Advertisement
ಲಾಭಗಳೇನು?ಇಲ್ಲಿ ಪದೇಪದೇ ವಿಮೆ ಕಟ್ಟಬೇಕಾದ ತಾಪತ್ರಯಗಳಿಲ್ಲ. ಒಮ್ಮೆ ಕಟ್ಟಿದರೆ ಮುಗಿಯಿತು. ಇದರಿಂದ ಬರುವ ಲಾಭಗಳು ಮಾಮೂಲಿ ಆಜೀವ ವಿಮೆಗೆ ಅನುಗುಣವಾಗಿಯೇ ಇರುತ್ತವೆ. ವಿಶೇಷವೆಂದರೆ ಐದು ವರ್ಷ ಮುಗಿದಾಗ ಈ ವಿಮಾ ಮೊತ್ತವನ್ನು ಹಿಂತೆಗೆದುಕೊಳ್ಳಲು ಅವಕಾಶವಿದೆ. ವಿಮೆಯ ಅವಧಿ ಪೂರ್ಣವಾಗುವವರೆಗೆ ಕಾಯುವ ಅಗತ್ಯವಿಲ್ಲ.
ಒಂದು ಬಾರಿಯ ಕಂತಿನ ಈ ವಿಮೆಗಳೂ, ಮಾಮೂಲಿ ಆಜೀವ ವಿಮೆಗಳಿಗಿಂತ ಭಿನ್ನವಾಗುವುದು ತೆರಿಗೆಯ ವಿಚಾರದಲ್ಲಿ. ಒಂದು ಬಾರಿ ಕಂತಿನ ವಿಮೆಗಳಿಗೆ ಕೊಳ್ಳುವಾಗ ಮಾಡುವಾಗ ವಿಧಿ 80ಸಿ ಅಡಿ, ಹಿಂತೆಗೆಯುವಾಗ ವಿಧಿ 10ಡಿ ಅಡಿ ತೆರಿಗೆ ವಿನಾಯ್ತಿಗಳಿವೆ. ಇಲ್ಲಿ ಸ್ವಲ್ಪ ಎಡವಿದರೂ ತೆರಿಗೆ ಪಾವತಿಸಬೇಕಾಗುತ್ತದೆ. ಆದ್ದರಿಂದ ತಜ್ಞರನ್ನು ಕೇಳಿಯೇ ಮುಂದುವರಿಯಬೇಕು. ನಿಯಮಗಳು ಏನು ಹೇಳುತ್ತವೆ?
ವಿಧಿ 10ಡಿ ಅನ್ವಯಿಸುವುದು ವಿಮಾ ಅವಧಿ ಮುಕ್ತಾಯವಾದಾಗ. ಇದರ ಪ್ರಕಾರ, ಅವಧಿ ಪೂರ್ಣವಾದಾಗ ನೀವು ಪಡೆಯುವ ಮೊತ್ತ, ನೀವು ಹೂಡಿದ ಹಣಕ್ಕಿಂತ ಕನಿಷ್ಠ 10 ಪಟ್ಟು ಜಾಸ್ತಿ ಇರಬೇಕು. ಆಗ ಮಾತ್ರ ತೆರಿಗೆ ವಿನಾಯ್ತಿ ಸಾಧ್ಯ. ಉದಾಹರಣೆಗೆ ನೀವು 10,000 ರೂ. ಕಂತು ಕಟ್ಟಿದ್ದರೆ, ಮುಗಿಯುವಾಗ ನಿಮಗೆ ಕನಿಷ್ಠ 1 ಲಕ್ಷ ರೂ. ಬರಬೇಕು. ಒಂದು ವೇಳೆ 10 ಪಟ್ಟಿಗಿಂತ ಕಡಿಮೆಯಿದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ!
Related Articles
10ಡಿಯಡಿ ಒಂದು ವಿನಾಯ್ತಿಯಿದೆ. ಒಂದು ವೇಳೆ ಅವಧಿಗೆ ಮುನ್ನ ವಿಮಾದಾರ ವ್ಯಕ್ತಿ ತೀರಿಕೊಂಡರೆ, ಆತನಿಗೆ ಕೊಡುವ ಮೊತ್ತ 10 ಪಟ್ಟಿಗಿಂತ ಕಡಿಮೆಯಿದ್ದರೂ, ಜಾಸ್ತಿಯಿದ್ದರೂ ಆಗ ತೆರಿಗೆ ಲೆಕ್ಕಾಚಾರ ಮಾಡುವುದಿಲ್ಲ. ಬದಲಿಗೆ ವಿಮಾಸಂಸ್ಥೆ ಶೇ.1ರಷ್ಟು ಟಿಡಿಎಸ್ ಮಾತ್ರ ಕತ್ತರಿಸಿಕೊಳ್ಳುತ್ತದೆ. ಇಲ್ಲಿ 1961ರ ಆದಾಯ ತೆರಿಗೆ ಕಾಯ್ದೆಯ 194ಡಿಎ ವಿಧಿ ಅನ್ವಯವಾಗುತ್ತದೆ.
Advertisement
ಅವಧಿಗೆ ಮುನ್ನ ತೆಗೆಯಬಾರದುಒಂದೇ ಬಾರಿಗೆ ಕಂತು ಪಾವತಿಸಿ ಪಡೆಯುವ ಆಜೀವ ವಿಮೆಯನ್ನು ಕನಿಷ್ಠ 2 ವರ್ಷದ ವರೆಗೆ ತೆಗೆಯಬಾರದು. ಹಾಗೇನಾದರು ತೆಗೆದರೆ, ಅವರಿಗೆ ಸಿಕ್ಕ ತೆರಿಗೆ ವಿನಾಯ್ತಿಯನ್ನು ಆದಾಯ ಎಂದು ಪರಿಗಣಿಸಲಾಗುತ್ತದೆ. 80ಸಿ ನಿಯಮ ಏನು ಹೇಳುತ್ತದೆ?
80ಸಿ ವಿಧಿ ವಿಮೆಯನ್ನು ಕೊಳ್ಳುವಾಗ ಅನ್ವಯವಾಗುತ್ತದೆ. ಇಲ್ಲಿ ಒಂದಷ್ಟು ತೆರಿಗೆ ವಿನಾಯ್ತಿಗಳಿವೆ. ಆದರೆ ಇದನ್ನು ಅತ್ಯಂತ ಗಮನವಿಟ್ಟು ಅರ್ಥ ಮಾಡಿಕೊಳ್ಳಬೇಕು. ಅರ್ಥವಾಗಲಿಲ್ಲವೆಂದರೆ ತಜ್ಞರ ಸಹಾಯ ಪಡೆದುಕೊಳ್ಳಬೇಕಾಗುತ್ತದೆ. ಮೊದಲೇ ಹೇಳಿದಂತೆ ನಾವು ಕಟ್ಟುವ ಕಂತಿಗಿಂತ ಕನಿಷ್ಠ ಹತ್ತು ಪಟ್ಟು ಹಣ ಮುಕ್ತಾಯದ ಹೊತ್ತಿಗೆ ಬರಬೇಕು ಅಥವಾ ವಿಮೆಯ ನಿಯಮಗಳ ಪ್ರಕಾರವೇ ಹೇಳುವುದಾದರೆ, ಅಂತಿಮವಾಗಿ ನಮಗೆ ಬರುವ ಮೊತ್ತದ ಶೇ.10ಕ್ಕಿಂತ ಜಾಸ್ತಿ, ಕಂತಿನ ಪ್ರಮಾಣ ಇರಬಾರದು. ಕಂತು ಶೇ.10ಕ್ಕಿಂತ ಹೆಚ್ಚಿದ್ದರೆ, ಬರುವ ಮೊತ್ತದ ಶೇ.10ರಷ್ಟು ಹಣಕ್ಕೆ ಮಾತ್ರ ತೆರಿಗೆ ವಿನಾಯ್ತಿ ಸಿಗುತ್ತದೆ. ಹೆಚ್ಚುವರಿ ಕಂತಿನ ಮೊತ್ತಕ್ಕೆ ಮೊತ್ತಕ್ಕೆ ತೆರಿಗೆ ಹಾಕಲಾಗುತ್ತದೆ. ಉದಾಹರಣೆ ಸಹಿತ ಅರ್ಥ ಮಾಡಿಕೊಳ್ಳುವುದಾದರೆ…
80ಸಿ ವಿಧಿಯನ್ನು ಉದಾಹರಣೆ ಸಹಿತ ಅರ್ಥ ಮಾಡಿಕೊಳ್ಳೋಣ. ಒಬ್ಬ ವ್ಯಕ್ತಿ 2 ಲಕ್ಷ ರೂ. ಕಂತು ಪಾವತಿಸಿ, 20 ಲಕ್ಷ ರೂ.ನ ವಿಮೆ (ಹತ್ತುಪಟ್ಟು ಹಣ) ಪಡೆಯುತ್ತಾನೆಂದು ಇಟ್ಟುಕೊ ಳ್ಳೋಣ. ಅಂದರೆ ಕಂತಿನ ಪ್ರಮಾಣ ಶೇ.10ರಷ್ಟಿರುತ್ತದೆ. ಈಗ 1.5 ಲಕ್ಷ ರೂ.ವರೆಗಿನ ಕಂತಿಗೆ ತೆರಿಗೆ ಇರುವುದಿಲ್ಲ (ನಿಯಮಗಳ ಪ್ರಕಾರ ಗರಿಷ್ಠ 1.5 ಲಕ್ಷ ರೂ.ವರೆಗೆ ಮಾತ್ರ ವಿನಾಯ್ತಿ ಸಾಧ್ಯ). ಬಾಕಿ 50,000 ರೂ.ಗೆ ತೆರಿಗೆಯಿರುತ್ತದೆ. ಅದೇ ವ್ಯಕ್ತಿ 2 ಲಕ್ಷ ರೂ. ಕಂತು ಪಾವತಿಸಿ, 2.50 ಲಕ್ಷ ರೂ. ಮೊತ್ತದ ವಿಮೆ ಪಡೆಯುತ್ತಾನೆ ಎಂದುಕೊಳ್ಳೋಣ. ಇಲ್ಲಿ ಕಂತಿನ ಪ್ರಮಾಣ, ಮುಕ್ತಾಯದ ವೇಳೆ ಸಿಗುವ ಮೊತ್ತದ ಶೇ.10ಕ್ಕಿಂತ ಜಾಸ್ತಿ. ಈಗ ತೆರಿಗೆ ವಿನಾಯ್ತಿ ಸಿಗುವುದು ಈ ಶೇ.10ರಷ್ಟು ಮೊತ್ತಕ್ಕೆ ಅಥವಾ 25,000 ರೂ. ಗೆ. ಉಳಿದ ಕಂತಿನ ಮೊತ್ತಕ್ಕೆ ತೆರಿಗೆ ಕಡ್ಡಾಯ. ಈ ತೆರಿಗೆಯ ಹಿಂದಿನ ಜಾಣ್ಮೆಯೇನು?
1 ಸರ್ಕಾರ ಬಹುತೇಕ ಆದಾಯವನ್ನು ತೆರಿಗೆಗೆ ಒಳಪಡಿಸುತ್ತದೆ. ವಿನಾಯ್ತಿ ನೀಡುವಾಗ ಹಲವು ಬುದ್ಧಿವಂತಿಕೆ ತೋರುತ್ತದೆ.
2 ವಿಮೆಯಲ್ಲಿ ಕನಿಷ್ಠ 1.25 ಪಟ್ಟು ಹಣ ಮತ್ತು ಗರಿಷ್ಠ 10 ಪಟ್ಟು ಹಣ ವಾಪಸ್ ಬರುವ ಯೋಜನೆಗಳಿರುತ್ತವೆ. ಸಾಮಾನ್ಯವಾಗಿ ಕಂಪನಿಗಳು ಕನಿಷ್ಠ ಹಣದ ಆಯ್ಕೆ ನೀಡುತ್ತವೆ!
3 ಹತ್ತು ಪಟ್ಟು ಮೊತ್ತವಿದ್ದರೆ ಮಾತ್ರ ತೆರಿಗೆ ವಿನಾಯ್ತಿ ಎನ್ನುವ ನಿಯಮದಿಂದ, ಬಹುತೇಕರು ತೆರಿಗೆ ಕಟ್ಟಲೇ ಬೇಕಾಗುತ್ತದೆ. ಏಕೆಂದರೆ ಆ ಮೊತ್ತ ನೀಡುವ ಕಂಪನಿಗಳು ಕಡಿಮೆ!