ಬೆಂಗಳೂರು:ನಿರೀಕ್ಷೆಯಂತೆ ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರುಗಳಿಸಿದ್ದ ಡಿಸಿಪಿ ಅಣ್ಣಾಮಲೈ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಬೆಳಗ್ಗೆ ಡಿಜಿ-ಐಜಿಪಿಯನ್ನು ಭೇಟಿಯಾಗಿ ಅಣ್ಣಾಮಲೈ ಅವರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೂ ವಿಷಯ ತಿಳಿಸಿದ್ದೇನೆ. ಆದರೆ ನಿಮ್ಮ ಸೇವೆಯ ಅಗತ್ಯವಿದೆ, ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದರು. ನಾನು ನಿರ್ಧಾರ ಕೈಗೊಂಡಾಗಿದೆ. ಒಂದು ಬಾರಿ ರಾಜೀನಾಮೆ ಕೊಟ್ಟ ಮೇಲೆ ಮತ್ತೆ ನಿರ್ಧಾರ ಬದಲಿಸಲ್ಲ ಎಂದು ವಿನಂತಿಸಿಕೊಂಡಿದ್ದೇನೆ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ರಾತ್ರಿಯೇ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಬಿತ್ತರವಾಗಿತ್ತು. ಅಲ್ಲದೇ ಡಿಎಂಕೆ ಸೇರುತ್ತಾರೆ ಎಂಬ ಊಹಾಪೋಹ ಹಬ್ಬಿತ್ತು.
ಮಧುಕರ್ ಶೆಟ್ಟಿ ಸಾವು ಅಣ್ಣಾಮಲೈಯವರನ್ನು ಕಂಗೆಡಿಸಿತ್ತೇ?:
Related Articles
ನಾನು ರಾಜೀನಾಮೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದೇನೆ. ನಾನು ಕಳೆದ ಆರು ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಯಿತು. ನಾನು ಒಂಬತ್ತು ವರ್ಷಗಳ ಕಾಲ ನಿಷ್ಠೆಯಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಪ್ರತಿಯೊಂದು ಹಂತದಲ್ಲಿಯೂ ನಾನು ಖಾಕಿಯ ಜೊತೆಗೆ ಬದುಕಿದ್ದೆ. ಇದು ದೇವರಿಗೆ ಸಮನಾದ ಕೆಲಸ. ಅಷ್ಟೇ ಅಲ್ಲ ಇದೊಂದು ಒತ್ತಡದ ಕ್ಷೇತ್ರವೂ ಹೌದು. ನನಗೆ ಕರ್ನಾಟಕದ ಜನರ ಬಗ್ಗೆ ತುಂಬಾ ಪ್ರೀತಿಯಿದೆ.
ನಾನು ಕಳೆದ ವರ್ಷ ಕೈಲಾಸ ಮಾನಸಸರೋವರಕ್ಕೆ ಭೇಟಿ ನೀಡಿದ್ದಾಗ..ನನಗೆ ಜ್ಞಾನೋದಯವಾಯಿತು. ಹೌದು ನಾನು ನನ್ನ ಜೀವನದಲ್ಲಿ ಇನ್ನು ಏನನ್ನಾದರೂ ಹೆಚ್ಚಿನದನ್ನು ಸಾಧಿಸಬೇಕೆಂಬ ಇಚ್ಛೆ ಮೊಳಕೆಯೊಡೆದಿತ್ತು. ಅಲ್ಲದೇ ಮಧುಕರ ಶೆಟ್ಟಿ ಅವರ ಸಾವು ನನಗೆ ಈ ಹಾದಿಯನ್ನು ತೋರಿಸಿದೆ. ಎಲ್ಲಾ ಒಳ್ಳೆಯ ನಿರ್ಧಾರದ ಹಿಂದೆಯೂ ಒಂದು ಕಾರಣವಿರುತ್ತದೆ. ಹೀಗಾಗಿ ನನ್ನ ಖಾಕಿ ಸೇವೆ ಸಾಕು ಅಂತ ಅನ್ನಿಸಿದೆ. ನನ್ನ ರಾಜೀನಾಮೆಯಿಂದ ನಿಮಗೆ ಬೇಸರ ತಂದಿದ್ದರೆ, ನಾನು ಕ್ಷಮಾಪಣೆ ಕೇಳುತ್ತಿದ್ದೇನೆ. ನನ್ನ ರಾಜೀನಾಮೆ ನಿರ್ಧಾರ ಪತ್ನಿ ಹಾಗೂ ನನ್ನ ಆತ್ಮೀಯ ಗೆಳೆಯರಿಗೆ, ನನಗೆ ತುಂಬಾ ದುಃಖತಪ್ತ ಸಮಯಕ್ಕೆ ಕಾರಣವಾಗಿದೆ.
ಮುಂದೇನು?
ಬಹಳ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳಲು ನಾನೊಬ್ಬ ಸಣ್ಣ ಮನುಷ್ಯ. ನಾನು ಜೀವನದಲ್ಲಿ ಕಳೆದುಕೊಂಡಿರುವ ಸಣ್ಣ ಪುಟ್ಟ ಸಂತೋಷಗಳನ್ನು ಮತ್ತೆ ಪಡೆಯಲು ಸಮಯ ಕಳೆಯಬೇಕು.ಬೆಳೆಯುತ್ತಿರುವ ನನ್ನ ಮಗನಿಗೆ ಒಳ್ಳೆ ತಂದೆಯಾಗಬೇಕು. ಆತನಿಗೆ ನನ್ನ ಅಗತ್ಯವಿದೆ.
ಮತ್ತೆ ಮನೆಗೆ ಮರಳುವ ಮೂಲಕ ಕೃಷಿ ಮಾಡಬೇಕು. ನಾನೀಗ ಪೊಲೀಸ್ ಅಧಿಕಾರಿಯಲ್ಲ. ನಾನು ಆತ್ಮೀಯ ಜನರಿಂದ ದೂರಾಗುತ್ತಿದ್ದೇನೆ. ಕಾರ್ಕಳ, ಉಡುಪಿ-ಚಿಕ್ಕಮಗಳೂರು, ಬೆಂಗಳೂರಿನಲ್ಲಿ ನಾನು ಸೇವೆ ಸಲ್ಲಿಸಿದ್ದೇನೆ. ಹಿರಿಯ ಅಧಿಕಾರಿಗಳನ್ನು, ನನ್ನ ಕಿರಿಯ ಸಹೋದ್ಯೋಗಿಗಳನ್ನು, ಕಾನ್ ಸ್ಟೇಬಲ್ ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕರ್ತವ್ಯದ ವೇಳೆ ನಾನು ಯಾರಿಗಾದರೂ ನೋವನ್ನುಂಟು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಅಣ್ಣಾಮಲೈ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.