ಚಿತ್ರರಂಗಕ್ಕೆ ಧುಮುಕಿದವರು ಯಾವಾಗ, ಏನಾಗ್ತಾರೆ ಅಂತ ಹೇಳುವುದು ಕಷ್ಟ. ಇಲ್ಲಿ ನಿರ್ದೇಶಕರು ಹೀರೋ ಆಗಿದ್ದಾರೆ. ನಿರ್ಮಾಪಕರು ನಿರ್ದೇಶಕರಾಗಿದ್ದೂ ಉಂಟು, ಹೀರೋಗಳು ನಿರ್ದೇಶನದ ಜತೆಗೆ ನಿರ್ಮಾಪಕರಾಗಿದ್ದೂ ಹೌದು. ಗಾಯಕರು ತೆರೆಮೇಲೆ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ ಕೂಡ.
ಈಗ ಗಾಯಕ ಶಶಾಂಕ್ ಶೇಷಗಿರಿ ಸರದಿ. ಹಾಗಂತ, ಇವರು ಹೀರೋ ಆಗುತ್ತಿಲ್ಲ. ಬದಲಾಗಿ ಅವರೀಗ ಸಂಗೀತ ನಿರ್ದೇಶಕರಾಗಿದ್ದಾರೆ. ಹೌದು, ಕನ್ನಡದ ಅಪ್ಪಟ ಗಾಯಕ ಶಶಾಂಕ್ ಶೇಷಗಿರಿ, ಇದೀಗ ಸಂಗೀತ ನಿರ್ದೇಶಕರಾಗಿದ್ದಾರೆ. “ಎಂಸಿಬಿ’ (ಮಿಡಲ್ ಕ್ಲಾಸ್ ಬಾಯ್ಸ) ಎಂಬ ವಿಡಿಯೋ ಆಲ್ಬಂಗೆ ಸಂಗೀತ ನೀಡುವ ಮೂಲಕ ಸಂಗೀತ ಸಂಯೋಜಕರಾಗಿದ್ದಾರೆ. ಅಷ್ಟೇ ಅಲ್ಲ, ಅವರ ಕೈಯಲ್ಲೀಗ ಕನ್ನಡದ ನಾಲ್ಕು ಚಿತ್ರಗಳಿವೆ.
ಆ ಪೈಕಿ ಭುವನ್ ಪೊನ್ನಣ್ಣ ಅಭಿನಯದ “ರಾಂಧವ’ ಎಂಬ ಹೊಸಬರ ಸಿನಿಮಾಗೆ ಮೊದಲ ಸಲ ಸಂಗೀತ ನೀಡುತ್ತಿದ್ದಾರೆ ಶಶಾಂಕ್ ಶೇಷಗಿರಿ. ಸುನೀಲ್ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಶಶಾಂಕ್ ಐದು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಈಗಾಗಲೇ ಹಾಡುಗಳು ರೆಡಿಯಾಗಿದ್ದು, ಸಿನಿಮಾ ಮುಹೂರ್ತಕ್ಕೂ ಮುನ್ನವೇ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ಹೊಸ ತಂಡದ್ದು.
ಅಂದಹಾಗೆ, ಶಶಾಂಕ್ ಶೇಷಗಿರಿ ಇದುವರೆಗೆ 350 ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡಿದ್ದಾರೆ. 2007 ರಲ್ಲಿ “ಹಾಡಿನ ಬಂಡಿ’ ಮೂಲಕ ಗಾಯನ ಜರ್ನಿ ಶುರುಮಾಡಿದ ಶಶಾಂಕ್ ಹಾಡಿದ ಮೊದಲ ಚಿತ್ರ ನಾಗೇಂದ್ರ ಪ್ರಸಾದ್ ನಿರ್ದೇಶನದ “ಮೇಘವೇ ಮೇಘವೇ’. ಅಲ್ಲಿಂದ ಕನ್ನಡದ ಸ್ಟಾರ್ ನಟರಾದ ಶಿವರಾಜಕುಮಾರ್, ಸುದೀಪ್, ಪುನೀತ್, ದರ್ಶನ್, ಯಶ್ ಸೇರಿದಂತೆ ಅನೇಕ ಹೀರೋಗಳ ಚಿತ್ರಗಳಿಗೆ ಹಾಡಿದ್ದಾರೆ. ವಿಶೇಷವೆಂದರೆ, ಹೀರೋ ಇಂಟ್ರಡಕ್ಷನ್ ಸಾಂಗ್ ಹಾಡಿರುವುದು ಇವರ ಹೆಗ್ಗಳಿಕೆ.
365 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಶಶಾಂಕ್ ಶೇಷಗಿರಿ ಅವರಿಗೆ “ಬೆಳ್ಳಿ’ ಚಿತ್ರದ “ಡೂನ ಡೂನ..’ ಹಾಡಿಗೆ ಮಿರ್ಚಿ ಅವಾರ್ಡ್ ಸಿಕ್ಕಿದೆ. “ದೇವದಾಸ್’ ಚಿತ್ರದ “ನಿಮ್ಮಪ್ಪನ ಗಂಟು ಎಲ್ಲೂ ಹೋಗಲ್ವ..’ ಹಾಡಿಗೆ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ. ದುನಿಯಾ ವಿಜಯ್ ಅಭಿನಯದ “ಜರಾಸಂಧ’ ಚಿತ್ರದಲ್ಲಿ ಹಾಡಿದ “ಯಾರಾದ್ರೂ ಹಾಳಾಗೋಗ್ಲಿ..’ ಹಾಡು ಇವರಿಗೆ ಹೆಸರು ತಂದುಕೊಟ್ಟಿತು.
ಅಲ್ಲಿಂದ ಸಾಕಷ್ಟು ಹಾಡುಗಳನ್ನು ಹಾಡಿರುವ ಶಶಾಂಕ್, ಗುರುಕಿರಣ್ ಒಬ್ಬರನ್ನು ಹೊರತುಪಡಿಸಿ, ಕನ್ನಡದ ಬಹಳಷ್ಟು ಸಂಗೀತ ನಿರ್ದೇಶಕರಿಗೆ ಹಾಡಿದ್ದಾರೆ. “ರಾಜಕುಮಾರ’ ಚಿತ್ರದ “ಯಾರಿವನು ಕನ್ನಡದವನು…’ ಹಾಡಿಗೆ ದನಿಯಾಗಿರುವ ಶಶಾಂಕ್ ಶೇಷಗಿರಿ, ತಮಿಳು, ತುಳು, ಹಿಂದಿಯಲ್ಲೂ ಹಾಡಿದ್ದಾರೆ.
ಅಕ್ಷಯ್‌ಕುಮಾರ್, ಕತ್ರಿನಾಕೈಫ್ ಅಭಿನಯದ “ಜಾಸ್ಮಿನ್’ ಚಿತ್ರಕ್ಕೆ ಶಶಾಂಕ್ ಹಾಡಿದ್ದರು. ಆದರೆ, ಆ ಸಿನಿಮಾ ಕಾರಣಾಂತರದಿಂದ ನಿಂತುಹೋಗಿದೆ. ಮಾಸ್ ಹೀರೋಗಳ ಇಂಟ್ರಡಕ್ಷನ್ ಸಾಂಗ್‌ಗೆ ಬ್ರಾಂಡ್ ಆಗಿದ್ದ ಶಶಾಂಕ್ ಶೇಷಗಿರಿ, ಅಜನೀಶ್ ಲೋಕನಾಥ್ “ಶ್ರೀಕಂಠ’ದಲ್ಲಿ ಕೊಟ್ಟ “ಅಂತರಂಗದೂರಿಗೆ..’ ಎಂಬ ಮೆಲೋಡಿ ಹಾಡನ್ನೂ ಹಾಡಿದ್ದಾರೆ.