ಮುಂಬಯಿ :ಕೆಕೆ ಎಂಬ ಹೆಸರಿನಿಂದ ಚಿರಪರಿಚಿತರಾಗಿರುವ ಪ್ರಖ್ಯಾತ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಂತ್ಯಕ್ರಿಯೆಯನ್ನು ಅವರ ಕುಟುಂಬ ಮತ್ತು ಚಿತ್ರರಂಗದ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಗುರುವಾರ ಮಧ್ಯಾಹ್ನ ನೆರವೇರಿಸಲಾಯಿತು.
ಜನಪ್ರಿಯ ಗಾಯಕನ ಅಂತ್ಯಕ್ರಿಯೆಯನ್ನು ಪಾರ್ಕ್ ಪ್ಲಾಜಾ ಅಪಾರ್ಟ್ಮೆಂಟ್ನಲ್ಲಿರುವ ಅವರ ಮನೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಮುಂಬಯಿಯ ವರ್ಸೋವಾ ಹಿಂದೂ ಸ್ಮಶಾನದಲ್ಲಿ ನಡೆಸಲಾಯಿತು.
ಹೂವುಗಳಿಂದ ಅಲಂಕರಿಸಲ್ಪಟ್ಟ ಆಂಬ್ಯುಲೆನ್ಸ್ ನಲ್ಲಿ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.ಅಂತ್ಯಕ್ರಿಯೆಯನ್ನು ಕೆಕೆ ಅವರ ಪುತ್ರ ನಕುಲ್ ನೆರವೇರಿಸಿದರು.
ಚಿತ್ರ ನಿರ್ಮಾಪಕ ವಿಶಾಲ್ ಭಾರದ್ವಾಜ್ ಪತ್ನಿ ರೇಖಾ, ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್, ಜಾವೇದ್ ಅಖ್ತರ್, ಶಂಕರ್ ಮಹಾದೇವನ್, ಉದಿತ್ ನಾರಾಯಣ್, ಅಭಿಜೀತ್ ಭಟ್ಟಾರಾಚಾರ್ಯ ಮತ್ತು ಇತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಸಂಗೀತಗಾರರಾದ ಶ್ರೇಯಾ ಘೋಷಾಲ್, ಸಲೀಂ ಮರ್ಚೆಂಟ್, ಅಲ್ಕಾ ಯಾಗ್ನಿಕ್, ರಾಹುಲ್ ವೈದ್ಯ, ಜಾವೇದ್ ಅಲಿ, ಪಾಪೋನ್, ಶಂತನು ಮೊಯಿತ್ರಾ ಮತ್ತು ಸುದೇಶ್ ಭೋಸ್ಲೆ ಅವರ ನಿವಾಸದಲ್ಲಿ ಗಾಯಕನಿಗೆ ಗೌರವ ನಮನ ಸಲ್ಲಿಸಿದರು.
53ರ ಹರೆಯದ ಗಾಯಕ ಮಂಗಳವಾರ ರಾತ್ರಿ ಕೋಲ್ಕತಾದಲ್ಲಿ ಸಂಗೀತ ಕಚೇರಿಯ ನಂತರ ನಿಧನ ಹೊಂದಿದ್ದರು. ಆ ವಿಚಾರ ಉದ್ಯಮ ಮತ್ತು ಅವರ ಅಭಿಮಾನಿಗಳನ್ನು ಆಘಾತಕ್ಕೊಳಗಾಗುವಂತೆ ಮಾಡಿದೆ.