Advertisement

ಪಾಲಿಕೆಯಿಂದ ಸಿಂಗಲ್‌ ವಿಂಡೋ ಸಿಸ್ಟಮ್‌

05:07 AM Jan 28, 2019 | Team Udayavani |

ಕಾವೂರು : ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕಾವೂರಿನಲ್ಲಿ ವ್ಯವಸ್ಥಿತ ಮಾರುಕಟ್ಟೆ ಬೇಕೆಂಬ ಜನರ ಬಹುದಿನದ ಬೇಡಿಕೆ ಜ. 29ರಂದು ಈಡೇರಲಿದೆ.

Advertisement

ಕಾವೂರಿನ ಪೊಲೀಸ್‌ ಠಾಣೆ ಸಮೀಪ 4.60 ಕೋಟಿ ರೂ. ವೆಚ್ಚದ ಈ ಬೃಹತ್‌ ಕಟ್ಟಡ ಕೇವಲ ಮಾರುಕಟ್ಟೆಗೆ ಸೀಮಿತವಾಗದೆ ಸಾರ್ವಜನಿಕರ ನಿತ್ಯದ ಕೆಲಸ ಕಾರ್ಯಗಳಿಗೆ ಸದ್ಬಳಕೆಯಾಗಲಿದೆ. ಮಹಾನಗರ ಪಾಲಿಕೆಯಿಂದ ಸಿಂಗಲ್‌ ವಿಂಡೋ ಸಿಸ್ಟಮ್‌ ಇಲ್ಲಿ ಜಾರಿಯಾಗಲಿದೆ. ನಾಡ ಕಚೇರಿ, ಮಂಗಳೂರು ಒನ್‌, ನೆಮ್ಮದಿ ಕೇಂದ್ರ ಮತ್ತಿತರ ವ್ಯವಸ್ಥೆಗಳು ಈ ಕಟ್ಟಡದಲ್ಲಿ ನೆಲೆಯಾಗಲಿದ್ದು, ಒಂದೇ ಕಡೆ ಸೇವೆಗಳು ಸಿಗಲಿವೆ. ಈ ಮಾರುಕಟ್ಟೆಯ ಇನ್ನೊಂದು ವಿಶೇಷ ಅಂದರೆ ಮಡಿಕೆ ಸಹಿತ ಮಣ್ಣಿನಿಂದ ಮಾಡಿದ ಪಾತ್ರೆಗಳು, ವಸ್ತುಗಳು ಸಿಗುವ ಅಂಗಡಿ, ಮೀನು ಮಾರುಕಟ್ಟೆ , ತರಕಾರಿ ಮತ್ತಿತರ ಸೌಲಭ್ಯದ ಜತೆಗೆ ಬೇರೆ ಮಳಿಗೆಗಳು ಇರಲಿವೆ.

ಸುಸಜ್ಜಿತ ಮಳಿಗೆ
ತಳ ಅಂತಸ್ತಿನ ಸಹಿತ ನಾಲ್ಕು ಮಹಡಿಗಳ ಬೃಹತ್‌ ವಾಣಿಜ್ಯ ಸಂಕೀರ್ಣ ಇದಾಗಿದ್ದು, ತರಕಾರಿ ವ್ಯಾಪಾರಿಗಳಿಗೆ ತಳ ಅಂತಸ್ತಿನಲ್ಲಿ ವ್ಯವಸ್ಥೆ ಮಾಡಲಾಗಿದೆ.

ನೆಲ ಅಂತಸ್ತಿನಲ್ಲಿ ಮೀನು, ಮೊಟ್ಟೆ, ಚಿಕನ್‌ ಮತ್ತಿತರ ಮಾರಾಟ ಮಳಿಗೆಗಳಿರುತ್ತವೆ. ಇದರಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇರಲಿದ್ದು, ಸುಮಾರು 16 ಕಾರು, ಕನಿಷ್ಠ ನೂರು ದ್ವಿಚಕ್ರ ಪಾರ್ಕ್‌ ಮಾಡ ಬಹುದಾಗಿದೆ. 130 ಚದರ ಅಡಿಯಿಂದ 200 ಚದರ ಅಡಿಗಳ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಜನರ ಗಮನ ಸೆಳೆಯಲಿದೆ
ಮಾರುಕಟ್ಟೆ ನಿರ್ಮಾಣ ಮಾಡುವುದು ನನ್ನ ಯೋಜನೆಗಳಲ್ಲಿ ಪ್ರಮುಖವಾಗಿತ್ತು. ಇದಕ್ಕಾಗಿ ನಾನು ನಗರಯೋಜನೆ ಸ್ಥಾಯೀ ಸಮಿತಿ ಅಧ್ಯಕ್ಷನಾಗಿದ್ದಾಗ ಸತತ ಪ್ರಯತ್ನ ಪಟ್ಟು ಹಣ ಕಾದಿರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಇದಕ್ಕೆ ವಿವಿಧ ಮೂಲದಿಂದ ಹಣ ಕ್ರೋಡಿಕರಿಸಲಾಗಿದೆ. ವಿಶೇಷ ಮಾರುಕಟ್ಟೆಯಾಗಿ ಇದು ಜನರ ಗಮನ ಸೆಳೆಯಲಿದೆ. ಮಾಜಿ ಮೇಯರ್‌ ಹರಿನಾಥ್‌ ಅವರ ಅಧಿಕಾರ ಅವಧಿಯಲ್ಲಿ ಈ ಮಾರುಕಟ್ಟೆಯ ಯೋಜನೆ ಸಿದ್ಧಪಡಿಸಿ, ಅನುಷ್ಠಾನಕ್ಕೆ ಶ್ರಮಿಸಿದ್ದರು ಎಂದು ಸ್ಥಳೀಯ ಕಾರ್ಪೊರೇಟರ್‌ ದೀಪಕ್‌ ಪೂಜಾರಿ ತಿಳಿಸಿದ್ದಾರೆ.

Advertisement

ಶೂನ್ಯ ತ್ಯಾಜ್ಯ ವಿಲೇವಾರಿ
ಈ ಮಾರುಕಟ್ಟೆ ಕಟ್ಟಡದಲ್ಲಿ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸಲು ನೆರವಾಗುವ ತ್ಯಾಜ್ಯ ಸಂಸ್ಕರಣ ಘಟಕ(ಎಸ್‌ಟಿಪಿ) ಅಳವಡಿಕೆಯಾಗಿದೆ. ತರಕಾರಿ, ಮಾಂಸಹಾರಿ ತ್ಯಾಜ್ಯಗಳು ಸಣ್ಣ ತುಂಡುಗಳಾಗಿ ಪರಿವರ್ತಿಸುವ ವ್ಯವಸ್ಥೆಯಿದ್ದು,ಶೂನ್ಯ ತ್ಯಾಜ್ಯ ವಿಲೇವಾರಿ ಮಾರುಕಟ್ಟೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಒಂದು ಸಾವಿರ ಲೀಟರ್‌ನ ಸಾಮರ್ಥ್ಯ ಎಸ್‌ಟಪಿ ಇದಾಗಿದ್ದು ಇದರ ನೀರನ್ನು ಹೂ ಗಿಡಗಳಿಗೆ ಬಳಸಬಹುದಾಗಿದೆ.

ಒಂದೇ ಸೂರಿನಡಿ ಪಾಲಿಕೆ ಸೌಲಭ್ಯ
ಕಾವೂರು ಮಾರುಕಟ್ಟೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ. ಪಾಲಿಕೆಯ ಬಹುತೇಕ ಕೆಲಸಗಳು ಆಗುವಂತೆ ಈ ಮಾರುಕಟ್ಟೆ ಸಂಕೀರ್ಣದಲ್ಲಿ ಕಚೇರಿ ಆರಂಭಿಸುವ ನಿರ್ಧಾರ ಮಾಡಲಾಗಿದೆ. ಜನತೆಗೆ ಉಪಯೋಗವಾದರೆ ಪಾಲಿಕೆಯ ಕೆಲಸ ಸಾರ್ಥಕವಾದಂತೆ.
 ಭಾಸ್ಕರ ಕೆ.,ಮೇಯರ್‌ ಮನಪಾ

Advertisement

Udayavani is now on Telegram. Click here to join our channel and stay updated with the latest news.

Next