ಕಂಬಳ ಎಂಬ ಭಿನ್ನವಾದ ಸಂಸ್ಕೃತಿಯನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡುತ್ತಿರುವುದು ಖುಷಿಯ ಜೊತೆಗೆ ಹೆಮ್ಮೆ ಎಂದೆನಿಸುತ್ತದೆ. ಬೆಂಗಳೂರಿನ ಕಂಬಳದ ಜೊತೆಗೆ ಹಮ್ಮಿಕೊಂಡಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇದರ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿವೆ. ರಾಜ್ಯದ ಜನತೆ ಕಂಬಳದಲ್ಲಿ ಭಾಗವಹಿಸಿ ಆನಂದಿಸಿ… ಇದು ಸಂಗೀತ ನಿರ್ದೇಶಕ ಗುರುಕಿರಣ್ ಮಾತು. ಬೆಂಗಳೂರು ಕಂಬಳ ಸಮಿತಿ ಕಾರ್ಯಾಧ್ಯಕ್ಷ. ಸಂಗೀತ ನಿರ್ದೇಶಕ ಗುರುಕಿರಣ್ ಕಂಬಳದ ಕುರಿತ ತಮ್ಮ ಅನುಭವ, ಅನಿಸಿಕೆಯನ್ನು “ಉದಯವಾಣಿ’ ನಡೆಸಿದ ಕಿರು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಕಂಬಳದ ಬಗ್ಗೆ ಗುರುಕಿರಣ್ ಅನುಭವ, ಅಭಿಪ್ರಾಯವೇನು?
ಬಾಲ್ಯದಲ್ಲೇ ಕಂಬಳ ಎಂಬುದು ಬಹಳ ಇಷ್ಟವಾದ ಸಂಸ್ಕೃತಿ. ನಾನು ಕರಾವಳಿ ಭಾಗದವನಾಗಿರುವುದರಿಂದ ಚಿಕ್ಕ ವಯಸ್ಸಿನಲ್ಲೇ ಕಂಬಳ ನೋಡಿಕೊಂಡು ಬೆಳೆದಿದ್ದೇನೆ. ಆದರೆ, ಮನೆಯಲ್ಲಿ ಕಂಬಳಕ್ಕೆ ಹೋಗಲು ಅವಕಾಶ ಕೊಡುತ್ತಿರಲಿಲ್ಲ. ಹೀಗಾಗಿ, ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಕದ್ದು ಹೋಗಿ ನೋಡುತ್ತಿದ್ದೆವು. ಮನೆಗೆ ಬರುವಾಗ ಕೈ-ಕಾಲು ತುಂಬಾ ಕೆಸರಾಗುತ್ತಿದ್ದ ಹಿನ್ನೆಲೆ ಕಂಬಳಕ್ಕೆ ಹೋಗಿರುವ ವಿಚಾರ ಎಲ್ಲರಿಗೂ ಗೊತ್ತಾಗುತ್ತಿತ್ತು. ಆ ರೋಮಾಂಚನಕಾರಿ ಕ್ಷಣಗಳ ಅನುಭವಗಳನ್ನು ಮಾತುಗಳಲ್ಲಿ ಹೇಳಲು ಅಸಾಧ್ಯ. ಅವುಗಳನ್ನು ಅನುಭವಿಸಿಯೇ ನೋಡಬೇಕು.
ಕಂಬಳದ ವೈಭವ, ಅಲ್ಲಿನ ಆಚಾರ-ವಿಚಾರದ ಬಗ್ಗೆ ನಿಮಗೆ ಏನನ್ನಿಸುತ್ತಿದೆ?
ಹಿಂದೆ ಕರಾವಳಿ ಭಾಗದಲ್ಲಿ ಕಂಬಳ ನಡೆಯುವ ವೇಳೆ ಅಲ್ಲಿನ ಬ್ಯಾಂಡ್ ಚೆಂಡೆ, ಕಹಳೆ ಸುಮಾರು 2 ಕಿ.ಮೀ. ದೂರದವರೆಗೆ ಕಿವಿಗೆ ಬೀಳುತ್ತಿದ್ದವು. ಅದನ್ನು ಕೇಳಿದಾಗ ಮೈನವಿರೇಳಿಸುವ ಅನುಭವವಾಗುತ್ತಿತ್ತು. ಆ ಶಬ್ದಕ್ಕೆ ನಮ್ಮ ಕೈ ಕಾಲುಗಳು ತನ್ನಷ್ಟಕ್ಕೆ ಹೆಜ್ಜೆ ಹಾಕುತ್ತಿದ್ದವು.
ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿರುವ ಬಗ್ಗೆ ಏನು ಹೇಳಲು ಬಯಸುತ್ತೀರಿ? ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವುದು ಎಲ್ಲರಿಗೂ ಖುಷಿ ಇರುತ್ತದೆ. ಖುಷಿ ಎಲ್ಲರಿಗೂ ಹಂಚೋಣ ಎಂದು ನಾನು ಭಾಗಿಯಾದೆ. ಇದರಲ್ಲಿ ಕಂಬಳ ಬಿಟ್ಟು ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದರ ಜೊತೆಗೆ ವಸ್ತುಪ್ರದರ್ಶನ, ಕರಾವಳಿ ಸಂಸ್ಕೃತಿ ಬಿಂಬಿಸುವ ಒಂದಿಷ್ಟು ಚಟುವಟಿಕೆಗಳನ್ನು ಕಣ್ತುಂಬಿಕೊಳ್ಳಬಹುದು.
ಕರಾವಳಿಯ ಭಾಗದಲ್ಲಿರುವ ಕಂಬಳವು ಬೇರೆಡೆ ಬಂದಿರುವುದರಿಂದ ಉದ್ಯಮದ ರೂಪ ಪಡೆಯುವ ಸಾಧ್ಯತೆ ಇದೆಯಾ?
ಬೆಂಗಳೂರಿನಲ್ಲಿ ಕಂಬಳದಲ್ಲಿ ಬಹಳಷ್ಟು ಶ್ರಮವಹಿಸಿ ಕಂಬಳ ಆಯೋಜನೆ ಮಾಡಿದ್ದೇವೆ. ನಮ್ಮ ಆಪ್ತವಲಯದಲ್ಲಿರುವ ನೂರಾರು ಮಂದಿ ಸೇರಿಕೊಂಡು ಒಂದಿಷ್ಟು ಕೊಡುಗೆಗಳನ್ನು ನೀಡಿ ಕಂಬಳವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಕೈ ಹಾಕಿದ್ದೇವೆ ಎಂದೆನಿಸುತ್ತದೆ. ಟಿಕೆಟ್ ಇಲ್ಲದೇ ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕಂಬಳ ಕಮರ್ಷಿಯಲ್ ರೂಪ ಪಡೆದಿಲ್ಲ. ಪಡೆಯುವ ಸಾದ್ಯತೆಗಳೂ ಇಲ್ಲ ಎಂದು ನನಗೆ ಅನ್ನಿಸುತ್ತದೆ.
ಪ್ರತಿವರ್ಷವೂ ಮುಂದುವರಿಸುವ ಯೋಚನೆ ಇದೆಯಾ? ಬೆಂಗಳೂರು ಕಂಬಳಕ್ಕೆ ಬರುವ ಪ್ರತಿಕ್ರಿಯೆ ಮೇಲೆ ಮುಂದಿನ ನಿಲುವು ಪಡೆದುಕೊಳ್ಳಲಾಗುವುದು. ಈಗ ಆ ಬಗ್ಗೆ ಯೋಚನೆ ಮಾಡಿಲ್ಲ. ಕಂಬಳವನ್ನು ಸಾಕಷ್ಟು ಜನ ವೀಕ್ಷಿಸಿ ಖುಷಿ ಪಡುತ್ತಾರೆ ಎಂದು ಅಂದುಕೊಂಡಿದ್ದೇನೆ.