Advertisement
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಒಂದು ದೇಶ ಒಂದು ಚುನಾವಣೆ ಕುರಿತು ಸಲ್ಲಿಸಿದ ವರದಿಯನ್ನು ಕೇಂದ್ರ ಸರಕಾರ ಅನುಮೋದಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಪ್ರತೀ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಏಕಕಾಲದಲ್ಲಿ ಚುನಾವಣೆ ನಡೆಯಬೇಕು ಎಂದರೆ ಈ ಐದು ವರ್ಷ ಕೂಡ ಸರಕಾರ ಸುಭದ್ರವಾಗಿ ಇರಬೇಕು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ 1951ರ ಡಿಸೆಂಬರ್ ಮತ್ತು 1952 ಫೆಬ್ರವರಿಯ ನಡುವೆ ಲೋಕಸಭೆ ಚುನಾವಣೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆ ಒಂದಾಗಿ ನಡೆದಿತ್ತು. 1957, 1962 ಹಾಗೂ 1967ರಲ್ಲೂ ಏಕಕಾಲದಲ್ಲಿ ಚುನಾವಣೆ ನಡೆದಿತ್ತು. 1968-69ರ ನಂತರದ ವರ್ಷಗಳಲ್ಲಿ ಇದು ಅಸಾಧ್ಯವಾಯಿತು. ಅಂದರೆ ಅಲ್ಲಿಯವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್‌ಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಯಾವ ತಕರಾರು ಇರಲಿಲ್ಲ.
Related Articles
ಇದು ಪ್ರಾಯೋಗಿಕವಲ್ಲ, ಒಕ್ಕೂಟ ವ್ಯವಸ್ಥೆಗೆ ವಿರೋಧ, ಸರಕಾರಗಳನ್ನು ಬೀಳಿಸುವ ತಂತ್ರ, ಹೀಗೆ ವಿಪಕ್ಷಗಳ ವಾಗ್ಧಾಳಿ ಮುಂದುವರಿದಿದೆ. ಆದರೆ ಇದೇ ಕಾಂಗ್ರೆಸ್ ಸೇರಿದಂತೆ ಎಲ್ಲ ವಿಪಕ್ಷಗಳು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವುದು ಪ್ರಾಯೋಗಿಕವಲ್ಲ ಎಂದು ಭಾವಿಸಿ ಏನೂ ಮಾಡದೆ ಸುಮ್ಮನಾಗಿದ್ದವು. ಅದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿ ತೋರಿಸಿದ್ದು, ಈಗ ಜಮ್ಮು- ಕಾಶ್ಮೀರ ಭಾರತದಲ್ಲಿ ಒಂದಾಗಿದೆ. ಯಾವುದೇ ಗಲಭೆ, ಹಿಂಸಾಚಾರವಿಲ್ಲದೆ ಕಾಶ್ಮೀರ ಕಣಿವೆ ಪ್ರಗತಿಯತ್ತ ಹೆಜ್ಜೆ ಇರಿಸಿದೆ. ಇದು ಬದಲಾವಣೆಯನ್ನು ತರುವ ಕ್ರಾಂತಿಕಾರಕ ವಿಧಾನ.
Advertisement
ಇದೇ ರೀತಿ ಏಕ ಕಾಲಕ್ಕೆ ಚುನಾವಣೆ ನಡೆಸಲಾಗದು ಎನ್ನುವ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ಹಳೆ ಗೊಡ್ಡು ಸಂಪ್ರದಾಯಕ್ಕೆ ಜೋತು ಬಿದ್ದಿದ್ದಾರೆ. ಸುಧಾರಣೆ ಎಂದ ಮೇಲೆ ಅಲ್ಲಿ ಸವಾಲುಗಳು, ಕಷ್ಟಗಳು ಇದ್ದೇ ಇರುತ್ತದೆ ಎಂಬ ಅರಿವು ಅಗತ್ಯ.
ಆಂಧ್ರ ಪ್ರದೇಶದಲ್ಲಿ 2024ರ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ನಡೆಯಿತು. ಆಗ ಯಾವುದೇ ಸಮಸ್ಯೆ ಉಂಟಾಗಲಿಲ್ಲ. 2019ರಲ್ಲಿ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮೊದಲಾದ ರಾಜ್ಯಗಳಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಒಂದೇ ಅವಧಿಯಲ್ಲಿ ನಡೆದಿತ್ತು. ಆಗಲೂ ಏನೂ ಸಮಸ್ಯೆಗಳಾಗಲಿಲ್ಲ. ಇದನ್ನೇ ಸ್ವಲ್ಪ ವಿಸ್ತರಿಸಿ ನೋಡಿದರೆ, ಇಡೀ ದೇಶದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಸುವುದು ಖಂಡಿತ ಸಾಧ್ಯವಿದೆ ಎಂಬ ಅರಿವು ಉಂಟಾಗುತ್ತದೆ.
ವಿಶ್ವಾಸ ಮತವಿಲ್ಲದೆ ಸರಕಾರ ಬಿದ್ದುಹೋಗುವ ಸಂದರ್ಭ ಸೇರಿದಂತೆ ಭವಿಷ್ಯದಲ್ಲಿ ಎದುರಾಗಬಹುದಾದ ಅನೇಕ ಸಮಸ್ಯೆಗಳಿಗೆ ಕೋವಿಂದ್ ಸಮಿತಿ ಪರಿಹಾರಗಳನ್ನು ಸೂಚಿಸಿದೆ. ಇನ್ನಷ್ಟು ಸಮಸ್ಯೆಗಳು ಎದುರಾದರೆ, ಆ ಬಗ್ಗೆ ಚಿಂತನೆ ನಡೆಸಲು ಅವಕಾಶ ಇದ್ದೇ ಇದೆ.
ಬೆಂಬಲಿಸಿದ್ದ ಸಿಎಂ ಸಿದ್ದರಾಮಯ್ಯ!ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕ್ರಮವನ್ನು ಬೆಂಬಲಿಸಿ ಈ ಹಿಂದೆ ಮಾತನಾಡಿದ್ದರು. ಆದರೆ ಅದೇ ವ್ಯವಸ್ಥೆಯಲ್ಲಿ ಅವರಿಗೆ ದಿಢೀರನೆ ಹುಳುಕು ಕಾಣುತ್ತಿದೆ. 2016ರ ಜುಲೈಯಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಹೀಗೆ ಹೇಳಿದ್ದರು:
ಏಕಕಾಲದ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಅಭಿಪ್ರಾಯ ಹಾಗೂ ನನ್ನ ಅಭಿಪ್ರಾಯ ಒಂದೇ. ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲಕ್ಕೆ ನಡೆಸುವ ಚುನಾವಣೆ, ವೆಚ್ಚವನ್ನು ಕಡಿಮೆ ಮಾಡಿ ಸರಕಾರಕ್ಕೆ ನೆರವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ತಾಲೂಕು, ಜಿಲ್ಲಾ ಪಂಚಾಯತ್‌ಚುನಾವಣೆ, ಲೋಕಸಭೆ, ರಾಜ್ಯಸಭೆ ಚುನಾವಣೆ ನೀತಿ ಸಂಹಿತೆಯಿಂದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿವೆ. ಏಕಕಾಲ ಚುನಾವಣೆ ನಡೆಯುವುದು ಉತ್ತಮ ನಿರ್ಧಾರವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಈ ಬಗ್ಗೆ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಬೇಕು. … ಹೀಗೆ ಹೇಳಿದ್ದ ಸಿಎಂ ಸಿದ್ದರಾಮಯ್ಯ ಈಗ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ. ರಾಜಕೀಯವನ್ನು ಬದಿಗಿಟ್ಟು ಜನ ಕಲ್ಯಾಣದ ಕನ್ನಡಕವನ್ನು ಧರಿಸಿ ಈ ಬಗ್ಗೆ ಚಿಂತನೆ ನಡೆಸುವುದು ಈಗಿನ ಅಗತ್ಯ. -ಆರ್. ಅಶೋಕ ವಿಧಾನಸಭೆ ವಿಪಕ್ಷ ನಾಯಕ