ಹಿಂದೆ ನಮ್ಮದೇ ಮೈಸೂರಿನ ಮೃಗಾಲಯದಲ್ಲಿದ್ದ ಚಿಂಪಾಂಜಿ ಸಂಗಾತಿ ಇಲ್ಲದೆ ಸೊರಗಿ ಹೋಗಿತ್ತು. ಅದಕ್ಕೆ ‘ಒಂದು ಹೆಣ್ ಕೊಡ್ರಪ್ಪಾ’ ಎಂದು ಝೂ ಅಧಿಕಾರಿಗಳು ಹತ್ತಾರು ದೇಶಗಳನ್ನು ತಡಕಾಡಿದ್ದರು. ಅದೇ ರೀತಿ ಈಗ ಕೀನ್ಯಾದಲ್ಲಿರುವ, ಜಗತ್ತಿನ ಕಟ್ಟಕಡೆಯ ‘ಉತ್ತರದ ಬಿಳಿ ಖಡ್ಗಮೃಗ’ (ನಾರ್ತರ್ನ್ ವೈಟ್ ರೈನೋ) ಸಂಗಾತಿಗಾಗಿ ಪರಿತಪಿಸುತ್ತಿದೆ. ಇಷ್ಟು ವರ್ಷ ಒಬ್ಬನೇ ಇದ್ದು ಲೈಫು ಬೋರಾಗಿದೆ. ಹೀಗಾಗಿ ತನಗೊಬ್ಬ ಜತೆಗಾರ್ತಿ ಬೇಕೆಂದು ಈ ರೈನೋ ಜಾಹೀರಾತು ನೀಡಿದೆ! ಅಲ್ಲದೆ ಈ ಜಾಹೀರಾತು ಪ್ರಕಟವಾಗಿರುವುದು ಜಗತ್ತಿನ ಪೋಲಿ ರಸಿಕರ ಡೇಟಿಂಟ್ ಸೈಟ್ ಮತ್ತು ಆ್ಯಪ್, ಟಿಂಡರ್‌ನಲ್ಲಿ!
Advertisement
ಪಂಚಿಂಗ್ ಪ್ರೊಫೈಲ್: ಸುಡಾನ್ ಎಂಬ 43 ವರ್ಷದ ಈ ಖಡ್ಗಮೃಗದ ಪ್ರೊಫೈಲ್ ತುಂಬಾ ಪಂಚಿಂಗ್ ಆಗಿದೆ. ‘ನನಗೆ 43 ವರ್ಷವಾಗಿದೆ. ಜೀವನವನ್ನು ಆಳವಾಗಿ ಅನುಭವಿಸಿದ್ದೇನೆ. ಈಗೇನೂ ಆಸೆ ಉಳಿದಿಲ್ಲ. ಆದರೆ ಏನು ಮಾಡೋದು, ನನ್ನ ಜಾತಿ ಅಥವಾ ಸಂತತಿಯನ್ನು ರಕ್ಷಿಸುವ ಹೊಣೆ ಅಕ್ಷರಶಃ ನನ್ನ ಮೇಲಿದೆ. ಒತ್ತಡದ ಸನ್ನಿವೇಶಗಳಲ್ಲೂ ಅದ್ಭುತ ಪ್ರದರ್ಶನ ನೀಡಬಲ್ಲೆ,’ ಎಂಬ ಪರಿಚಯ ಕೂಡ ಇದೆ. ಈ ಜಾಹೀರಾತನ್ನು ಒಟ್ಟು 190 ರಾಷ್ಟ್ರಗಳ 40 ಭಾಷೆಗಳಲ್ಲಿ ಪ್ರಕಟಿಸಿರುವುದು ವಿಶೇಷ. ಟಿಂಡರ್‌ನಲ್ಲಿ ‘ದಿ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಇನ್ ದ ವರ್ಲ್ಡ್’ ಎಂಬ ಶಿರೋನಾಮೆಯಲ್ಲಿ ಸುಡಾನ್‌ನ ಪ್ರೊಫೈಲ್ ಅಪ್‌ಲೋಡ್ ಮಾಡಿರುವುದು ಕೀನ್ಯಾದ ವನ್ಯಜೀವಿ ಸಂರಕ್ಷಣೆ ವಿಭಾಗ. ಖಡ್ಗಮೃಗದ ಸಂತತಿ ಉಳಿಸುವ ಹಠ ತೊಟ್ಟಿರುವ ಅಧಿಕಾರಿಗಳು, ಸುಡಾನ್‌ಗೆ ಅದೃಷ್ಟವಿದ್ದರೆ ಇಲ್ಲಾದರೂ ಸಂಗಾತಿ ಸಿಗಲಿ ಎಂದಿದ್ದಾರೆ.