Advertisement

ವಾರ್ಡ್‌ ಮಟ್ಟದಲ್ಲೇ ಒಂಟಿ ಮನೆಗೆ ಅನುಮೋದನೆ

12:52 AM Aug 16, 2019 | Lakshmi GovindaRaj |

ಬೆಂಗಳೂರು: ಒಂಟಿ ಮನೆ ಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಬಿಬಿಎಂಪಿ ಮುಂದಾಗಿದ್ದು, ವಾರ್ಡ್‌ ಮಟ್ಟದಲ್ಲೇ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲು ಸುತ್ತೋಲೆ ಹೊರಡಿಸಿದೆ. ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಆರ್ಥಿಕವಾಗಿ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರರಿಗೆ ಬಿಬಿಎಂಪಿ “ಒಂಟಿ ಮನೆ ಯೋಜನೆ’ಯಡಿ ಮನೆ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿದೆ.

Advertisement

ಯೋಜನೆ ಅನುಷ್ಠಾನಕ್ಕೆ ಉದ್ದೇಶ ಪೂರ್ವಕವಾಗಿ ಕೆಲವು ಅಧಿಕಾರಿಗಳು ತಡಮಾಡುತ್ತಿದ್ದು, ಯೋಜನೆಯನ್ನು ಸರಳೀಕರಿಸಬೇಕು ಎಂದು ಜುಲೈನಲ್ಲಿ ನಡೆದ ಪಾಲಿಕೆಯ ಸಭೆಯಲ್ಲಿ ಸರ್ವಪಕ್ಷದ ಸದಸ್ಯರು ಒತ್ತಾಯಿಸಿದ್ದರು. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಆಯುಕ್ತರು ವಾರ್ಡ್‌ ಸಮಿತಿ ಮತ್ತು ಸಹಾಯಕ ಎಂಜಿನಿಯರ್‌ ಮಟ್ಟದಲ್ಲೇ ಕಡತಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದ್ದಾರೆ.

ಒಂಟಿ ಮನೆಯೋಜನೆಯ ಫ‌ಲಾನುಭವಿಗಳು ಅರ್ಜಿಗಳನ್ನು ನೇರವಾಗಿ ವಾರ್ಡ್‌ ಎಂಜಿನಿಯರ್‌ ಅಥವಾ ಸಹಾಯಕ ಎಂಜಿನಿಯರ್‌ ಹಂತದಲ್ಲೇ ಸಲ್ಲಿವುದು. ನಂತರ, ಸಹಾಯಕ ಎಂಜಿನಿಯರ್‌ ಸ್ಥಳ ಪರಿಶೀಲನೆ ಮಾಡಿ ಅದನ್ನು ಸಮಿತಿ ಅನುಮೋದನೆಗೆ ಸಲ್ಲಿಸುವುದು. ಈ ಹಂತದಲ್ಲಿ ವಾರ್ಡ್‌ ಸಮಿತಿಯು ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಯೋಜನೆಗೆ ಮೀಸಲಿಟ್ಟಿರುವ ಅನುದಾನದಲ್ಲೇ ಒಂಟಿ ಮನೆ ಯೋಜನೆಗೂ ಬಳಸಿಕೊಳ್ಳುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ವಾರ್ಡ್‌ ಸಮಿತಿಯಲ್ಲಿ ಅರ್ಜಿಗಳಿಗೆ ಅನುಮೋದನೆ ನೀಡಿದ ಮೇಲೆ ಸಹಾಯಕ ಎಂಜಿನಿಯರ್‌ ಫ‌ಲಾನುಭವಿಗಳಿಗೆ ಹಣಕಾಸು ಬಿಡುಗಡೆಯ ಬಗ್ಗೆ ಮತ್ತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಲಾಗಿದೆ.

ಹಣ ಬಿಡುಗಡೆ ಪ್ರಕ್ರಿಯೆ ಸರಳ: ಕಾರ್ಯಾದೇಶ ನೀಡಿದ ನಂತರ, ಅನುದಾನವನ್ನು ಫ‌ಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲು ಕಡತವನ್ನು ನೇರವಾಗಿ ಹಣಕಾಸು ನಿಯಂತ್ರಕರಿಗೆ ರಾವಾನಿಸುವುದು ಮತ್ತು ಒಂಟಿ ಮನೆ ಯೋಜನೆಯಡಿ ನಿಗದಿತ ಸಮಯದಲ್ಲಿ ಪೂರ್ಣವಾಗುವಂತೆ ಮತ್ತು ಸಕಾಲದಲ್ಲಿ ಅನುದಾನ ಬಿಡುಗಡೆಯಾಗುವಂತೆ ಕ್ರಮವಹಿಸಲು ಸೂಚಿಸಲಾಗಿದೆ.

Advertisement

ಈ ಹಿಂದೆ ಅಧಿಕಾರಿಗಳು ಒಂಟಿ ಮನೆಯೋಜನೆಯ ಕಡತವನ್ನು ಮೇಲಿನ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ,ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಎಂದು ನೆಪ ಹೇಳುತ್ತಿದ್ದರು. ಹೀಗಾಗಿ, ಸಹಾಯಕ ಎಂಜಿನಿಯರ್‌ ಹಂತದಲ್ಲೇ ಇದನ್ನು ಬಗೆಹರಿಸುವಂತೆ ಸೂಚಿಸಲಾಗಿದೆ. ಒಂಟಿ ಮನೆ ಯೋಜನೆಯ ಕಡತಗಳನ್ನು ಕೇಂದ್ರ ಕಚೇರಿಗೆ ತರುವ ಅವಶ್ಯಕತೆ ಇಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಏನಿದು ಒಂಟಿ ಮನೆ ಯೋಜನೆ?: ಬಿಬಿಎಂಪಿ 2019 -ನೇ ಸಾಲಿನಲ್ಲಿ ಪ್ರತಿ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 10 ಮನೆ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ 5 ಮನೆಯನ್ನು ಒಂಟಿ ಮನೆ ಯೋಜನೆಯಲ್ಲಿ ನಿಗದಿ ಮಾಡಿತ್ತು. ಈ ಯೋಜನೆಯ ಅನ್ವಯ 4.50 ಲಕ್ಷ ಮನೆ ನಿರ್ಮಾಣಕ್ಕೆ ಮತ್ತು 50 ಸಾವಿರ ರೂ. ಸೋಲಾರ್‌ ಅಳವಡಿಸಿಕೊಳ್ಳುವುದಕ್ಕೆ ಎಂದು ಬಿಬಿಎಂಪಿ ನಿಗದಿ ಮಾಡಿತ್ತು. ಈ ಹಿಂದೆ ಕಮಿಟಿಯಲ್ಲಿ ವಾರ್ಡ್‌ಗಳ ಅಗತ್ಯಕ್ಕೆ ತಕ್ಕಂತೆ ಒಂಟಿ ಮನೆ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಈ ವರ್ಷದಿಂದ ಪ್ರತಿ ವಾರ್ಡ್‌ಗೆ 15 ಮನೆಗಳ ನಿರ್ಮಾಣಕ್ಕೆ ಸೀಮಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next