಎಕರೆ ಜಮೀನು ನೀಡುವುದಾಗಿ ಹೇಳುವಾಗ, ಮರಿತಿಬ್ಬೇಗೌಡರು ಉಪ ಪತ್ನಿಯರಿಗೂ ನೀಡಿ ಬಿಡಿ ಎಂದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ತೇಜಸ್ವಿನಿ ಗೌಡ, ಪದೇಪದೆ ಉಪಪತ್ನಿ ಎಂದು ಹೇಳಿಸಿದರೆ ಧರ್ಮಪತ್ನಿಯಿಂದ ಸೊಂಟ ಮುರಿಸಬೇಕಾಗುತ್ತದೆ. ಪರಿಷತ್‌ನಲ್ಲಿ ಇರುವುದೇ ಮೂವರು ಮಹಿಳಾ ಸದಸ್ಯರು. ಇಂತಹ ಮಾತುಗಳು ಹೇಳುವುದು ಸರಿಯಲ್ಲ ಎಂದಾಗ, ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಇದಕ್ಕೆ ಧ್ವನಿಗೂಡಿಸಿದರು.
ಪಂಚಾಯತ್ ರಾಜ್ ಸಂಸ್ಥೆಗಳು ಸ್ಥಳೀಯ ಸರಕಾರ ಪ್ರಾತಿನಿಧ್ಯಕ್ಕೆ ಒತ್ತಾಯ :
ಸುವರ್ಣವಿಧಾನಸೌಧ: ರಾಜ್ಯದಲ್ಲಿನ ಪಂಚಾಯತ್ ರಾಜ್ ಸಂಸ್ಥೆಗಳು ಸ್ಥಳೀಯ ಸರಕಾರಗಳಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಣೆಗೆ ಪೂರಕವಾಗಿ ಕಾನೂನು ರೂಪಿಸಬೇಕು ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ ರಾಠೊಡ ಒತ್ತಾಯಿಸಿದರು.
ಪರಿಷತ್‌ನಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸಂವಿಧಾನದ 73-74 ತಿದ್ದುಪಡಿಗಳ ಮೇಲೆ ಪಂಚಾಯತ್‌ರಾಜ್ ವ್ಯವಸ್ಥೆ ತನ್ನದೇ ಜವಾಬ್ದಾರಿ ಹೊಂದಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಹೊಂದಿದೆ. ಆದರೆ, ಪಂಚಾಯತ್ ರಾಜ್ ಕಾನೂನು ಸಮರ್ಪಕವಾಗಿ ಜಾರಿಗೊಳ್ಳದೆ, ಜಿಲ್ಲಾ ಪಂಚಾಯತ್, ತಾಲೂಕು ಹಾಗೂ ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರಕಾರಗಳಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕ್ರಮ ಕೈಗೊಳ್ಳುವುದು ಅವಶ್ಯ ಎಂದರು.
ಸಭಾನಾಯಕ ಶ್ರೀನಿವಾಸ ಪೂಜಾರಿ ಮಾತನಾಡಿ, ಸದಸ್ಯರ ಆಶಯ ಸರಕಾರದ ಆಶಯವೂ ಆಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.